ಮೈಸೂರು,ಫೆಬ್ರವರಿ,8,2025 (www.justkannada.in): ನರೇಗಾ ದಿನಾಚರಣೆ ಅಂಗವಾಗಿ 2023-24 ನೇ ಸಾಲಿನಲ್ಲಿ ನರೇಗಾ ಯೋಜನೆ ಅತ್ಯುತ್ತಮ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯಿತಿ ಮೈಸೂರು ವತಿಯಿಂದ ನೀಡುವ ಪ್ರಶಸ್ತಿ ಪುರಸ್ಕಾರದಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿಯು 4,08,890 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಮೈಸೂರು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಮೈಸೂರು ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆ-2024-25ರ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೆ ಗಾಯತ್ರಿ ಅವರು ಕಾರ್ಯನಿರ್ವಾಹ ಅಧಿಕಾರಿ ಧರಣೇಶ್ ಎಸ್.ಪಿ ಅವರಿಗೆ ಪದಕ ಹಾಗೂ ಪ್ರಶಂಸನೀಯ ಪತ್ರ ನೀಡಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳ ಪೈಕಿ ಚಿಕ್ಕೋಡನಹಳ್ಳಿ ಗ್ರಾಮ ಪಂಚಾಯಿತಿಯು 41,119 ಮಾನವದಿನಗಳನ್ನು ಸೃಜನೆ ಮಾಡಿರುವುದುಕ್ಕೆ ಪ್ರಶಸ್ತಿ ಪಡೆದುಕೊಂಡಿತು.
ತಾಲ್ಲೂಕು ಮಟ್ಟದ ಅನುಷ್ಠಾನ ಇಲಾಖೆಗಳಲ್ಲಿ ಹೆಚ್.ಡಿ ಕೋಟೆ ಸಾಮಾಜಿಕ ಅರಣ್ಯ ಇಲಾಖೆಯು 64,825 ಮಾನವ ದಿನಗಳನ್ನು ಸೃಜನೆ ಮಾಡಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲನಹಳ್ಳಿ ಗ್ರಾಮದ ಶಿವರಾಜು ಕೋಂ ರಾಜಪ್ಪ ಅವರಿಗೆ (ರೇಷ್ಮೆ ಇಲಾಖೆ) ವೈಯಕ್ತಿ ಫಲಾನುಭವಿ ಪ್ರಶಸ್ತಿ ದೊರೆತಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಪ್ರಶಸ್ತಿ ಪ್ರೇರಣೆಯಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್ ಎಸ್.ಪಿ ಅವರು ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮಾರ್ಗದರ್ಶನ ಹಾಗೂ ಜಿಲ್ಲಾ ಪಂಚಾಯತಿಯ ಹಿರಿಯ ಅಧಿಕಾರಿಗಳ ಸಲಹೆ ಸೂಚನೆಯಿಂದ ಜಿಲ್ಲೆಯಲ್ಲೆ ಹೆಚ್.ಡಿ.ಕೋಟೆ ಪ್ರಥಮ ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆ. ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಂಪರ್ಕಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಟ್ಟಾರೆ ಮನರೇಗಾ ತಂಡಕ್ಕೆ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ ಕೃಷ್ಣರಾಜು, ಉಪಕಾರ್ಯದರ್ಶಿ(ಆಡಳಿತ) ಸವಿತಾ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಎಲ್ಲಾ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Key words: NREGA, scheme, implementation, H.D. Kote, first
The post ನರೇಗಾ ಯೋಜನೆ ಅನುಷ್ಠಾನ: ಹೆಚ್.ಡಿ.ಕೋಟೆಗೆ ಪ್ರಥಮ ಸ್ಥಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.