ಮೈಸೂರು,ಜೂನ್,11,2025 (www.justkannada.in): ನಾಳೆ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜುಗಳಿಗೆ ADB ಬ್ಯಾಂಕ್ ಸದಸ್ಯರ ತಂಡ ಭೇಟಿ ನೀಡಲಿದ್ದು ಚರ್ಚೆ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್(ADB) ನಡುವೆ ಆಗಿರುವ ಒಡಂಬಡಿಕೆಯ ಭಾಗವಾಗಿ ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಅಂದರೆ 2023ರಲ್ಲಿ ಪ್ರಾರಂಭವಾದ ಈ ಯೋಜನೆಯ ಪೂರ್ವಭಾವಿ ತಯಾರಿ ಎಲ್ಲವೂ ಪೂರ್ಣಗೊಂಡಿದ್ದು ಇದೀಗ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕರ್ನಾಟಕದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 107 ಪಾಲಿಟೆಕ್ನಿಕ್ ಕಾಲೇಜುಗಳು ಹಾಗೂ 16 ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಮೂಲಭೂತ ಸೌಕರ್ಯಗಳ ಉನ್ನತೀಕರಣ, ವಿದ್ಯಾರ್ಥಿನಿಯರಲ್ಲಿ ಉದ್ಯೋಗ ಕೌಶಲ್ಯಗಳ ಅಭಿವೃದ್ಧಿಗಾಗಿ 2500 ಕೋಟಿ ರೂಪಾಯಿಗಳನ್ನು ADB ಬ್ಯಾಂಕ್ ಸಾಲವಾಗಿ ಕರ್ನಾಟಕ ಸರ್ಕಾರಕ್ಕೆ ಒದಗಿಸುತ್ತಿದೆ.
ಈ ಹಿನ್ನೆಲೆಯಲ್ಲಿ ADB ಬ್ಯಾಂಕ್ ನ 9 ಸದಸ್ಯರ ತಂಡವು ಜೂನ್ 12(ನಾಳೆ) ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜುಗಳಿಗೆ ಭೇಟಿ ನೀಡುತ್ತಿದೆ. ಕಾಲೇಜಿನ ಪ್ರಾಂಶುಪಾಲರ ಜೊತೆಗೆ ಚರ್ಚೆ, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು, ಹಳೆ ವಿದ್ಯಾರ್ಥಿನಿಯರು ಹಾಗೂ ಪೋಷಕರ ಜೊತೆಗೆ ಚರ್ಚೆ ಮತ್ತು ಸಂವಾದವನ್ನು ನಡೆಸಲಿದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ. ಜಗದೀಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಮತ್ತು ನಿರ್ದೇಶಕರಾದ ಪ್ರೊ. ಶೋಭಾ ಅವರು ADB ತಂಡದ ಜೊತೆಗೆ ಕಾಲೇಜುಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜು ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
Key words: team, ADB Bank, members, visits, Mysore Maharani College
The post ನಾಳೆ ಮೈಸೂರು ಮಹಾರಾಣಿ ಕಾಲೇಜಿಗೆ ADB ಬ್ಯಾಂಕ್ ಸದಸ್ಯರ ತಂಡ ಭೇಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.