ಮೈಸೂರು,ಮೇ,26,2025 (www.justkannada.in): ಈ ಬಾರಿ ವಾಡಿಕೆಗಿಂತ ಮೊದಲೇ ನೈರುತ್ಯ ಮಾನ್ಸೂನ್ ಪ್ರವೇಶಿಸಿದ್ದು. ಆರಂಭವಾದ ದಿನದಿಂದಲೇ ಮಾನ್ಸೂನ್ ಮಳೆ ಅಬ್ಬರಿಸುತ್ತಿದೆ. ವರುಣಾರ್ಭಟಕ್ಕೆ ಜನ ಜೀವನ ತತ್ತರವಾಗಿದ್ದು ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಅರಬ್ಬೀ ಸಮಯದಲ್ಲಿ ವಾಯು ಭಾರ ಕುಸಿತ ಹಿನ್ನೆಲೆ, ರಾಜ್ಯಾದ್ಯಂತ ಇನ್ನು ಕೆಲ ದಿನಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ, ದಕ್ಷಿಣ ಒಳನಾಡು,ಉಡುಪಿ,ಮಂಗಳೂರು,ಕೊಡುಗು, ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.
ಈಗಾಗಲೇ ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆಯಾಗಿದ್ದು, ಕರಾವಳಿ, ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರಿ ಮಳೆಗೆ ಅಲ್ಲಲ್ಲಿ ಅವಾಂತರ ಉಂಟಾಗಿದ್ದು ಮರಗಳು,ವಿದ್ಯುತ್ ಕಂಬಗಳು, ಧರೆಗುರುಳಿದ್ದು, ಕೆಲವೆಡೆ ಪ್ರಾಣಹಾನಿ ಉಂಟಾಗಿದೆ.
ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ನದಿ ಮೂಲಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮೈಸೂರು ಮಂಡ್ಯ ಹಾಸನದಲ್ಲೂ ದಿನವಿಡಿ ಮಳೆರಾಯ ಅಬ್ಬರಿಸಿದ್ದು ಇಂದೂ ಕೂಡ ಮುಂದುವರಿದ ಜಿಟಿ ಜಿಟಿ ಮಳೆಯಾಗುತ್ತಿದೆ.
ದೈನಂದಿನ ಚಟುವಟಿಕೆಗಳಿಗೆ ಮಳೆರಾಯ ಅಡ್ಡಿಪಡಿಸಿದ್ದು ಕೆಲಸಕ್ಕೆ ತೆರಳುವವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದಿನಿಂದ ಆರಂಭವಾಗಬೇಕಿದ್ದ ಶಾಲೆಗಳಿಗೂ ರಜೆ ನೀಡಲಾಗಿದೆ. ಮಳೆ ಹಿನ್ನಲೆಯಲ್ಲಿ ಕೊಡಗು ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
Key words: monsoon, Heavy rains, another, week
The post ನೈರುತ್ಯ ಮಾನ್ಸೂನ್ ಅಬ್ಬರಕ್ಕೆ ಜನ ಜೀವನ ತತ್ತರ : ಇನ್ನೂ ಒಂದು ವಾರ ಭಾರಿ ಮಳೆ ಸಾಧ್ಯತೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.