ಬೆಂಗಳೂರು,ಏಪ್ರಿಲ್,12,2025 (www.justkannada.in): ದ್ವಿತೀಯ ಪಿಯುಸಿಯ ಮೊದಲನೇ ಪರೀಕ್ಷೆಯಲ್ಲಿ ನಿಗದಿತ ಅರ್ಹತೆ ಗಳಿಸದ ಅಥವಾ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳು 2 ಮತ್ತು 3ನೇ ಪರೀಕ್ಷೆಯಲ್ಲಿ ಆರ್ಹತೆ ಪಡೆಯಲು ಅವಕಾಶ ಇರುವ ಕಾರಣ, ಯಾರೆಲ್ಲ ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಿದ್ದೀರೊ ಅವರೆಲ್ಲರೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಹಾಜರಾಗಿ ಪರೀಕ್ಷೆ ಬರೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸಲಹೆ ನೀಡಿದ್ದಾರೆ.
ಹೊರನಾಡು ಕನ್ನಡಿಗರಿಗೆ ಇದೇ 15ರಂದು ಕನ್ನಡ ಹಾಗೂ 16 ಮತ್ತು 17ರಂದು ವಿಜ್ಞಾನ ವಿಷಯಗಳಿಗೆ ಸಿಇಟಿ ನಡೆಯುಲಿದ್ದು, ಪ್ರಾಧಿಕಾರ ಸಕಲ ರೀತಿಯ ತಯಾರಿ ನಡೆಸಿದೆ.
ದ್ವಿತೀಯ ಪಿಯುಸಿಯ ಮೊದಲನೇ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ ಎಂದು ಸಿಇಟಿ ಪರೀಕ್ಷೆ ಬರೆಯದೆ ಕೈಚೆಲ್ಲುವುದು ಸರಿಯಲ್ಲ. ದ್ವಿತೀಯ ಪಿಯುಸಿಯ ಎರಡನೇ ಮತ್ತು ಮೂರನೇ ಪರೀಕ್ಷೆ ಬರೆಯುವುದಕ್ಕೂ ಅವಕಾಶ ಇದ್ದು, ಅಲ್ಲಿ ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಬಹುದು. ಸಿಇಟಿ ಬರೆದಿದ್ದರೆ ಮಾತ್ರ ಪಿಯುಸಿಯ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೂ ಸಿಇಟಿ ರ್ಯಾಂಕ್ (Rank) ಕೊಟ್ಟು, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಮಾಡಬಹುದು. ಆದರೆ ಸಿಇಟಿಯೇ ಬರೆಯದಿದ್ದರೆ ರ್ಯಾಂಕ್ ಗೆ ಪರಿಗಣಿಸಲು ಆ ಸಂದರ್ಭದಲ್ಲಿ ಸಾಧ್ಯ ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಕಳೆದ ವರ್ಷ ಕೂಡ 3ನೇ ಪರೀಕ್ಷೆಯಲ್ಲಿ ಅರ್ಹತೆಯಾದ ಆನೇಕರಿಗೆ ರ್ಯಾಂಕ್(Rank) ಕೊಟ್ಟು, ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಿಇಟಿ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ಸಿಇಟಿ ಪರೀಕ್ಷೆ ಒಮ್ಮೆ ಮಾತ್ರ ನಡೆಸುವುದರಿಂದ ಅದನ್ನು ತಪ್ಪದೇ ಬರೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ವರ್ಷ 3.3 ಲಕ್ಷ ಅಭ್ಯರ್ಥಿಗಳು ಸಿಇಟಿ ಬರೆಯಲು ಶುಲ್ಕ ಪಾವತಿಸಿದ್ದು, ಅವರಲ್ಲಿ ಇದುವರೆಗೂ 2.85 ಲಕ್ಷ ಮಂದಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇನ್ನೂ ಸುಮಾರು 45 ಸಾವಿರ ಮಂದಿ ಡೌನ್ ಮಾಡಿಕೊಳ್ಳಬೇಕಾಗಿದೆ ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.
ಈ ವಿಷಯದಲ್ಲಿ ಪೋಷಕರು ಕೂಡ ಎಚ್ಚರವಹಿಸಬೇಕು. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಸರ್ಕಾರ ಇನ್ನೂ ಎರಡು ಅವಕಾಶ ನೀಡುತ್ತಿದೆ. ಹೀಗಾಗಿ ಒಮ್ಮೆ ಮಾತ್ರ ನಡೆಯುವ ಸಿಇಟಿ ಪರೀಕ್ಷೆಯಿಂದ ಯಾರೂ ವಿಮುಖರಾಗುವುದು ಬೇಡ ಎಂದೂ ಪ್ರಸನ್ನ ತಿಳಿಸಿದ್ದಾರೆ.
Key words: PUC result, chances, better, , CET, H. Prasanna
The post ಫಲಿತಾಂಶ ಉತ್ತಮಕ್ಕೆ ಇನ್ನೂ ಎರಡು ಅವಕಾಶ: ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ- ಎಚ್.ಪ್ರಸನ್ನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.