ಬೆಂಗಳೂರು,ಜೂನ್,26,2025 (www.justkannada.in): ಎಸ್ ಜೆ ಪಾಲಿಟೆಕ್ನಿಕ್ ನಲ್ಲಿರುವ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಕೋರ್ಸ್ ಗಳನ್ನು ಉನ್ನತೀಕರಿಸಿ, ಹೊಸ ಕೋರ್ಸ್ ಗಳನ್ನು ಅಳವಡಿಸಿ ಹೆಸರಘಟ್ಟದಲ್ಲಿರುವ ಕೇಂದ್ರವನ್ನು ನಗರ ವ್ಯಾಪ್ತಿಗೆ ಸ್ಥಳಾಂತರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್ ಹಾಗೂ ಎಸ್ ಜೆ ಪಾಲಿಟೆಕ್ನಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ತಂಡ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರನ್ನು ಭೇಟಿಯಾಗಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ವಿಭಾಗ ದೇಶದಲ್ಲೇ ಮೊದಲ ಆರಂಭಿಸಿದ ಶಿಕ್ಷಣ ಸಂಸ್ಥೆ. ಅದೀಗ, ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕೆಗೆ ಆಸಕ್ತಿ ಇದ್ದರೂ ಮೂಲಸೌಕರ್ಯಗಳ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿಲ್ಲ. ಹಾಗಾಗಿ ಆದಷ್ಟು ಶೀಘ್ರವಾಗಿ ಹೆಸರಘಟ್ಟದಲ್ಲಿರುವ ಕಲಿಕಾ ಕೇಂದ್ರವನ್ನು ಬೆಂಗಳೂರು ನಗರಕ್ಕೆ ಸ್ಥಳಾಂತರಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಸದ್ಯದಲ್ಲೇ ಹೆಸರುಘಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಗರ ವ್ಯಾಪ್ತಿ ಗೆ ಇನ್ಸ್ಟಿಟ್ಯೂಟ್ ಅನ್ನು ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಕಂಠೀರವ ಸ್ಟುಡಿಯೋದಲ್ಲಿ ಆರಂಭಿಸುವ ಬಗ್ಗೆಯೂ ಚರ್ಚಿಸಲಾಗುವುದು. ಸಿನಿಮಾಟೋಗ್ರಾಫಿ, ಸೌಂಡ್ ಇಂಜಿನಿಯರಿಂಗ್ ಕಲಿಕೆಗೆ ಸಾಕಷ್ಟು ಬೇಡಿಕೆ ಇರುವುದು ನನ್ನ ಗಮನದಲ್ಲಿದೆ. ಈ ನಿಟ್ಟಿನಲ್ಲಿ ಸಿನಿಮಾಕ್ಕೆ ಸಂಬಂಧಪಟ್ಟಂತಹ ಆಧುನಿಕ ತಂತ್ರಜ್ಞಾನಗಳ ಹೊಸ ಕೋರ್ಸ್ ಗಳನ್ನು ಅಧ್ಯಯನ ಮಾಡುವ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಂಠೀರವ ಸ್ಟುಡಿಯೋದಲ್ಲಿ ಫಿಲಂ ಇನ್ಸ್ಟಿಟ್ಯೂಟ್ ಆರಂಭಗೊಂಡರೆ ಕಲಿಕೆ ಜೊತೆಗೆ ಪ್ರಾಯೋಗಿಕ ಅನುಭವಕ್ಕೂ ಹೆಚ್ಚು ಅವಕಾಶ ದೊರಕಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿರ್ಧಾರಕ್ಕೆ ಬರಲಾಗುವುದು ಎಂದರು.
ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಐಎಎಸ್ ಅಧಿಕಾರಿ ಹೆಚ್ ಪ್ರಸನ್ನ ಹಾಗೂ ಚಿತ್ರನಟ ಶ್ರೀನಾಥ್ ಅವರೊಂದಿಗೆ ಎಸ್ ಜೆ ಪಾಲಿಟೆಕ್ನಿಕ್ ನಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
Key words: Film and Television Institute ,Actor, Shrinath, Minister, M.C. Sudhakar
The post ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಅನ್ನು ನಗರ ವ್ಯಾಪ್ತಿಗೆ ಸ್ಥಳಾಂತರಿಸಲು ಸೂಕ್ತ ಕ್ರಮ- ಸಚಿವ ಎಂ.ಸಿ ಸುಧಾಕರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.