12
December, 2025

A News 365Times Venture

12
Friday
December, 2025

A News 365Times Venture

ಫೈನಲ್ ಗೆಲ್ಲುವ ಮೊದಲೇ ವಿಜಯೋತ್ಸವಕ್ಕೆ RCB ಮನವಿ: ತೀವ್ರ ಅಚ್ಚರಿ ವ್ಯಕ್ತಪಡಿಸಿದ HDK

Date:

ಬೆಂಗಳೂರು,ಜೂನ್,7,2025 (www.justkannada.in): ಫೈನಲ್ ಪಂದ್ಯ ಆರಂಭವಾಗುವುದಕ್ಕೆ ಮೊದಲೇ ಆರ್ ಸಿಬಿ ಆಡಳಿತ ಮಂಡಳಿ ಕಡೆಯವರು ವಿಜಯೋತ್ಸವ ಮಾಡುತ್ತೇವೆ ಎಂದು ನಗರ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಗೆಲ್ಲುತ್ತೇವೆ ಎಂದು ಆರ್ ಸಿಬಿ ತಂಡಕ್ಕೆ ಕನಸು ಬಿದ್ದಿತ್ತಾ ಎಂದು ಪ್ರಶ್ನಿಸಿದ್ದಾರೆ.

ಐಪಿಎಲ್ ಫೈನಲ್ ಪಂದ್ಯ ಗೆಲ್ಲುವ ಮೊದಲೇ ವಿಜಯೋತ್ಸವಕ್ಕೆ ಆರ್ ಸಿಬಿ ಅನುಮತಿ ಕೇಳಿದ್ದ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ನಿನ್ನೆ ‘ಜಸ್ಟ್ ಕನ್ನಡ ಡಾಟ್ ಇನ್’ ವರದಿ ಬಿತ್ತರಿಸಿತ್ತು. ಐಪಿಎಲ್‌ ಫೈನಲ್ಸ್‌ ಗೂ ಮುನ್ನವೇ RCB ರಿಸಲ್ಟ್‌ ಫಿಕ್ಸ್‌ ಆಗಿತ್ತಾ..? ಎಂದು ವರದಿಯಾಗಿತ್ತು.

ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ.  ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಮಾಧ್ಯಮಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದ  ಹೆಚ್.ಡಿ ಕುಮಾರಸ್ವಾಮಿ,  ಅಹಮದಾಬಾದ್ ನಲ್ಲಿ ಫೈನಲ್ಸ್ ಪಂದ್ಯ ಆರಂಭವಾಗಿದ್ದು ಏಳೂವರೆ ಗಂಟೆಗೆ. ಇಲ್ಲಿ ನೋಡಿದರೆ ಆರು ಗಂಟೆಗೆಲ್ಲ ವಿಜಯೋತ್ಸವ ಮಾಡುತ್ತೇವೆ, ನಮಗೆ ಅನುಮತಿ ಕೊಡಿ ಪೊಲೀಸರಿಗೆ ಆರ್ ಸಿಬಿ ಅವರು ಅರ್ಜಿ ಕೊಡುತ್ತಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಅರ್ಜಿ ಹಾಕಿದ್ದಾರೆ. ಇದು ಹೇಗೆ ಸಾಧ್ಯ? ಪಂದ್ಯ ಆರಂಭಕ್ಕೆ ಮೊದಲೇ ಆರ್ ಸಿಬಿ ಆಡಳಿತ ಮಂಡಳಿಗೆ ತಮ್ಮ ತಂಡ ಗೆಲ್ಲುತ್ತದೆ ಎಂದು ಹೇಗೆ ಗೊತ್ತು? ಎಂದು ಪ್ರಶ್ನಿಸಿದರು.

ನಾವು ಗೆಲ್ಲುತ್ತೇವೆ ಎಂದು ಇವರಿಗೇನು ಕನಸು ಬಿದ್ದಿತ್ತಾ?

ನಾವು ಗೆಲ್ಲುತ್ತೇವೆ ಎಂದು ಇವರಿಗೇನು ಕನಸು ಬಿದ್ದಿತ್ತಾ? ಫೈನಲ್ ಗೆಲ್ತೀವಿ ಅಂತ ಮೊದಲೇ ಗೊತ್ತಿತ್ತಾ?  ಇನ್ನು ಫೈನಲ್ ಮ್ಯಾಚ್ ಶುರುನೇ ಆಗದೇ ಇವರು ಅರ್ಜಿ ಕೊಡುತ್ತಾರೆ. ಇನ್ನೊಂದು ಅರ್ಜಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPR) ಗೆ ಕೊಟ್ಟು ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಮಾಡೋಕೆ ಅವಕಾಶ ಕೊಡಿ ಎಂದು ಕೇಳುತ್ತಾರೆ? ಇದು ಹೇಗೆ ಸಾಧ್ಯ ಎಂದು ಅವರು ಕೇಳಿದರು.

ಈ ಎಲ್ಲಾ ಪತ್ರಗಳನ್ನು ಯಾರು ಬರೆದಿದ್ದರು? ಪಂದ್ಯ ಮುಗಿದ ಮರುದಿನ ಬೆಳಗ್ಗೆ 7.30ಕ್ಕೆ ಪೊಲೀಸ್ ಕಮೀಷನರ್ ಮೇಲೆ ಒತ್ತಡ ಹಾಕಿದ್ದು ಯಾರು? ಎನ್ನುವುದು ಗೊತ್ತಿದೆ. ಅದನ್ನೇ ಹೇಳಿದ್ದೇನೆ. ನಾನು ವಾಸ್ತವಾಂಶ ತಿಳಿದು ಮಾತಾಡಿದ್ದೇನೆ. ಅಸೂಯೆಯಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನು ಮಾತನಾಡಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಹೇಳಿದರು.

ಅಸೂಕ್ಷ್ಮ ಸರ್ಕಾರಕ್ಕೆ ಕೊನೆಗೂ ಜ್ಞಾನೋದಯವಾಗಿದೆ:

ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದ ರಾಜು ಅವರನ್ನು ಕಿತ್ತು ಹಾಕಿರುವುದು ಒಳ್ಳೆಯ ಕ್ರಮ ಎಂದು ಹೇಳಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಈ ಅಸೂಕ್ಷ್ಮ ಸರ್ಕಾರಕ್ಕೆ ಜ್ಞಾನೋದಯವಾಗಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಐವರು ಪೊಲೀಸ್ ಅಧಿಕಾರಿಗಳು ಅಮಾನತು ಮಾಡಿದ್ದು ಸರಿಯಲ್ಲ. ಈ ಅಮಾನತು ಅವಶ್ಯಕತೆ ಇರಲಿಲ್ಲ. ಈ ರೀತಿ ಸರ್ಕಾರ ನಡೆದುಕೊಂಡರೆ ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳೋಕೆ ಅಧಿಕಾರಿಗಳ ತಲೆದಂಡ ಮಾಡಿರುವುದು ಸರಿಯಲ್ಲ. ಸರ್ಕಾರ ಸೂಕ್ಷ್ಮವಾಗಿ  ಯೋಚನೆ ಮಾಡಬೇಕಿತ್ತು. ಈ ಘಟನೆಯ ಮೂಲ ಕಾರಣಗಳೇ ಬೇರೆ. ಆ ಕಾರಣಗಳನ್ನು ಸರ್ಕಾರ ಮರೆಮಾಚುತ್ತದೆ ಎಂದು ಅವರು ಕಟುವಾಗಿ ಟೀಕಿಸಿದರು.

ಹೆಣದ ಮೇಲೆ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದು ಸಿಎಂ, ಡಿಸಿಎಂ ಹೇಳಿಕೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್ ಡಿಕೆ,  ಹೆಣದ ಮೇಲೆ ರಾಜಕೀಯ ಮಾಡುವ ಅವಶ್ಯಕತೆ ನಮಗೆ ಇಲ್ಲ. ಇದ್ದ ವಿಷಯವನ್ನೇ ನಾನು ಹೇಳಿದ್ದೇನೆ. ನನ್ನ ಮಿತ್ರ ಪಕ್ಷವೂ ಹೇಳಿದೆ. ನಡೆದಿರುವುದನ್ನು ಹೇಳಿದ್ದೇವೆ. ಇದರಲ್ಲಿ ರಾಜಕೀಯ ಏನಿದೆ? ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದ ಮೇಲೆಯೂ ಕ್ರೀಡಾಂಗಣಕ್ಕೆ ಹೋಗಿ ಕಪ್ ಗೆ ಮುತ್ತಿಕ್ಕಿ ಶೋ ಮಾಡಿದ್ದು ಯಾರು? ಜನರೇ ಎಲ್ಲವನ್ನೂ ನೋಡಿದ್ದಾರೆ. ಮಾಧ್ಯಮಗಳು ಎಲ್ಲವನ್ನೂ ಪ್ರಸಾರ ಮಾಡಿವೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ, ಡಿಸಿಎಂ, ಗೃಹ ಸಚಿವರೇ ಹೊಣೆ ಹೊರಬೇಕು:

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಸಿಎಂ, ಡಿಸಿಎಂ, ಗೃಹ ಸಚಿವರೇ ತೆಗೆದುಕೊಳ್ಳಬೇಕು. ಈ ಮೂವರದು ಕೂಡ ತಪ್ಪಿದೆ. ಪಂದ್ಯ ಗೆದ್ದ 24 ಗಂಟೆ ಒಳಗೆ ಆತುರಾತುರವಾಗಿ ಸನ್ಮಾನ ಮಾಡೋದು ಏನಿತ್ತು? ಹೋಗಲಿ, ಸನ್ಮಾನವನ್ನಾದರೂ ಸರಿಯಾಗಿ ‌ಮಾಡಿದ್ರಾ? ಕಾಟಾಚಾರಕ್ಕೆ ಮಾಡಿದರು. ಆಟಗಾರರನ್ನು ಕೂಡ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇವರು ಕೊಟ್ಟ ಶಾಲು, ಟೋಪಿ ಎಲ್ಲವನ್ನು ಅವರು ತಗೊಂಡು ಹೋದರೋ ಬಿಡಾಡಿ ಹೋದರೋ ಗೊತ್ತಿಲ್ಲ. ಈ ಪುರುಷಾರ್ಥಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಬೇಕಿತ್ತಾ? ಎಂದು  ಹೆಚ್ ಡಿಕೆ ಬೇಸರ ವ್ಯಕ್ತಪಡಿಸಿದರು.

ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ಈಗಿನ ಕಾಲದಲ್ಲಿ ನಾವು ರಾಜಕಾರಣಿಗಳು ಭಂಡರು ಅಂತ ತೋರಿಸಿಕೊಂಡಿದ್ದೇವೆ. ಅವರಿಂದ ರಾಜೀನಾಮೆ ನಿರೀಕ್ಷೆ ಮಾಡೋಕೆ ಆಗುವುದಿಲ್ಲ. ವಿರೋಧ ಪಕ್ಷವಾಗಿ ನಾವು ಒತ್ತಾಯ ಮಾಡಿದ್ದೇವೆ. ಹೆಣದ ಮೇಲೆ ರಾಜಕೀಯ ಮಾಡೋ ದುರ್ಗತಿ ನಮಗೆ ಬಂದಿಲ್ಲ. ಅದು ಬರೋದು ಇಲ್ಲ ಎಂದು ಹೆಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಎಲ್ಲರ ಕಾಲದಲ್ಲಿ ಆಗಿದ್ದು ಮಾತಾಡ್ತೀನಿ ಎಂಬ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಲೇವಡಿ ಮಾಡಿದ  ಹೆಚ್ ಡಿ ಕುಮಾರಸ್ವಾಮಿ, ಸದನದಲ್ಲಿ ಅವರು ಏನು ಮಾತನಾಡುತ್ತಾರೆ? ತಮ್ಮ ಬಳಿ ಏನು ದಾಖಲೆ ಇದೆ ಎನ್ನುವುದನ್ನು ಇಡಲಿ. ಹಿಂದೆ ನಡೆದ ಕಲಾಪಗಳಲ್ಲಿ ಅವರು ಏನೇನು ಮಾಡಿದ್ದರು ಎಂಬುದು ಗೊತ್ತಿದೆ. ಏನ್ ಸಾಧನೆ ಮಾಡಿದ್ದೀನಿ ಅಂತ ಸದನದಲ್ಲಿ ‌ಮಾತಾಡ್ತಾರೆ. ಈ ಘಟನೆ ಬಿಡಿ ಎರಡು ವರ್ಷಗಳಲ್ಲಿ ಇವರ ಸಾಧನೆ ಏನು? ಬೆಂಗಳೂರು ನಗರಕ್ಕೆ, ರಾಜ್ಯಕ್ಕೆ ಇವರ ಕೊಡುಗೆ ಏನು? ಎಂದು ಕಿಡಿಕಾರಿದರು.

ದುರಂತದಲ್ಲಿ ಮೃತಪಟ್ಟವರಿಗೆ ಕಡಿಮೆ ಮೊತ್ತದ ಪರಿಹಾರ ನೀಡಲಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು,  ಜೀವ ಕಳೆದುಕೊಂಡವರು ವಾಪಸ್ ಬರುವುದಿಲ್ಲ. ದುಡ್ಡಿನ ಮೇಲೆ ಜೀವಕ್ಕೆ ಬೆಲೆ ಕಟ್ಟಲು ಆಗಲ್ಲ. ಸರ್ಕಾರ ಅನೇಕ ಸಮಯದಲ್ಲಿ ವಿಶೇಷ ಪ್ರಕರಣ ಅಂತ ಅನೇಕ ಬಾರಿ ಪರಿಹಾರ ಕೊಟ್ಟಿದೆ. ಇದು ಸರ್ಕಾರವೇ ಎಸಗಿದ ತಪ್ಪು. ಕುಟುಂಬಗಳಿಗೆ ಆಗಿರುವ ದುಃಖವನ್ನು ನೀಗಿಸಲು ಸಾಧ್ಯವಿಲ್ಲ. ಇದನ್ನು ವಿಶೇಷ ‌ಪ್ರಕರಣ ಎಂದು ಸರ್ಕಾರ ಹೆಚ್ಚುನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಡಾ. ರಾಜ್ ಅವರ ನಿಧನದ ದಿನಕ್ಕೆ ಹೋಲಿಸುವುದು ಸರಿಯಲ್ಲ

ವರನಟ ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಏನೇನು ನಡೆಯಿತೋ ಎನ್ನುವುದು ಈಗಾಗಲೇ ಹೇಳಿದ್ದೇನೆ. ಈ ಸರ್ಕಾರ ಅಣ್ಣಾವ್ರ ನಿಧನದ ವಿಷಯ ಇಟ್ಟುಕೊಂಡು ಕಾಲ್ತುಳಿತ ಪ್ರಕರಣದಲ್ಲಿ ರಕ್ಷಣೆ ಪಡೆಯೋದು ಬೇಡ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ರಾಜ್ ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ ಅಶಾಂತಿ ಉಂಟು ಮಾಡಲು ನಿರ್ದಿಷ್ಟವಾಗಿ ಕೆಲವರು ಪ್ರಯತ್ನಪಟ್ಟರು. ಸೀಮೆಎಣ್ಣೆ, ಪೆಟ್ರೋಲ್ ತಂದು ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ವರನಟರ ಅಂತಿಮಯಾತ್ರೆ, ಅಂತ್ಯ ಸಂಸ್ಕಾರದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡಿದರು. ಆಗ ಗೋಲಿಬಾರ್ ಆಯಿತು. ಇಬ್ಬರು ಸಾವನ್ನಪ್ಪಿದರು. ಅದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಆ ಘಟನೆಗೂ ಕಾಲ್ತುಳಿತಕ್ಕೆ ಹೋಲಿಕೆ ಮಾಡಬಾರದು ಎಂದು ಅವರು ಹೇಳಿದರು.vtu

Key words: RCB, victory celebration, before, winning, final, HDK

The post ಫೈನಲ್ ಗೆಲ್ಲುವ ಮೊದಲೇ ವಿಜಯೋತ್ಸವಕ್ಕೆ RCB ಮನವಿ: ತೀವ್ರ ಅಚ್ಚರಿ ವ್ಯಕ್ತಪಡಿಸಿದ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...