ಮೈಸೂರು ಮಾರ್ಚ್,5,2025 (www.justkannada.in): ಜೀತ ಪದ್ಧತಿಯ ನಿರ್ಮೂಲನಾ ಕಾಯ್ದೆ ಜಾರಿಯಲ್ಲಿದ್ದರೂ, ಹಲವಾರು ಕ್ಷೇತ್ರಗಳಲ್ಲಿ ಬಲವಂತದ ಜೀತ ಪದ್ಧತಿಯು ಈಗಲೂ ಕಂಡುಬರುತ್ತಿದೆ. ಇದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದಿನೇಶ್ ಅವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಜೀತ ಪದ್ದತಿ ನಿರ್ಮೂಲನೆ ದಿನದ ಅಂಗವಾಗಿ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಜೀತ ಪದ್ದತಿ ನಿಷೇಧ ಕುರಿತು ಅಧಿಕಾರಿಗಳಿಗೆ ಬುಧವಾರ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಒಟ್ಟು 50 ಅಧಿಕಾರಿಗಳನ್ನು ಜೀತ ಪದ್ಧತಿಯ ನಿರ್ಮೂಲನಾ ಅಧಿಕಾರಿಗಳನ್ನಾಗಿ ನೇಮಿಸಿದೆ. ಪ್ರಮುಖವಾಗಿ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳು ಜೀತ ಪದ್ಧತಿಯ ಕಾರ್ಮಿಕರು ಕಂಡು ಬಂದಲ್ಲಿ ಅವರ ರಕ್ಷಣೆ ಮಾಡುವುದು ಮತ್ತು ಪುರ್ನವಸತಿ ಒದಗಿಸಿಕೊಡುವುದು ಅವರ ಕರ್ತವ್ಯವಾಗಿದೆ ಎಂದರು.
ಜೀತಪದ್ಧತಿಯ ತಡೆಗಟ್ಟುವಿಕೆಗೆ ಹೆಚ್ಚಿನ ಒತ್ತು ನೀಡಬೇಕು, ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮವಹಿಸಬೇಕೆಂಬುದರ ಬಗ್ಗೆ ವಿಷಯವನ್ನು ತಜ್ಞರು ಕಾರ್ಯಾಗಾರದಲ್ಲಿ ತಿಳಿಸಿಕೊಡಲಿದ್ದು, ಅದರನ್ವಯ ಜೀತ ಪದ್ಧತಿ ನಿರ್ಮೂಲನೆ ಎಲ್ಲರೂ ಕೈಜೋಡಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲೂ ಕೂಡ ಜೀತಪದ್ಧತಿಯು ಚಾಲ್ತಿಯಲ್ಲಿರುವುದು ಅತ್ಯಂತ ವಿಷಾದನೀಯ. ಇದು ಸೂಕ್ಷ್ಮ ವಿಚಾರವಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯ ಎಲ್ಲಾ ಅಧಿಕಾರಿಗಳು ಒಗ್ಗಟ್ಟಾಗಿ ಜೀತಪದ್ಧತಿ ನಿರ್ಮೂಲನೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರದಿಂದ ಜೀತಪದ್ಧತಿ ನಿರ್ಮೂಲನೆಗೆ ನಿಗದಿಪಡಿಸಿರುವ ಎಸ್.ಓ.ಪಿ.ಯಂತೆ ಮತ್ತು ಸರ್ಕಾರದ ಆದೇಶದಂತೆ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕಾಗಿರುತ್ತದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿಯು ಮೇಲ್ವಿಚಾರಣೆಯನ್ನು ಮಾಡುತ್ತದೆ. ಜೀವಿಕಾ ಸಂಸ್ಥೆಯು ಕೈಜೊಡಿಸಿ ಜೀತಪದ್ಧತಿ ನಿರ್ಮೂಲನೆ ಕುರಿತು ಸರ್ಕಾರದ ಗಮನಕ್ಕೆ ತರುತ್ತಿದ್ದು, ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಜೀವಿಕ ಸಂಸ್ಥೆ, ಸಂಪನ್ಮೂಲ ವ್ಯಕ್ತಿ ಬಸವರಾಜು ಅವರು ಜೀತಪದ್ಧತಿ ನಿರ್ಮೂಲನೆ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪಕಾರ್ಯದರ್ಶಿಗಳಾದ ಸವಿತಾ ಬಿ.ಎಂ., ಡಾ.ಎಂ.ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜೀವಿತ ಸಂಸ್ಥೆಯ ತಂಡದವರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Key words: Strict punishment, law, Senior Civil , Judge Dinesh
The post ಬಲವಂತದ ಜೀತ ಪದ್ಧತಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ- ಹಿರಿಯ ಸಿವಿಲ್ ನ್ಯಾಯಾಧೀಶ ದಿನೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.