ವಿಜಯಪುರ,ಮೇ,21,2025 (www.justkannada.in): ಮಹೀಂದ್ರಾ ಸ್ಕಾರ್ಪಿಯೋ ಕಾರು ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸೇರಿ ಆರು ಮಂದಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದೆ.
ಸ್ಕಾರ್ಪಿಯೋ ಚಾಲಕ, ಕಾರಿನಲ್ಲಿದ್ದ ನಾಲ್ವರು ಹಾಗೂ ಬಸ್ ಚಾಲಕ ಮೃತಪಟ್ಟಿದ್ದಾರೆ. ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರನ್ ಮಲಕಂಠನ್, ಪತ್ನಿ ಪವಿತ್ರಾ, ಮಗ ಅಭಿರಾಮ ಮತ್ತು ಮಗಳು ಜ್ಯೋಸ್ನಾ ಮೃತರೆಂದು ಗುರುತಿಸಲಾಗಿದೆ. ಮತ್ತೊಬ್ಬ ಮಗ ಪ್ರವೀಣ ತೇಜ್ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇವೆಲ್ಲರೂ ತೆಲಂಗಾಣ ಮೂಲದವರು ಎಂದು ಎಸ್ ಪಿ ತಿಳಿಸಿದ್ದಾರೆ.
ಕಾರಿನ ಚಾಲಕ, ಹೋರ್ತಿ ಗ್ರಾಮದ ವಿಕಾಸ ಮಕನಿ ಹಾಗೂ ಬಸ್ ಚಾಲಕ, ಕಲಗುಟಗಿ ಗ್ರಾಮದ ಬಸವರಾಜ ರಾಠೋಡ್ ಸಹ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಹೀಂದ್ರ ಎಕ್ಸ್ಯುವಿ 300 ಕಾರು, ಕಂಟೇನರ್, ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ವಿಜಯಪುರದತ್ತ ಪ್ರಯಾಣ ಮಾಡುತ್ತಿದ್ದ ಮಹಿಂದ್ರಾ ಕಾರು ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿಯಾಗಿದೆ. ಇದರ ಪರಿಣಾಮವಾಗಿ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಗೆ ನಿಂತಿದ್ದ ಕಂಟೇನರ್ ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ ಚಾಲಕ ಬಸವರಾಜ ರಾಠೋಡ್ ಗಂಭೀರ ಗಾಯಗೊಂಡಿದ್ದರು. ಅವರು ನಂತರ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Fatal accident, 6 people, die, Vijayapur
The post ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸೇರಿ 6 ಮಂದಿ ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.