ಮೈಸೂರು,ಜೂನ್,23,2025 (www.justkannada.in): ರಾಜ್ಯದಲ್ಲಿರುವುದು 100% ಭ್ರಷ್ಟಾಚಾರ ಸರ್ಕಾರ. ಈ ಸರ್ಕಾರಕ್ಕೆ ಗೌರವ ಇದ್ದರೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್ ಮಹೇಶ್ ಆಗ್ರಹಿಸಿದರು.
ವಸತಿ ಇಲಾಖೆಯಲ್ಲಿನ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಎನ್. ಮಹೇಶ್, ಈ ಸರ್ಕಾರ ಹಗರಣದ ಸರಮಾಲೆಯನ್ನೇ ಕಟ್ಟುಕೊಂಡಿದೆ. ಅರೆ ಬೆಂದ ಸರ್ಕಾರ ಇದಾಗಿದ್ದು, ಇದೀಗ ಮತ್ತೊಂದು ಹಗರಣ ಸರ್ಕಾರದ ವಿರುದ್ದ ಕೇಳಿ ಬಂದಿದೆ. ಸರ್ಕಾರಕ್ಕೆ ಗೌರವ ಇದ್ದರೆ ವಸತಿ ಸಚಿವರ ರಾಜೀನಾಮೆ ಪಡೆಯಲಿ. ಬಿ.ನಾಗೇಂದ್ರ ರಾಜೀನಾಮೆ ಪಡೆದ ಹಾಗೆ ಜಮೀರ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸರ್ಕಾರ 100% ಭ್ರಷ್ಟಾಚಾರ ಸರ್ಕಾರ. ಈ ಸರ್ಕಾರದಲ್ಲಿ ಅಭಿವೃದ್ಧಿ ಏನು ಇಲ್ಲ. ಗ್ಯಾರಂಟಿ ಯೋಜನೆಗಳ ಅಸ್ತವ್ಯಸ್ತವಾಗಿ ಜಾರಿ ಮಾಡಿದ ಗರಿಮೆಯೊಂದಿಗೆ ಮುಂದೆಯೂ ಅಧಿಕಾರ ಸಿಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಈ ಎಲ್ಲಾ ಹಗರಣಗಳೇ ಮುಂದೆ ಇವರಿಗೆ ಸರ್ಕಾರಕ್ಕೆ ಉರುಳಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಗೆ ಇದೇನು ಬೇಕಿಲ್ಲ. ಹೈಕಮಾಂಡ್ ಗೆ ರಾಜ್ಯ ಸರ್ಕಾರ ಎಟಿಎಂ ಆಗಿದೆ. ಬಿಹಾರ, ಯುಪಿ ರಾಜ್ಯಗಳ ಚುನಾವಣೆಗೆ ಹಣ ಬೇಕಲ್ವಾ. ಈ ಕಾರಣಕ್ಕೆ ಸರ್ಕಾರವನ್ನ ಪ್ರಶ್ನೆ ಮಾಡುತ್ತಿಲ್ಲ. ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಪಡೆಯೋ ಧೈರ್ಯ ಸಿಎಂಗಿಲ್ಲ ಅಂದರೆ ಅವರನ್ನೇ ಸಿಎಂ ಮಾಡಲಿ ಎಂದು ಕಿಡಿಕಾರಿದರು.
ಪ್ರಬಲ ಸಮುದಾಯಗಳಿಗೆ ಹೆದರಿ ಅಹಿಂದ ಸಮುದಾಯಕ್ಕೆ ಅನ್ಯಾಯ
ಜಾತಿಗಣತಿ ಮರು ಸಮೀಕ್ಷೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎನ್.ಮಹೇಶ್, ಜನರ ಕಣ್ಣೋರೆಸುವ ಕೆಲಸ ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯ ಪ್ರಬಲ ಸಮುದಾಯಗಳಿಗೆ ಹೆದರಿ ಅಹಿಂದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಜನಗಣತಿ ಜೊತೆ ಜಾತಿಗಣತಿ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿ, ಜನಗಣತಿ ಒಪ್ಪಿಕೊಂಡು ಸುಮ್ಮನಿರಬೇಕು. ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರಕ್ಕೆ ಇಷ್ಟ ಇಲ್ಲ. ಈ ಕಾರಣಕ್ಕೆ ಒಳ ಮೀಸಲಾತಿ ಸಮೀಕ್ಷೆ ಮುಂದೂಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿದ ಎನ್ ಮಹೇಶ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಅಧಿಕಾರ ಹಂಚಿಕೆ ಆಗಿದೆ ಅಂತ ಡಿಕೆ ಬೆಂಬಲಿಗರು ಹೇಳುತ್ತಿದ್ದಾರೆ. ಅಧಿಕಾರ ಹಂಚಿಕೆ ಆಗುವ ಸಂದರ್ಭದಲ್ಲಿ ಆಗುವ ಬೆಳವಣಿಗೆಯಿಂದ ಈ ಸರ್ಕಾರ ಕುಸಿದು ಹೋಗಬಹುದು. ಏನು ಬೇಕಾದರೂ ಆಗಬಹುದು ಎಂದರು.
Key words: corrupt, government, Housing Minister, resign, N. Mahesh
The post ಭ್ರಷ್ಟ ಸರ್ಕಾರಕ್ಕೆ ಗೌರವ ಇದ್ದರೆ ವಸತಿ ಸಚಿವರ ರಾಜೀನಾಮೆ ಪಡೆಯಲಿ- ಎನ್.ಮಹೇಶ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.