ಮೈಸೂರು, ಮೇ, 22,2025 (www.justkannada.in): ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಸಂಸ್ಥೆಗಳಲ್ಲಿ ಒಂದಾಗಿದ್ದ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ಗೆ ಪರಭಾಷೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅತ್ಯಂತ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ನಿರ್ಧಾರ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಯದುವೀರ್, ಇದು ಕಾಂಗ್ರೆಸ್ ಸರ್ಕಾರದ ಅವಿವೇಕದ ತೀರ್ಮಾನ ಎಂದು ಹೇಳಿದ್ದಾರೆ.
1916ರಲ್ಲಿ ನಮ್ಮ ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರ್ ಈ ಸಂಸ್ಥೆ ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದರು. ಈ ಸಂಸ್ಥೆಯ ಸೋಪ್ ದಶಕಗಳಿಂದಲೂ ಎಲ್ಲರ ಮನೆಯಲ್ಲಿ ಸ್ಥಾನ ಪಡೆದಿತ್ತು. ಈ ಸಂಸ್ಥೆಯ ಬಹುತೇಕ ವಸ್ತುಗಳನ್ನು ಬಳಸುತ್ತಿದ್ದವರೇ ಕನ್ನಡಿಗರು. ಇಂಥ ಸಂಸ್ಥೆಗೆ ಪರಭಾಷೆ ನಟಿಯನ್ನು ರಾಯಭಾರಿಯನ್ನಾಗಿ ಮಾಡಿದ್ದು ಹುಚ್ಚುತನ. ಅದು ಸಾಲದೆಂಬಂತೆ ಆರು ಕೋಟಿ ರೂ.ಗಳಿಗೂ ಹೆಚ್ಚು ರೂಪಾಯಿ ನೀಡಿ ರಾಯಭಾರಿ ಮಾಡಿರುವುದು ಅಕ್ಷಮ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸಂಸ್ಥೆಗೆ ರಾಯಭಾರಿಯನ್ನು ಮಾಡಲೇಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದ್ದರೆ ಕನ್ನಡದ ಜನಪ್ರಿಯ ಹಾಗೂ ಪ್ರತಿಭಾವಂತ ನಟಿಯರನ್ನು ನೇಮಿಸಿಕೊಳ್ಳಬೇಕಾಗಿತ್ತು. ತಮನ್ನಾ ಭಾಟಿಯಾಗೆ ಮಣೆ ಹಾಕುವ ಮೂಲಕ ರಾಜ್ಯ ಸರ್ಕಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಯದುವೀರ್ ಆರೋಪಿಸಿದ್ದಾರೆ.
ತಮನ್ನಾ ಭಾಟಿಯಾ ಕರ್ನಾಟಕದ ಸಂಸ್ಕೃತಿ, ಇತಿಹಾಸದೊಂದಿಗೆ ಯಾವುದೇ ನಂಟು ಹೊಂದಿಲ್ಲ. ಕನ್ನಡತನದ ಗಂಧ ಗಾಳಿ ಗೊತ್ತಿಲ್ಲದ ಈ ನಟಿಯನ್ನು ನಮ್ಮ “ಗಂಧದ”ದ ಸೋಪಿನ ಸಂಸ್ಥೆಗೆ ರಾಯಭಾರಿ ಮಾಡುವ ಅಗತ್ಯವೇನಿತ್ತು ಎಂದು ಸಂಸದ ಯದುವೀರ್ ಕಿಡಿಕಾರಿದ್ದಾರೆ.
ಸರ್ಕಾರ ತೀರ್ಮಾನ ಹಿಂಪಡೆಯಲಿ
ರಾಜ್ಯ ಸರ್ಕಾರ ಈ ಕೂಡಲೇ ಈ ನೇಮಕವನ್ನು ತಕ್ಷಣವೇ ರದ್ದುಗೊಳಿಸಬೇಕು. ಕನ್ನಡಿಗರ 6.20 ಕೋಟಿ ರೂಪಾಯಿಯನ್ನು ಉಳಿಸಲಿ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಸಾವಿರಾರು ಕೋಟಿ ರೂ. ಜನರಿಗೆ ನೀಡದೇ ಮಾತು ತಪ್ಪಿರುವ ಕಾಂಗ್ರೆಸ್ ಸರ್ಕಾರ, ಈಗ ಪರಭಾಷೆ ನಟಿಗೆ ಮಣೆ ಹಾಕುವುದನ್ನು ನಿಲ್ಲಿಸಬೇಕು ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದ್ದಾರೆ.
Key words: Mysore Sandal Soap, Actor, thamanna, MP, Yaduveer
The post “ಮಿಲ್ಕಿ ಬ್ಯೂಟಿ” ಗೆ ಮೈಸೂರು ಸ್ಯಾಂಡಲ್ ಸೋಪ್; ಯದುವೀರ್ ಆಕ್ಷೇಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.