ಮೈಸೂರು,ಜೂನ್,13,2025 (www.justkannada.in): ರಾಜ್ಯದ ಹಲವು ಭಾಗಗಳಲ್ಲಿ ಮಾವಿನ ಹಣ್ಣಿನ ಬೆಲೆ ಇಳಿಕೆಯಾಗಿದ್ದು, ಉತ್ತಮ ಫಸಲು ಬಂದಿದ್ದರೂ ಬೆಲೆ ಇಳಿಕೆಯಿಂದ ರೈತ ಕಂಗಾಲಾಗಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಮಾವು ಬೆಲೆ ನೆಲೆ ಕಚ್ಚಿದ್ದು, ಸೂಕ್ತ ಬೆಲೆ ಸಿಗದೆ ಹಲವೆಡೆ ರೈತರು ಮಾವಿನ ಹಣ್ಣನ್ನ ಬೀದಿಗೆ ಸುರಿದಿದ್ದಾರೆ.
ಮಾರುಕಟ್ಟೆಗೆ ಆರಂಭದಲ್ಲಿ ಕೆ.ಜಿಗೆ ₹ 150 ರಿಂದ 200 ರೂ. ಇದ್ದ ಮಾವು ಈಗ 100 ರೂಪಾಯಿಗೆ 3 ಕೆ.ಜಿಯಾಗಿದೆ. ರೈತರ ಬಳಿ ಕೆ.ಜಿಗೆ 10 ರೂಗೂ ಕಡಿಮೆ ದರದಲ್ಲಿ ತೆಗೆದುಕೊಂಡರೆ ಮಧ್ಯವರ್ತಿಗಳ ಮಾರಾಟಗಾರರಲ್ಲಿ ಕೆ.ಜಿಗೆ 40ರಿಂದ 50 ರೂ.ನಲ್ಲಿ ಮಾರಾಟವಾಗುತ್ತಿದೆ.
ಇನ್ನು ಕೋಲಾರ ಭಾಗದಲ್ಲಿ ಮಾವಿನ ಹಣ್ಣನ್ನ ಕೇಳೋರಿಲ್ಲದೆ ರೈತರು ಬೀದಿಗೆ ಸುರಿದಿದ್ದಾರೆ. ಅಧಿಕ ಇಳುವರಿಯಿಂದ ಮಾರುಕಟ್ಟೆಗೆ ಹೆಚ್ಚಿನ ಮಾವಿನ ಹಣ್ಣುಗಳು ಪೂರೈಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಹಜವಾಗಿ ದರ ಇಳಿಕೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಬೆಲೆ ಸಿಗದೆ ರೈತರು ಕಂಗಾಲಾದರೇ ಇತ್ತ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಖುಷಿಯಾಗಿದೆ.
ನೇರಳೆ ಹಣ್ಣಿನ ದರ ಕೊಂಚ ಏರಿಕೆ
ವರ್ಷಕ್ಕೊಮ್ಮೆ ಬರುವ ನೇರಳೆ ಹಣ್ಣು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಆರಂಭದಲ್ಲಿ ಗ್ರಾಹಕರಿಗೆ ಕೊಂಚ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೆ.ಜಿಗೆ 200 ರಿಂದ 250 ರೂ ನಿಗದಿ ಮಾಡಲಾಗಿದ್ದು, ಸೀಜನಲ್ ಫ್ರೂಟ್ ಆದ ಕಾರಣ ನೇರಳೆ ಹಣ್ಣಿಗೆ ಬಹುಬೇಡಿಕೆ ಉಂಟಾಗಿದೆ.
ದೇವರಾಜ ಮಾರುಕಟ್ಟೆಯಲ್ಲೇ ಕೆ.ಜಿ 200 ರೂ ನಿಗದಿಪಡಿಸಲಾಗಿದ್ದು ವ್ಯಾಪಾರಸ್ಥರು ಗ್ರಾಮೀಣ ಭಾಗದಿಂದ ಸಂಗ್ರಹಿಸಿ ತಂದು ಮಾರಾಟ ಮಾಡುತ್ತಿದ್ದಾರೆ. ನೇರಳೆ ಹಣ್ಣಿನ ದರ ಕೇಳಿ ಗ್ರಾಹಕರು ಹಣ್ಣು ಖರೀದಿ ಕೊಂಚ ಹಿಂದೇಟು ಹಾಕುತ್ತಿದ್ದು, 1 ಕೆಜಿ ಬದಲು ಅರ್ಧ ಕೆ.ಜಿ ಖರೀದಿ ಮಾಡುತ್ತಿದ್ದಾರೆ
ನಗರದ ದೇವರಾಜ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆ ಬದಿಗಳಲ್ಲಿ ನೇರಳೆ ಹಣ್ಣಿನ ಭರ್ಜರಿ ಮಾರಾಟವಾಗುತ್ತಿದ್ದು, ಉತ್ತಮ ವ್ಯಾಪಾರವಾಗುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ವರ್ಷಕ್ಕೊಮ್ಮೆ ಬರುವ ನೇರಳೆ ಹಣ್ಣು ದೇಹದ ಆರೋಗ್ಯಕ್ಕೂ ಒಳ್ಳೆಯದ್ದು.
Key words: Mango prices, fallen, Mysore, purple fruit, Rise
The post ಮೈಸೂರಿನಲ್ಲೂ ಕುಸಿದ ಮಾವು ಬೆಲೆ: ಏರಿದ ‘ನೇರಳೆ ಹಣ್ಣಿನ ದರ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.