ಬೆಂಗಳೂರು,ಮೇ,31,2025 (www.justkannada.in): ರಾಜ್ಯದಲ್ಲಿ ಒಟ್ಟು 9 ರೈಲ್ವೇ ಯೋಜನೆಗಳು ಅನುಷ್ಠಾನ ಹಂತದಲ್ಲಿದ್ದು, ಇದಕ್ಕೆ ಅಗತ್ಯವಾದ ಭೂಸ್ವಾಧೀನ ಕಾರ್ಯವನ್ನು ಆಯಾ ಜಿಲ್ಲಾಧಿಕಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತಾಣಗಳನ್ನು ಗುರುತಿಸಿ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು. ಕೆಲವು ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ರಸ್ತೆ ಅಪಘಾತಗಳು ಹೆಚ್ಚಾಗಿವೆ. ರಸ್ತೆ ಸುರಕ್ಷತಾ ಸಪ್ತಾಹಗಳನ್ನು ಕಾಟಾಚಾರಕ್ಕೆ ನಡೆಸಬಾರದು. ಅಪಘಾತಗಳು ಹೆಚ್ಚು ನಡೆಯುವ ಸ್ಥಳ (Black spots) ಗಳನ್ನು ಗುರುತಿಸಿ ಅಪಘಾತಗಳನ್ನು ತಪ್ಪಿಸಲು ಏನು ಕ್ರಮ ಕೈಗೊಂಡಿದ್ದೀರಿ? ಅಪಘಾತ ಪ್ರಮಾಣ ಯಾವುದೇ ಕಾರಣಕ್ಕೂ ಹೆಚ್ಚಾಗುವುದನ್ನು ಒಪ್ಪಲು ಸಾಧ್ಯವಿಲ್ಲ. ಇದಕ್ಕೆ ಜಿಲ್ಲಾಧಿಕಾರಿ ಅವರೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಕಠಿಣ ಕ್ರಮ ಕೈಗೊಂಡರೆ ಮೈಕ್ರೋ ಫೈನಾನ್ಸ್ ಹಾವಳಿಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮಟ್ಟ ಹಾಕಲು ಸಾಧ್ಯವಿದೆ. ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 91 ಅಸಂಘಟಿತ ಕಾರ್ಮಿಕ ವರ್ಗಗಳನ್ನು ಗುರುತಿಸಲಾಗಿದ್ದು, ಇದುವರೆಗೆ 25,61,105 ಕಾರ್ಮಿಕರನ್ನು ನೋಂದಾಯಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರನ್ನು ಈ ಯೋಜನೆಯಡಿ ನೋಂದಾಯಿಸಲು ಕ್ರಮ ಕೈಗೊಳ್ಳಬೇಕು. ಮಾದಕ ದ್ರವ್ಯ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆಗಳನ್ನ ನೀಡಿದರು.
Key words: Meeting, DC, CEO, CM, Siddaramaiah
The post ರಾಜ್ಯದಲ್ಲಿ 9 ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಕಾರ್ಯ ಕಾಲಮಿತಿಯೊಳಗೆ ಪೂರ್ಣಗೊಳಿಸಿ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.