19
September, 2026

A News 365Times Venture

19
Saturday
September, 2026

A News 365Times Venture

ರೋಜ್‌ ಗಾರ್ ಮೇಳ ಯುವಶಕ್ತಿಗೆ ಹೊಸ ಅವಕಾಶಗಳ ಸಂಕೇತ: ಉದ್ಯೋಗ ಸೃಷ್ಟಿಗೆ ಒತ್ತು-ಕೇಂದ್ರ ಸಚಿವ ವಿ ಸೋಮಣ್ಣ

Date:

ಮೈಸೂರು ಸೆಪ್ಟೆಂಬರ್, 19,2026 (www.justkannada.in): ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯುವಜನತೆ ಪ್ರಮುಖ ಶಕ್ತಿಯಾಗಿದ್ದು, ಅವರಿಗೆ ಕೌಶಲ್ಯ, ಉದ್ಯೋಗ ಹಾಗೂ ಉದ್ಯಮಶೀಲತೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವವಿ ಸೋಮಣ್ಣ ಅವರು ತಿಳಿಸಿದರು.

ಇಂದು ವಾಕ್ ಮತ್ತು ಶ್ರವಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೋಜಗಾರ್ ಮೇಳವನ್ನು ಉದ್ಘಾಟಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ರೋಜ್‌ಗಾರ್ ಮೇಳದ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ. ಯುವಜನರಿಗೆ ಸರ್ಕಾರಿ ಉದ್ಯೋಗದ ಅವಕಾಶ ಕಲ್ಪಿಸುವ ಈ ಕಾರ್ಯಕ್ರಮ ಉದ್ಯೋಗ ಸೃಷ್ಟಿಗೆ ನೀಡುತ್ತಿರುವ ಆದ್ಯತೆಯ ಸಂಕೇತವಾಗಿದೆ ಎಂದು ಹೇಳಿದರು.

2015ರಲ್ಲಿ ಆರಂಭವಾದ ಸ್ಕಿಲ್ ಇಂಡಿಯಾ ಮಿಷನ್ ಹಾಗೂ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಕೋಟ್ಯಂತರ ಯುವಕರಿಗೆ ಕೌಶಲ್ಯ ತರಬೇತಿ ಮತ್ತು ಪ್ರಮಾಣಪತ್ರ ನೀಡಲಾಗಿದೆ. ದೇಶದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದ್ದು, ಯುವಕರಿಗೆ ವೃತ್ತಿಪರ ತರಬೇತಿ ಪಡೆಯಲು ಹೆಚ್ಚಿನ ಅವಕಾಶಗಳು ದೊರೆತಿವೆ ಎಂದು ತಿಳಿಸಿದರು.

ರಾಷ್ಟ್ರೀಯ ಅಪ್ರೆಂಟಿಸ್‌  ಶಿಪ್ ಉತ್ತೇಜನ ಯೋಜನೆಯ ಮೂಲಕವೂ ಲಕ್ಷಾಂತರ ಯುವಕರಿಗೆ ತರಬೇತಿ ಹಾಗೂ ಉದ್ಯೋಗಾನುಭವ ಕಲ್ಪಿಸಲಾಗಿದೆ. ಇದರಿಂದ ಯುವಕರು ದೇಶದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೌಶಲ್ಯವನ್ನು ಬಳಸಿಕೊಳ್ಳಲು ಅವಕಾಶ ದೊರೆಯುತ್ತಿದೆ ಎಂದರು.

ಸುಮಾರು 1,000 ಐಟಿಐಗಳ ಆಧುನೀಕರಣಕ್ಕಾಗಿ 60 ಸಾವಿರ ಕೋಟಿ ವೆಚ್ಚದ ಪ್ರಧಾನಮಂತ್ರಿ ಸೆತು ಯೋಜನೆಗೆ ಒತ್ತು ನೀಡಲಾಗಿದ್ದು, ಆಧುನಿಕ ತಾಂತ್ರಿಕ ತರಬೇತಿ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಯುವಕರು ಸ್ವಂತ ಉದ್ಯಮ ಆರಂಭಿಸಲು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಣ್ಣ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಸಾರಿಗೆ ಕ್ಷೇತ್ರದವರು ಹಾಗೂ ಸಣ್ಣ ಉದ್ಯಮಿಗಳಿಗೆ ಈ ಯೋಜನೆಯಿಂದ ಆರ್ಥಿಕ ನೆರವು ದೊರೆಯುತ್ತಿದೆ. ಕರ್ನಾಟಕದಲ್ಲಿಯೂ ಮುದ್ರಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಯುವಜನರ ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಉದ್ಯಮಶೀಲತೆಗೆ ಒತ್ತು ನೀಡುವ ಮೂಲಕ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಸಾಮಾನ್ಯ ಕುಟುಂಬಗಳ ಮಕ್ಕಳಿಗೂ ಶಿಕ್ಷಣ ಪಡೆಯಲು ಅವಕಾಶಗಳು ವಿಸ್ತರಿಸಿವೆ. ಶಿಕ್ಷಣ, ಕೌಶಲ್ಯ, ಆರೋಗ್ಯ ಹಾಗೂ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೇಶದಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ರೋಜ್‌ ಗಾರ್ ಮೇಳದ ಮೂಲಕ ದೇಶದ ವಿವಿಧ ಭಾಗಗಳಲ್ಲಿ 51 ಸಾವಿರಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿದ್ದು, ಇದು ಯುವಜನರಿಗೆ ಉದ್ಯೋಗದ ಅವಕಾಶ ಕಲ್ಪಿಸುವುದರ ಜೊತೆಗೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಅವರ ಪಾಲ್ಗೊಳ್ಳುವಿಕೆಗೆ ವೇದಿಕೆ ಕಲ್ಪಿಸುತ್ತಿದೆ ಎಂದು ಹೇಳಿದರು.

ಇಂದು ನೇಮಕಾತಿ ಪತ್ರ ಪಡೆಯುತ್ತಿರುವವರು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದರ ಜೊತೆಗೆ, ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುವ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಉದ್ಯೋಗವನ್ನು ಕೇವಲ ವೈಯಕ್ತಿಕ ಜೀವನೋಪಾಯದ ದೃಷ್ಟಿಯಿಂದ ನೋಡದೆ, ರಾಷ್ಟ್ರ ನಿರ್ಮಾಣದ ಭಾಗವಾಗಿ ಪರಿಗಣಿಸಬೇಕು ಎಂದರು.

ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ರೈಲ್ವೆ ಇಲಾಖೆಯಲ್ಲಿ ದೊಡ್ಡ ಸಂಖ್ಯೆಯ ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದು,ಹೊಸದಾಗಿ ನೇಮಕವಾಗುತ್ತಿರುವವರು ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ತಮ್ಮ ಸೇವೆಯ ಪ್ರಮುಖ ಮೌಲ್ಯಗಳನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.

ದೇಶದ ವಿವಿಧ ರಾಜ್ಯಗಳಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳನ್ನು ವಿಸ್ತರಿಸಲಾಗುತ್ತಿದೆ. ಹಿಂದೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಪ್ರದೇಶಗಳು ಹಾಗೂ ವಿವಿಧ ಸಾಮಾಜಿಕ ವರ್ಗಗಳ ಕುಟುಂಬಗಳಿಗೂ ಅಭಿವೃದ್ಧಿಯ ಅವಕಾಶಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

ರೋಜ್‌ ಗಾರ್ ಮೇಳದ ಮೂಲಕ ನೇಮಕಾತಿ ಪಡೆಯುತ್ತಿರುವ 51 ಸಾವಿರ ಯುವಕರೊಂದಿಗೆ ಅವರ ಕುಟುಂಬಗಳಿಗೂ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಹೆಚ್ಚಲಿದೆ. ಯುವಜನರ ಪ್ರಗತಿಯೊಂದಿಗೆ ಅವರ ಕುಟುಂಬಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಬ್ರಿಕ್ಸ್‌ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪಾತ್ರ ಹೆಚ್ಚಾಗಿದ್ದು, ಹಲವು ರಾಷ್ಟ್ರಗಳ ನಾಯಕರು ಭಾರತದೊಂದಿಗೆ ಸಹಕಾರ ವಿಸ್ತರಿಸುವ ಕುರಿತು ಚರ್ಚಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಮತ್ತಷ್ಟು ಬಲಪಡಿಸಲು ಯುವಜನರೂ ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ದೇಶದ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ದೇಶದ ವಿವಿಧ ಭಾಗಗಳಲ್ಲಿ ನಡೆದ ರೋಜ್‌ ಗಾರ್ ಮೇಳದ ಅಂಗವಾಗಿ ಸುಮಾರು 51 ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ. ಇದು ಯುವಜನರಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ಮಹತ್ವದ ವೇದಿಕೆಯಾಗಿದೆ ಎಂದು  ಹೇಳಿದರು.

2014 ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದಲ್ಲಿ ಆರ್ಥಿಕತೆ, ಮೂಲಸೌಕರ್ಯ, ಉದ್ಯೋಗ ಮತ್ತು ಜನಕಲ್ಯಾಣ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳು ನಡೆದಿವೆ. ಭಾರತ ಇಂದು ಪ್ರಮುಖ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ವಿದೇಶಾಂಗ ನೀತಿಯಲ್ಲೂ ಭಾರತ ತನ್ನ ಜಾಗತಿಕ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚಾಗಿದೆ. ಇದರೊಂದಿಗೆ ಭಾರತೀಯರಿಗೆ ಜಾಗತಿಕ ಅವಕಾಶಗಳೂ ವಿಸ್ತರಿಸುತ್ತಿವೆ ಎಂದು ಹೇಳಿದರು.

ಕಳೆದ 12 ವರ್ಷಗಳಲ್ಲಿ ಸುಮಾರು 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿರುವುದು ಮಹತ್ವದ ಸಾಧನೆ ಎಂದು ಉಲ್ಲೇಖಿಸಿದ ಅವರು ಸ್ವಚ್ಛ ಭಾರತ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಜನರ ಆರೋಗ್ಯ, ಸ್ವಚ್ಛತೆ ಮತ್ತು ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೈಸೂರಿನ ಯೋಗ ಪರಂಪರೆ ಸೇರಿದಂತೆ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕೆಲಸವೂ ನಡೆಯುತ್ತಿದೆ. ಭಾರತದ ಪರಂಪರೆ ಮತ್ತು ಸಂಸ್ಕೃತಿ ಇಂದು ವಿಶ್ವದ ಗಮನ ಸೆಳೆಯುತ್ತಿದೆ ಎಂದು ಹೇಳಿದರು.

ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ, ಜನಕಲ್ಯಾಣ ಹಾಗೂ ಸಾಂಸ್ಕೃತಿಕ ಪ್ರಗತಿಯೊಂದಿಗೆ ದೇಶದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾದ ಪುಷ್ಪಲತಾ,  ಸಿಜಿಎಸ್ ಟಿ ಆಯುಕ್ತ ರವೀಂದ್ರ ರಾಧಾ ಅವರು ಸೇರಿದಂತೆ ಉದ್ಯೋಗ ಪಡೆದ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಸ್ತೂರಿ ರಂಗನ್‌ ವರದಿಯ ಆತಂಕಕ್ಕೆ ಕೇಂದ್ರ ಸರ್ಕಾರವೇ ಕಾರಣ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ,ಸೆಪ್ಟೆಂಬರ್ 19,2026 (www.justkannada.in) ರಾಜ್ಯ ಸರ್ಕಾರ  ಸ್ಪರ್ಷವಾಗಿ ಕಸ್ತೂರಿ ರಂಗನ್ ವರದಿಯನ್ನು...

ಸೆಮಿಕಾನ್ ಇಂಡಿಯಾ-2026 ಸಮಾವೇಶ: ರಾಜ್ಯಕ್ಕೆ 15 ಸಾವಿರ ಕೋಟಿ ರೂ. ಬಂಡವಾಳ ಹರಿವು ನಿಚ್ಚಳ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್‌,19,2026 (www.justkannada.in): ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ-2026 ಸಮಾವೇಶದಲ್ಲಿ 20ಕ್ಕೂ ಹೆಚ್ಚು...

ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘಕ್ಕೆ ಲಾಭ- ಅಧ್ಯಕ್ಷ ಕೆ.ದೀಪಕ್ ಘೋಷಣೆ.

ಮೈಸೂರು,ಸೆಪ್ಟಂಬರ್‌,19,2026 (www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘವು 2025-26...

ಪ್ರೊ. ಎಸ್. ರಂಗಪ್ಪ ಅವರಿಗೆ ಕ್ಯೋಟೋ ವಿಶ್ವವಿದ್ಯಾಲಯದಿಂದ ಸಂಶೋಧನಾ ಸಹಯೋಗದ ಆಹ್ವಾನ

ಮೈಸೂರು,ಸೆಪ್ಟಂಬರ್‌,19,2026 (www.justkannada.in) : ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ, NASI Distinguished...