ಮೈಸೂರು, ಆಗಸ್ಟ್,24,2026 (www.justkannada.in): ಮೈಸೂರಿನ ಚಾಮರಾಜಪುರಂ ಬಜ್ಜಣ್ಣ ಲೇನ್‌ನ ಕೊಪ್ಪಲು ಮಾರಮ್ಮ ದೇವಸ್ಥಾನ ರಸ್ತೆಯಲ್ಲಿ ಮರದ ಕೊಂಬೆಯೊಂದು ವಿದ್ಯುತ್ ತಂತಿಯ ಮೇಲೆ ಅಪಾಯಕಾರಿಯಾಗಿ ನೇತಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಗೆ ಬಿದ್ದು ದೊಡ್ಡ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.
ನಿನ್ನೆ ಸಂಜೆ ಸುಮಾರು 4.30ರ ವೇಳೆಗೆ ಮತ್ತೊಂದು ಕೊಂಬೆ ರಸ್ತೆಗೆ ಬಿದ್ದಿದ್ದು, ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳ, ಮೈಸೂರು ಮಹಾನಗರ ಪಾಲಿಕೆ (MCC) ಹಾಗೂ ಕೆಇಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಲವು ಬಾರಿ ಮನವಿ ಮಾಡಿದ ಬಳಿಕ ಕೆಇಬಿ ದೂರು ದಾಖಲಿಸಿಕೊಂಡಿದ್ದರೂ, ಇದುವರೆಗೆ ಸ್ಥಳಕ್ಕೆ ಬಂದು ಕೊಂಬೆಯನ್ನು ತೆರವುಗೊಳಿಸುವ ಅಥವಾ ಅಗತ್ಯ ಕ್ರಮ ಕೈಗೊಳ್ಳುವ ಕಾರ್ಯ ನಡೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ನಡುವೆ ವಿದ್ಯುತ್ ತಂತಿಯ ಮೇಲೆ ನೇತಾಡುತ್ತಿರುವ ಕೊಂಬೆಯ ಕೆಳಗಿನಿಂದಲೇ ಪ್ರತಿನಿತ್ಯ ಹಲವರು ಸಂಚರಿಸುತ್ತಿದ್ದಾರೆ. ಕೊಂಬೆ ಏಕಾಏಕಿ ಮುರಿದು ಬೀಳುವುದರ ಜೊತೆಗೆ, ವಿದ್ಯುತ್ ತಂತಿಗೆ ತಾಗಿದರೆ ವಿದ್ಯುತ್ ಅಪಘಾತ ಸಂಭವಿಸುವ ಗಂಭೀರ ಅಪಾಯವೂ ಇದೆ.
ಸ್ಥಳೀಯರ ಪ್ರಕಾರ, ಈ ಮರದ ಕೊಂಬೆಗಳು ದುರ್ಬಲವಾಗಿದ್ದು, ಮತ್ತಷ್ಟು ಕೊಂಬೆಗಳು ಯಾವ ಕ್ಷಣದಲ್ಲಾದರೂ ಬೀಳುವ ಸಾಧ್ಯತೆಯಿದೆ. ಹೀಗಾಗಿ ಕೇವಲ ಬಿದ್ದಿರುವ ಕೊಂಬೆಯನ್ನು ತೆರವುಗೊಳಿಸುವುದಷ್ಟೇ ಅಲ್ಲದೆ, ಅಪಾಯಕಾರಿಯಾಗಿ ನೇತಾಡುತ್ತಿರುವ ಹಾಗೂ ಒಣಗಿರುವ ಕೊಂಬೆಗಳನ್ನು ತಕ್ಷಣ ಪರಿಶೀಲಿಸಿ ವೈಜ್ಞಾನಿಕವಾಗಿ ಕತ್ತರಿಸುವ ಅಗತ್ಯವಿದೆ.
ಯಾರ ಹೊಣೆ?
ವಿದ್ಯುತ್ ತಂತಿಗಳ ಸಮೀಪ ಇರುವ ಮರದ ಕೊಂಬೆಗಳನ್ನು ಕತ್ತರಿಸುವ ಸಂದರ್ಭದಲ್ಲಿ ವಿದ್ಯುತ್ ಸುರಕ್ಷತೆ ಅತ್ಯಂತ ಮುಖ್ಯವಾಗಿರುವುದರಿಂದ ಕೆಇಬಿ/ವಿದ್ಯುತ್ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಮನ್ವಯದಿಂದ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
“ದೂರು ಸ್ವೀಕರಿಸಿ ಸುಮ್ಮನಿರುವುದರಿಂದ ಸಾಲದು. ಅಪಾಯ ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳಬೇಕು. ಕೊಂಬೆ ಬಿದ್ದು ಯಾರಾದರೂ ಗಾಯಗೊಂಡ ನಂತರ ಕ್ರಮ ಕೈಗೊಳ್ಳುವುದರಲ್ಲಿ ಅರ್ಥವಿಲ್ಲ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಲು ಮಾರಮ್ಮ ದೇವಸ್ಥಾನ ರಸ್ತೆ–ಬಜ್ಜಣ್ಣ ಲೇನ್ ನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರದ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಿ, ಮುಂದಿನ ಅಪಾಯ ತಪ್ಪಿಸಲು ಮರದ ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಕೆಇಬಿ ಮತ್ತು ಮೈಸೂರು ಮಹಾನಗರ ಪಾಲಿಕೆಯನ್ನು ಆಗ್ರಹಿಸಿದ್ದಾರೆ.
ENGLISH SUMMARY..
Dangerous Tree Branch Hanging Over Live Wire in Mysuru
Mysuru: A dangerous tree branch is hanging over a live electricity wire at Koppalu Maramma Temple Road, Bajjannalane, Chamarajapuram.
Another branch fell yesterday around 4.30 pm. Residents alerted the Fire Brigade, MCC and KEB. Though KEB has registered a complaint, the issue is yet to be attended to.
People continue to risk their lives by commuting under the dangling branch and live wire. Residents urge MCC and KEB to immediately remove the dangerous branches and prevent a possible accident.
#Mysuru #Chamarajapuram #MCC #KEB #PublicSafety #TreeHazard #ElectricitySafety #JustKannada
Key words: Dangerous, Tree Branch, Mysuru
The post ವಿದ್ಯುತ್ ತಂತಿಯ ಮೇಲೆ ನೇತಾಡುತ್ತಿರುವ ಅಪಾಯಕಾರಿ ಕೊಂಬೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




