ಬೆಂಗಳೂರು, ಮೇ, 29, 2025 (www.justkannada.in): ವಿದ್ಯುತ್ ಸಂಪರ್ಕಗಳಿಗೆ ಸ್ವಾಧೀನಾನುಭವ ಪತ್ರ (ಒಸಿ) ಕಡ್ಡಾಯಗೊಳಿಸಿರುವುದರಿಂದ ಆಗುತ್ತಿರುವ ಸಮಸ್ಯೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಕೆ.ಜೆ ಜಾರ್ಜ್ ಅವರು, ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯಗೊಳಿಸಿರುವುದರಿಂದ ಮನೆ ನಿರ್ಮಾಣ,ಕೈಗಾರಿಕೋದ್ಯಮಕ್ಕೆ ಆಗುತ್ತಿರುವ ಸಮಸ್ಯೆ ಈಗಾಗಲೇ ಸರ್ಕಾರದ ಗಮನದಲ್ಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ಪರಿಹಾರ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದರು.
ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರ ವಿದ್ಯುತ್ ಸಂಪರ್ಕಗಳಿಗೆ ಸ್ವಾಧೀನಾನುಭವ ಪತ್ರ ಕಡ್ಡಾಯಗೊಳಿಸಿದೆ. ಇದರಿಂದ ಉದ್ಭವವಾಗಿರುವ ಸಮಸ್ಯೆ ನಿವಾರಿಸಲು ಬೈಲಾ ತಿದ್ದುಪಡಿ ಮಾಡಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ, ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ. ಅವರು ವರದಿ ಸಲ್ಲಿಸಿದ ಕೂಡಲೇ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಸಮಸ್ಯೆ ನಿವಾರಿಸಲಾಗುವುದು ಎಂದರು.
ಗೃಹ ಜ್ಯೋತಿ ಡಿ ಲಿಂಕ್ ಸಮಸ್ಯೆ ಇಲ್ಲ:
ಗೃಹ ಜ್ಯೋತಿ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆಯಾದರೂ ಬಾಡಿಗೆ ಮನೆ ಬದಲಿಸುವಾಗ ಹಳೆಯ ಆರ್ ಆರ್ ನಂಬರ್ ಗೆ ಡಿ ಲಿಂಕ್ ಮಾಡಿ ಹೊಸ ಆರ್ ಆರ್ ನಂಬರ್ ಗೆ ಲಿಂಕ್ ಮಾಡುವ ವೇಳೆ ಸಮಸ್ಯೆಯಾಗುತ್ತಿದೆ ಎಂಬ ಪಕ್ಷದ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಜೆ.ಜಾರ್ಜ್, ಆನ್ ಲೈನ್ ಮೂಲಕವೇ ಡಿ ಲಿಂಕ್ ಮತ್ತು ಲಿಂಕ್ ವ್ಯವಸ್ಥೆ ಮಾಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಂದೊಮ್ಮೆ ನಿರ್ದಿಷ್ಟ ವ್ಯಕ್ತಿಗಳಿಗೆ ಸಮಸ್ಯೆ ಕಾಣಿಸಿಕೊಂಡರೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಪ್ರಸ್ತುತ 1.60 ಕೋಟಿ ಕುಟುಂಬಗಳು ಶೂನ್ಯ ಬಿಲ್ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಇದರ ಸಬ್ಸಿಡಿ ಮೊತ್ತ ಸುಮಾರು 9,000 ಕೋಟಿ ರೂ.ಅನ್ನು ಈಗಾಗಲೇ ಸರ್ಕಾರ ಸಂಬಂಧಿಸಿದ ಎಸ್ಕಾಂಗಳಿಗೆ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಆದ್ಯತೆ ನೀಡುವುದರ ಜತೆಗೆ ಬೇಸಿಗೆಯಲ್ಲಿ ಅನ್ಯ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆದು ಗ್ರಾಹಕರಿಗೆ ಪೂರೈಸಿದ್ದು, ವಿದ್ಯುತ್ ಸಮಸ್ಯೆಯಾಗದಂತೆ ಗಮನಹರಿಸಲಾಗಿದೆ. ಪ್ರಸ್ತುತ ರಾಜ್ಯದ ಒಟ್ಟು ಉತ್ಪಾದನೆ ಪೈಕಿ ಶೇ. 65 ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತಿದೆ. ಇದರಿಂದಾಗಿ ಪ್ರಸ್ತುತ ಹೆಚ್ಚುವರಿ ವಿದ್ಯುತ್ ರಾಜ್ಯದಲ್ಲಿ ಲಭ್ಯವಿದೆ. ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆ ನಿವಾರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
Key words: Quick solution, issue, mandatory, OC , electricity connection, Minister, K.J. George
The post ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯ ಸಮಸ್ಯೆಗೆ ಶೀಘ್ರ ಪರಿಹಾರ: ಸಚಿವ ಕೆ.ಜೆ.ಜಾರ್ಜ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.