ಮೈಸೂರು,ಏಪ್ರಿಲ್,25,2025 (www.justkannada.in): ಮೈಸೂರಿನ ಶಿವರಾಂಪೇಟೆ ಬೀದಿಯ ವಿನೋಬಾ ರಸ್ತೆಯಲ್ಲಿರುವ ಶತಮಾನಗಳ ಇತಿಹಾಸವಿರುವ ಎಂ.ಕೆ ಹಾಸ್ಟೆಲ್ ಗೆ ಸೇರಿದ ಖಾಲಿ ಜಾಗ ವಕ್ಫ್ ಆಸ್ತಿ ಎಂದು ನೋಟಿಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪಸಿಂಹ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ವಕ್ಫ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಕ್ಪ್ ಆಸ್ತಿ ವಿಚಾರ ರಾಜ್ಯಾದ್ಯಂತ ದೊಡ್ಡ ಸದ್ದು ಮಾಡಿದ್ದು ಈ ಮಧ್ಯೆ 1916 ರಲ್ಲಿ ಕಡಬದ ನಾರಾಯಣ ಶೆಟ್ಟರು ಸ್ಥಾಪಿಸಿರುವ ಸ್ಟೂಡೆಂಟ್ ಹಾಸ್ಟೆಲ್ ಗೆ ಶತಮಾನಗಳ ಇತಿಹಾಸವಿದೆ. ಈ ಎಂ.ಕೆ ಹಾಸ್ಟೆಲ್ ಜಾಗಕ್ಕೂ ಇದೀಗ ವಕ್ಫ್ ಮಂಡಳಿ ನೋಟಿಸ್ ಜಾರಿಗೊಳಿಸಿದ್ದು, ಮೇ 9 ರ ಒಳಗೆ ಉತ್ತರ ನೀಡುವಂತೆ ಆಂಗ್ಲ ಭಾಷೆಯಲ್ಲಿ ನೋಟೀಸ್ ನೀಡಲಾಗಿದೆ.
ಪೂರ್ವ ಪಶ್ಚಿಮ 54 ಅಡಿ, ಉತ್ತರ ದಕ್ಷಿಣ 100 ಅಡಿ ಒಟ್ಟು 3268 ಚದರ ಅಡಿ ನಮ್ಮ ಸಂಸ್ಥೆಗೆ ಸೇರಿದ್ದು ಎಂದು ಎಂಕೆ.ಹಾಸ್ಟೆಲ್ ವಿಳಾಸಕ್ಕೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಎಂ.ಕೆ ಹಾಸ್ಟೆಲ್ ಮಾಲೀಕರಾದ ಸಿ.ವಿ ರಾಮಚಂದ್ರ ಶೆಟ್ಟಿ, ಎಂ.ಕೆ ಹಾಸ್ಟೆಲ್ ಬಳಿ ಯಾವುದೇ ದಾಖಲೆ ಇಲ್ಲದ ಅನಧಿಕೃತ ಜಾಗ ಇದೆ. ಅಲ್ಲಿ ಈ ಹಿಂದೆ ಲಿಂಗಾಯತ ಸಮುದಾಯಕ್ಕೆ ಸೇರಿದ ಗದ್ದಿಗೆ ಇತ್ತು. ಕಾಲಾಂತರದಲ್ಲಿ ಅಲ್ಲಿ ಕೆಲವರು ಅತಿಕ್ರಮಣ ಮಾಡಿ ಅದನ್ನ ನಮ್ಮ ದರ್ಗ ಎಂದು ಹೇಳುತ್ತಿದ್ದಾರೆ. ಆ ಜಾಗವನ್ನ ತಮ್ಮ ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಜಾಗದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಅವರ ಬಳಿ ಯಾವ ದಾಖಲೆಗಳಿವೆ ಅದನ್ನ ತೋರಿಸಲಿ. ನಾವು ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಇತ್ತೀಚಿನ ಬೆಳವಣಿಗೆಯಲ್ಲಿ ಹಲವಾರು ಸಾರ್ವಜನಿಕ ಸ್ಥಳಗಳನ್ನ ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ಸಾರ್ವಜನಿಕರ ಕೆಲವು ಖಾಸಗಿ ಆಸ್ತಿಗಳನ್ನ ಕಬಳಿಸುವ ಯತ್ನವನ್ನ ವಕ್ಪ್ ಮಂಡಳಿ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ವಕ್ಪ್ ಮಂಡಳಿಗೆ ಬಿಟ್ಟುಕೊಡಲ್ಲ. ಅದು ನಮ್ಮ ಆಸ್ತಿ ಅಂತ ಒಂದೇ ಒಂದು ದಾಖಲೆ ಇದ್ದರೆ ತೋರಿಸಲಿ. ನಾವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಜಾಗವನ್ನ ಬಿಡುವ ಮಾತೇ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕ್ಫ್ ಮಂಡಳಿ ವಿರುದ್ಧ ಪ್ರತಿಭಟನೆ ಆಕ್ರೋಶ
ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೆ ವಕ್ಫ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಮಾಜಿ ಸಂಸದ ಪ್ರತಾಪ ಸಿಂಹ ನೇತೃತ್ವದಲ್ಲಿ ವಕ್ಫ್ ಮಂಡಳಿ ವಿರುದ್ಧ ರಸ್ತೆಗಳಿದು ಪ್ರತಿಭಟನೆ ನಡೆಸಿದರು.
ಎಂ.ಕೆ ಹಾಸ್ಟೆಲ್ ಗೆ ವಕ್ಫ್ ಆಸ್ತಿ ಎಂದು ನೋಟಿಸ್ ವಿಚಾರಕ್ಕೆ ಕಿಡಿ ಕಾರಿದ ಪ್ರತಿಭಟನಾಕಾರರು ಎಂ.ಕೆ ಹಾಸ್ಟೆಲ್ ಬಳಿ ಪ್ರತಿಭಟನೆ ನಡೆಸಿ ವಕ್ಫ್ ನೋಟಿಸ್ ಗೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ವಕ್ಫ್ ನಿಷೇಧ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ, ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ನಾಗೇಂದ್ರ ಸೇರಿದಂತೆ ಕನ್ನಡ ಪರ ಹೋರಾಟಗಾರರು ಭಾಗಿಯಾಗಿದ್ದರು.
Key words: Mysore, Waqf Board, notice, MK Hostel, Protest
The post ಶತಮಾನಗಳ ಇತಿಹಾಸವಿರುವ ಕಟ್ಟಡಕ್ಕೆ ವಕ್ಫ್ ಮಂಡಳಿ ನೋಟಿಸ್: ಪ್ರತಿಭಟನೆ, ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.