ಚಿಕ್ಕಬಳ್ಳಾಪುರ,ಜುಲೈ,2,2025 (www.justkannada.in): ಇಂದು ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 48 ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, 3400 ಕೋಟಿ ರೂ. ಮೊತ್ತವನ್ನು ಮಂಜೂರು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠೀ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಿಷ್ಟು..
ಶೇ 90 ರಷ್ಟು ಬೆಂಗಳೂರು ವಿಭಾಗದ ವಿಷಯಗಳನ್ನೇ ಈ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದೇವೆ. ಒಟ್ಟು 48 ವಿಷಯಗಳು ಚರ್ಚೆಯಾಗಿದೆ. 3400 ಕೋಟಿ ಮೊತ್ತವನ್ನು ಮಂಜೂರು ಮಾಡಿದ್ದೇವೆ. 2050 ಕೋಟಿ ಬೆಂಗಳೂರು ಜಿಲ್ಲಾ ಭಾಗಕ್ಕೇ ಕೊಟ್ಟಿದ್ದೇವೆ. ಎತ್ತಿನಹೊಳೆ ಯೋಜನೆಗೆ ಒಟ್ಟು 23251 ಕೋಟಿ ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17147 ಕೋಟಿ ಖರ್ಚಾಗಿದೆ. ಮೂಲತಃ ಕುಡಿಯುವ ನೀರಿನ ಯೋಜನೆ ಇದಾಗಿದೆ. ಕೆರೆಗಳಿಗೆ ನೀರು ತುಂಬಿಸುವುದು ನಂತರದ ಆದ್ಯತೆ. 24.1 TMC ನೀರಿನಲ್ಲಿ ಕುಡಿಯುವ ನೀರಿಗೆ 14 TMC ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಲು ಸಂಪುಟ ಸಭೆ ತೀರ್ಮಾನ ಮಾಡಲಾಗಿದೆ. ಎರಡು ವರ್ಷಗಳಲ್ಲಿ ಉದ್ದೇಶಿತ ಜಿಲ್ಲೆ, ತಾಲ್ಲೂಕುಗಳಿಗೆ ನೀರು ಕೊಡ್ತೀವಿ ಎಂದು ಭರವಸೆ ನೀಡಿದರು.
9807ಕೋಟಿ ಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಲ್ ನ ಕೆಲಸ 85% ಮಗಿದಿದೆ . ಹೆಚ್ಚುವರಿಯಾಗಿ ಇದಕ್ಕೆ 8000 ಕೋಟಿ ಬೇಕಾಗಿದೆ. ಬಾಕಿ ಉಳಿದಿರುವುದು 6000 ಚಿಲ್ಲರೆ ಕೋಟಿ. ಒಟ್ಟು 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಕೊಡುತ್ತೇವೆ . ಈ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ನಿರ್ಣಯಿಸಲು ತೀರ್ಮಾನಿಸಲಾಗಿದೆ . ಬೆಂಗಳೂರು ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿ 2250 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಪ್ರತೀ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು ಇದಕ್ಕೆ 1125.25 ಕೋಟಿ ಮಂಜೂರು ಮಾಡಲಾಗಿದೆ
ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳನ್ನೇ ಪ್ರಮುಖವಾಗಿ ಚರ್ಚಿಸಲಾಗಿದೆ. ಹಿಂದುಳಿದ ವರ್ಗದ ಅಭ್ಯರ್ಥಿಗಳು IAS, IRS, IPS ಸೇರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ 10 ಕೋಟಿ ವೆಚ್ಚದ ಎರಡು ವಸತಿ ಶಾಲೆ ಬೆಂಗಳೂರಿನಲ್ಲಿ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಕೇಂದ್ರ ವಿವಿಗೆ “ಡಾ.ಮನಮೋಹನ್ ಸಿಂಗ್ ಬೆಂಗಳೂರು ಸಿಟಿ ವಿವಿ” ಹೆಸರು
ಬೆಂಗಳೂರು ಕೇಂದ್ರ ವಿವಿಗೆ “ಡಾ.ಮನಮೋಹನ್ ಸಿಂಗ್ ಬೆಂಗಳೂರು ಸಿಟಿ ವಿವಿ” ಎಂದು ಹೆಸರಿಡಲು ತೀರ್ಮಾನ ಮಾಡಲಾಗಿದೆ. PHC ಗಳಿಲ್ಲದ ಹೊಸ ತಾಲ್ಲೂಕುಗಳಲ್ಲಿ CHC ಗಳನ್ನು ಆರಂಭಿಸಲು ತೀರ್ಮಾನ ಮಾಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ “ಬೆಂಗಳೂರು ಉತ್ತರ ತಾಲ್ಲೂಕು” ಎಂದು ಬಾಗೇಪಲ್ಲಿಗೆ “ಭಾಗ್ಯನಗರ” ಎಂದು ಹೆಸರಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಂದಿ ಬೆಟ್ಟದಲ್ಲಿ ನಡೆದ ಈ ಸಭೆಯು ಈ ವರ್ಷದ 14 ನೇ ಸಭೆಯಾಗಿದೆ. ನಾವು ಆಡಳಿತವನ್ನು ಬೆಂಗಳೂರು ಕೇಂದ್ರಿತ ಎಂಬುದನ್ನು ತಪ್ಪಿಸಿ ವಿಕೇಂದ್ರೀಕರಣ ಮಾಡುವುದಕ್ಕಾಗಿಯೆ ಆಯಾ ಭಾಗದ ಸಮಸ್ಯೆಗಳ ಮೇಲೆ ಗಮನ ಹರಿಸಿ ಅವುಗಳಿಗೆ ಚಿಕಿತ್ಸಕ ಪರಿಹಾರ ನೀಡುವ ಉದ್ದೇಶದಿಂದ ಸಚಿವ ಸಂಪುಟ ಸಭೆಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಸುತ್ತಿದ್ದೇವೆ. ಮೊದಲಿಗೆ ಕಲ್ಬುರ್ಗಿಯಲ್ಲಿ, ಆ ನಂತರ ಮಲೈ ಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಸಿದ್ದೆವು. ಮೂರನೆಯದಾಗಿ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸುತ್ತಿದ್ದೇವೆ.
ಈ ಸಚಿವ ಸಂಪುಟ ಸಭೆಯಲ್ಲಿ ನಾವು 3400 ಕೋಟಿ ರೂಗಳಿಗೆ ಅನುಮೋದನೆ ನೀಡಿದ್ದೇವೆ. ಈ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ನೀರಾವರಿ, ಪ್ರವಾಸೋದ್ಯಮ, ರಸ್ತೆ- ಸೇತುವೆ ಮುಂತಾದ ವಿಷಯಗಳಿಗೆ ಆದ್ಯತೆ ನೀಡಿ ಅನುಮೋದನೆ ನೀಡಲಾಗಿದೆ. ಈ ಸಭೆಯಲ್ಲಿ ಅತ್ಯಂತ ಮುಖ್ಯವಾಗಿ ಕುಡಿಯುವ ನೀರಿನ ಯೋಜನೆಗಳು ಅದರಲ್ಲೂ ಮುಖ್ಯವಾಗಿ ಎತ್ತಿನ ಹೊಳೆ ಯೋಜನೆಯ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಕಳೆದ ವರ್ಷವೇ ಎತ್ತಿನ ಹೊಳೆಯ ನೀರನ್ನು ಎತ್ತಿನ ಯಶಸ್ವಿಯಾಗಿ ಹರಿಸಲಾಯಿತು.
ಸಭೆಯಲ್ಲಿ ನಾವು ಎತ್ತಿನಹೊಳೆ ಯೋಜನೆಯನ್ನು ವೇಗಗೊಳಿಸಲು ಹಾಗೂ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಹಳ್ಳಿಗಳಿಗೆ ಹರಿಸಲು ನಿರ್ದೇಶನಗಳನ್ನು ನೀಡಲಾಯಿತು. ಇದರಲ್ಲಿ ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ಸಂಬಂಧಿಸಿದಂತೆ 31 ವಿಷಯಗಳಿಗೆ 2525 ಕೋಟಿ ರೂಗಳನ್ನು ಒದಗಿಸುವ ಕಾಮಗಾರಿ/ ಯೋಜನೆಗಳ ಕುರಿತು ಚರ್ಚಿಸಿ ಅನುಮೋದನೆ ನೀಡಲಾಯಿತು. ಶಿಕ್ಷಣಕ್ಕೆ- 1627.25 ಕೋಟಿ ರೂ ನೀಡಿದ್ದೇವೆ. ಇದರಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಮೂಲಭೂತ ಸೌಕರ್ಯ ಒದಗಿಸುತ್ತಿದ್ದೇವೆ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಬೆಂಗಳೂರಿನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಎರಡು ವಸತಿ ನಿಲಯ ನಿರ್ಮಿಸಲು ತೀರ್ಮಾನಿಸಿದ್ದೇವೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ 1125.25 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ ನೀಡಿದ್ದೇವೆ. ನೀರಾವರಿ ಯೋಜನೆಗಳಿಗೆ – 1154 ಕೋಟಿ ನೀಡಿದ್ದೇವೆ. ಇದರಲ್ಲಿ 237 ಕೋಟಿ ರೂಗಳನ್ನು ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ 164 ಕೆರೆಗಳಿಗೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಈ ಭಾಗದಲ್ಲಿ ಅತಿ ಹೆಚ್ಚಾಗಿ ಗುಣಮಟ್ಟದ ಹೂ ಬೆಳೆಯುತ್ತಾರೆ. ಆದ್ದರಿಂದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವನ್ನು 10 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ಮಾಡಲಾಗಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಎಪಿಎಂಸಿ ವತಿಯಿಂದ 141.5 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 46 ಕೋಟಿ ರೂ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಹಾಗೂ 21.40 ಕೋಟಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿಯಲ್ಲಿನ ಮೆಡಿಕಲ್ ಕಾಲೇಜುಗಳಿಗೆ ಎಂಆರ್ ಐ ಯಂತ್ರಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಹಾಗೂ 56 ಕೋಟಿ ರೂ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಪಿಎಚ್ ಸಿ, ಹಾಗೂ ಮಂಚೇನಹಳ್ಳಿಯ ಆಸ್ಪತ್ರೆಗಳನ್ನು ಉನ್ನತೀಕರಿಸಲು ಹಾಗೂ ಹೆಚ್ಚುವರಿ ಕಾಮಗಾರಿ ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ. ಒಟ್ಟಾರೆ 123 ಕೋಟಿ ರೂ ವೆಚ್ಚದಲ್ಲಿ ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಈ ಸಭೆಯಲ್ಲಿ ನಾವು ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣ ಮಾಡಿದ್ದೇವೆ. ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಹೆಸರಿಡಲು ತೀರ್ಮಾನಿಸಿದ್ದೇವೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲಿಸಲು ಶ್ರೀಯುತ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಒಟ್ಟಾರೆ ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು / ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Cabinet Meeting, Nandi Hills, CM, Siddaramaiah
The post ಸಂಪುಟ ಸಭೆಯಲ್ಲಿ 48 ವಿಷಯಗಳ ಚರ್ಚೆ, 3400 ಕೋಟಿ ರೂ. ಮೊತ್ತ ಮಂಜೂರು- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.