ಬೆಂಗಳೂರು,ಏಪ್ರಿಲ್,26,2025 (www.justkannada.in): ನಿನ್ನೆ ಅನಾರೋಗ್ಯದಿಂದ ನಿಧನರಾದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಮಾಜಿ ಮುಖ್ಯಸ್ಥರು, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಕಸ್ತೂರಿ ರಂಗನ್ ಅವರ ಅಂತ್ಯಕ್ರಿಯೆಯನ್ನ ಸಕಲ ಸರ್ಕಾರಿಗೌರವದೊಂದಿಗೆ ನೆರವೇರಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ರಾಜ್ಯಪಾಲರ ಆಜ್ಞಾನುಸಾರ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ-1 ಬಾಣದರಂಗಯ್ಯ ಅವರು ಆದೇಶ ಹೊರಡಿಸಿದ್ದಾರೆ.
ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಮಾಜಿ ಮುಖ್ಯಸ್ಥರು, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಕಸ್ತೂರಿ ರಂಗನ್ ದಿ.25.04.2025 ರಂದು ನಿಧನರಾಗಿರುತ್ತಾರೆ. ಸದರಿಯವರ ನಿಧನಕ್ಕೆ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಸ್ತೂರಿ ರಂಗನ್ ಅವರು ನಿನ್ನೆ ಬೆಂಗಳೂರಿನ ಕೊಡಿಗೇನಹಳ್ಳಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಸ್ತೂರಿ ರಂಗನ್ ಅವರಿಗೆ 84 ವರ್ಷ ವಯಸ್ಸಾಗಿತ್ತು.
1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು, ಅನೇಕ ರಾಕೆಟ್ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಕಸ್ತೂರಿ ರಂಗನ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಅಂದು ಬೆಳಿಗ್ಗೆ 10ರಿಂದ 12ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ನಂತರ ಅಂತ್ಯಕ್ರಿಯೆ ನೆರವೇರಲಿದೆ ಎನ್ನಲಾಗುತ್ತಿದೆ.
Key words: Former ISRO Chairman, Dr. K. Kasturirangan, funeral, honours
The post ಸಕಲ ಸರ್ಕಾರಿ ಗೌರವದೊಂದಿಗೆ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಅಂತ್ಯಕ್ರಿಯೆಗೆ ನಿರ್ಧಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.