ಬೆಂಗಳೂರು,ಜೂನ್,10,2025 (www.justkannada.in): ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯನ್ನು ತಿರುಚಿ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಹೇಳಿಕೆಗಳನ್ನು ತಿರುಚುವುದರಲ್ಲಿ ಅವರು ನಿಸ್ಸಿಮರು ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನಸೌಧ ಮೆಟ್ಟಿಲುಗಳಿಗೆ ಮುಖ್ಯಮಂತ್ರಿಗಳು ಸೀಮಿತ ಅಲ್ಲ. ಖಾಸಗಿ ಕಾರ್ಯಕ್ರಮ ಹಿನ್ನೆಲೆ ಜವಾಬ್ದಾರಿ ತೆಗೆದುಕೊಳ್ಳಲ್ಲ ಎಂದಿದ್ದಾರೆ. ಆದರೆ ಸಿಎಂ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ ಸರ್ಕಾರದ್ದಾಗಿರಲಿಲ್ಲ. ಖಾಸಗಿ ಸಂಸ್ಥೆಯವರ ಪತ್ರ ಆಧರಿಸಿ ಸಿಬ್ಬಂದಿಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿ. ಈ ರೀತಿ ಹೇಳಿರುವುದರಲ್ಲಿ ಮುಖ್ಯಮಂತ್ರಿ ಯವರ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಸುಳ್ಳನ್ನ ಸತ್ಯ ಮಾಡುತ್ತಾರೆ. ಸತ್ಯವನ್ನು ಸುಳ್ಳು ಮಾಡ್ತಾರೆ. ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಹೇಳಿಕೆ ತಿರುಚುವುದರಲ್ಲಿ ನಿಸ್ಸಿಮರು. ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ. ತನಿಖಾ ವರದಿ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಇದನ್ನು ಹೊರತು ಪಡಿಸಿ ನಾವು ಇನ್ನೇನು ಮಾಡಬಹುದು ಹೇಳಿ. ಪದೇ ಪದೇ ರಾಜೀನಾಮೆ ಕೊಡಬೇಕು ಅಂತಾ ಬಿಜೆಪಿ ಆಗ್ರಹಿಸಿದ್ದಾರೆ. ಹಾಗಾದರೇ ಎಲ್ಲರಿಗೂ ಒಂದೇ ಮಾನದಂಡ ಬೇಕು. ಉತ್ತರ ಪ್ರದೇಶದ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಈವರೆಗೂ ಪರಿಹಾರ ನೀಡಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ. ಕುಂಭಮೇಳ ಕಾಲ್ತುಳಿತಕ್ಕೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಲೀ ಕಾರ್ಯಕ್ರಮ ಆಯೋಜನೆ ಮಾಡಿ ಸಾಧಿಸಿದ್ದೇವೆ ಎಂದು ಬಿಂಬಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಬೇರೆ ಯಾರಾದರೂ ರಾಜೀನಾಮೆ ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು.
Key words: BJP, turning, truth into lies, Minister, Priyank Kharge
The post ಸತ್ಯವನ್ನ ಸುಳ್ಳು, ಸುಳ್ಳನ್ನ ಸತ್ಯ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸಿಮರು- ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.