ಬೆಂಗಳೂರು,ಮಾರ್ಚ್,27,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ 3ನೇ ಬಾರಿ ಹಾಲಿನ ದರ ಏರಿಕೆ ಮಾಡಿದೆ. ಈ ಮೂಲಕ ಮತ್ತೊಮ್ಮೆ ಬಡವರಿಗೆ ಗಾಯದ ಮೇಲೆ ಬರೆ ಎಳೆದಿದ್ದೀರಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 20 ತಿಂಗಳಿನಲ್ಲಿ ಹಾಲಿನ ದರವನ್ನ ಮೂರು ಬಾರಿ ಒಟ್ಟು 9 ರೂಪಾಯಿ ಹೆಚ್ಚಿಸಿದ್ದೀರಿ. 2023ರ ಆಗಸ್ಟ್ ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ 2024 ಜೂನ್ ನಲ್ಲಿ 2 ರೂಪಾಯಿ ಏರಿಕೆ ಆಯ್ತು. ಈಗ ಮತ್ತೊಮ್ಮೆ ಏಕಾಏಕಿ 4 ರೂಪಾಯಿ ಹೆಚ್ಚಾಗಿದೆ.
ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ದಿನಬಳಕೆ ವಸ್ತುಗಳ ಬೆಲೆಯಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ. ಒಂದು ವೇಳೆ ಗ್ರಾಹಕರ ಮೇಲೆ ಹೊರೆ ಹೊರಿಸುವುದು ಅನಿವಾರ್ಯವಾದರೆ, ಹೆಚ್ಚಳ ಮಾಡಿರುವ ₹4 ರೂಪಾಯಿ ನೇರವಾಗಿ ಹಾಲು ಉತ್ಪಾದಕರ ಕೈಸೇರುವಂತೆ ನೋಡಿಕೊಳ್ಳಿ. ಆಡಳಿತ ವೆಚ್ಚ, ಮತ್ತೊಂದು ವೆಚ್ಚ ಎಂದು ಅತ್ತ ರೈತರಿಗೂ ಲಾಭವಿಲ್ಲದೆ ಇತ್ತ ಗ್ರಾಹಕರ ಜೇಬಿಗೂ ಕತ್ತರಿ ಹಾಕಿದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ, ಎಚ್ಚರಿಕೆ ಎಂದು ಸರ್ಕಾರದ ವಿರುದ್ದ ಆರ್.ಅಶೋಕ್ ಹರಿಹಾಯ್ದಿದ್ದಾರೆ.
Key words: Milk rate, rise, government, R. Ashok
The post ಸರ್ಕಾರದಿಂದ 3ನೇ ಬಾರಿ ಹಾಲಿನ ದರ ಏರಿಕೆ: ಮತ್ತೊಮ್ಮೆ ಬಡವರಿಗೆ ಗಾಯದ ಮೇಲೆ ಬರೆ- ಆರ್.ಅಶೋಕ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.