ಬೆಂಗಳೂರು ಏಪ್ರಿಲ್, 21,2025 (www.justkannada.in): ಕರ್ನಾಟಕ ಪ್ರಗತಿಪರ ರಾಜ್ಯ. ಬಹುತೇಕ ಸರ್ಕಾರಿ ನೌಕರರ ಪ್ರಾಮಾಣಿಕ ಕರ್ತವ್ಯಪ್ರಜ್ಞೆಯಿಂದ ರಾಜ್ಯ ಆರ್ಥಿಕವಾಗಿ ಪ್ರಗತಿ ಸಾಧಿಸಿದೆ. ನಿಮ್ಮ ಕಾರಣದಿಂದ ರಾಜ್ಯ GST ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದರು.
ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ಉದ್ಘಾಟಿಸಿ, 2023 ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಸಮಾಜದ ನಾಲ್ಕೂ ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗದ ಕೆಲಸ ಸಂವಿಧಾನದ ಆಶಯವನ್ನು ಈಡೇರಿಸುವುದೇ ಆಗಿದೆ. ಸಂವಿಧಾನದ ಆಶಯದಂತೆ ಜಾತ್ಯತೀತ ಸಮಾಜ ನಿರ್ಮಿಸಿ, ಜಾತಿ ಅಸಮಾನತೆಯನ್ನು ಅಳಿಸುವುದಾಗಿದೆ ಎಂದರು.
ಬುದ್ದ, ಬಸವ, ಗಾಂಧಿ ಹೇಳಿದ್ದನ್ನೇ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಇವರೆಲ್ಲರ ಆಶಯದಂತೆ ನಾವು ಸಂವಿಧಾನ ಪಾಲಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.
5.5 ಲಕ್ಷ ಸರ್ಕಾರಿ ನೌಕರರಿಗೆ ಇವತ್ತಿನ ಪ್ರಶಸ್ತಿ ಪುರಸ್ಕೃತರು ಸ್ಫೂರ್ತಿಯಾಗಬೇಕು. ಪ್ರಶಸ್ತಿ ಪುರಸ್ಕೃತರ ಜವಾಬ್ದಾರಿ ಈಗ ಹೆಚ್ಚಾಗಿದೆ. ಹೀಗಾಗಿ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯಪ್ರಜ್ಞೆ ಹೆಚ್ಚಿಸಿಕೊಂಡು ಜನರ ಸೇವೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದರು.
ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗದ ಹೊರತು ನಮಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಹೀಗಾಗಿ ಅಸಮಾನತೆಯನ್ನು ಬೇರು ಸಹಿತ ಕಿತ್ತು ಹಾಕುವ ದಿಕ್ಕಿನಲ್ಲಿ ನಾವು ಕರ್ತವ್ಯ ನಿರ್ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
Key words: State Government Employees Day , honest, CM Siddaramaiah
The post ಸರ್ಕಾರಿ ನೌಕರರ ಪ್ರಾಮಾಣಿಕ ಕರ್ತವ್ಯ ಪ್ರಜ್ಞೆಯಿಂದ ರಾಜ್ಯ ಆರ್ಥಿಕವಾಗಿ ಪ್ರಗತಿ ಸಾಧಿಸಿದೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.