ಬೆಂಗಳೂರು , ಏಪ್ರಿಲ್, 15,2026 (www.justkannada.in): ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕರ್ನಾಟಕ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕದ ಬಹುಮುಖ ಪರಂಪರೆಯನ್ನು ಪ್ರತಿನಿಧಿಸುವ ಕನ್ನಡ ಸಾಮರಸ್ಯದ ನೆಲೆಗಳ 41 ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕನ್ನಡ ಸಾಮರಸ್ಯ ನೆಲೆ ಯೋಜನೆಯಡಿ ನೂರು ಪುಸ್ತಕಗಳನ್ನು ಹೊರತರಲು ಉದ್ದೇಶಿಸಿದ್ದು, ಉಳಿದ 59 ಪುಸ್ತಕಗಳು ಸಹ ಶೀಘ್ರ ಬಿಡುಗಡೆಯಾಗಲಿದ್ದು ಇಂದು ಬಿಡುಗಡೆಯಾಗಿರುವ ಎಲ್ಲವೂ ಯೋಗ್ಯವಾದ ಪುಸ್ತಕಗಳಾಗಿವೆ. ನಮ್ಮ ದೇಶದಲ್ಲಿ ಅನೇಕ ಭಾಷೆ ಧರ್ಮ ಸಂಸ್ಕೃತಿಗಳು ಇದ್ದು, ರಾಜ್ಯದಲ್ಲಿಯೂ ವೈವಿಧ್ಯತೆ ಇದೆ. ಇದರಲ್ಲಿಯೇ ಏಕತೆಯನ್ನು ನಾವು ಸಾಧಿಸಿದ್ದೇವೆ ಎಂದರು.
ಸಾಮಾಜಿಕ ವ್ಯವಸ್ಥೆ ನೂರಕ್ಕೆ ನೂರು ಬದಲಾವಣೆಯಾಗಿಲ್ಲ
ಬಸವ, ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧನಿಂದ ಹಿಡಿದು ಅನೇಕರು ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದ್ದಾರೆ. ಸಂವಿಧಾನ ಜಾರಿಯಾದ ನಂತರ ಸಮಾಜದ ಸುಧಾರಣೆಯಲ್ಲಿ ವೇಗ ಹೆಚ್ಚಿದೆ ಯಾದರೂ ಸಾಮಾಜಿಕ ವ್ಯವಸ್ಥೆ ನೂರಕ್ಕೆ ನೂರು ಬದಲಾವಣೆಯಾಗಿಲ್ಲ ಎಂದರು.
ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು
ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು ಎಂದರು. ಬಸವಣ್ಣ ಹೇಳಿದ ಇವ ನಮ್ಮವ ಎನ್ನುವ ಭಾವನೆ ಎಲ್ಲರಲ್ಲಿ ಬರಬೇಕು. ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡಲೆಂದೇ ಮನುವಾದ ಎಂಬ ವರ್ಗವಿದೆ. ಕರ್ಮ ಸಿದ್ಧಾಂತವನ್ನು ವಿದ್ಯಾವಂತರು ನಂಬುವುದು ನಮ್ಮ ಸಮಾಜದ ದೊಡ್ಡ ದುರಂತ ಎಂದರು.
ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆಯುಳ್ಳ ಶಿಕ್ಷಣ ಅಗತ್ಯ
ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ನಮ್ಮಲ್ಲಿ ಬರಬೇಕು. ಈ ಗುಣಗಳು ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ. ಬದುಕುವ ದಾರಿ ಮಾತ್ರ ಎಂದರು.
ಯುವಕರಲ್ಲಿ ಮಾನವೀಯತೆ ಹೆಚ್ಚಬೇಕು
ಯುವಕರಲ್ಲಿ ಮಾನವೀಯತೆ ಹೆಚ್ಚಾಗಬೇಕೆನ್ನುವ ನಿಟ್ಟಿನಲ್ಲಿ ಇಂದು ಬಿಡುಗಡೆಯಾಗಿರುವ ಪುಸ್ತಕಗಳು ಪ್ರಯೋಜನಕಾರಿಯಾಗಲಿವೆ. ಇವು ಯುವಜನರನ್ನು ತಲುಪದೇ ಹೋದರೆ, ಅದರಿಂದ ಬದಲಾವಣೆಯಾಗದೆ ಹೋದರೆ ಅದರ ಉದ್ದೇಶ ಸಫಲವಾಗುವುದಿಲ್ಲ ಎಂದರು.
ಪುಸ್ತಕಗಳು ಯುವ ಪೀಳಿಗೆಯನ್ನು ಹೆಚ್ಚು ತಲುಪಲಿ
ಇಂದಿನ ಪೀಳಿಗೆ ಪಂಪ, ಕನಕದಾಸರು, ಬಸವಣ್ಣ, ಕುವೆಂಪು ಮುಂತಾದವರ ಬಗ್ಗೆ ತಿಳಿದುಕೊಳ್ಳಬೇಕು. ಈ ಪುಸ್ತಕಗಳನ್ನು ಹೊರತಂದಿರುವುದು ಉತ್ತಮ ಕೆಲಸ ಎಂದರು.
ದ್ವೇಷ ಬಿತ್ತುವವರ ಬಗ್ಗೆ ಎಚ್ಚರಿಕೆ ಅಗತ್ಯ
ದೇವರು ದೇವಸ್ಥಾನಗಳ ಬಗ್ಗೆ ಬಸವಣ್ಣನವರಿಗೆ ನಂಬಿಕೆ ಇರಲಿಲ್ಲ. ಕುವೆಂಪುರವರು ಗುಡಿ, ಚರ್ಚ್ ಮಸೀದಿಗಳನ್ನು ಬಿಟ್ಟು ಹೊರಬರಲು ಕರೆ ನೀಡಿದರು. ಮನುಷ್ಯತ್ವವಿಲ್ಲದೆ ಪೂಜೆ ಮಾಡಿದರೆ ಫಲ ದೊರಕುವುದಿಲ್ಲ. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಮನುಷ್ಯರು ಪರಸ್ಪರರನ್ನು ಪ್ರೀತಿಸಬೇಕು ಎಂದರು. ದ್ವೇಷ ಬಿತ್ತುವವರ ಬಗ್ಗೆ ಜನತೆ ಜಾಗೃತರಾಗಿರಬೇಕು. ಇದು ರಾಜಕಾರಣಕ್ಕಾಗಿ ಮಾಡುವ ಕೆಲಸ. ಶೋಷಣೆ ಮಾಡಲು ಜಾತಿ ವ್ಯವಸ್ಥೆ ಅಗತ್ಯ ಎಂದು ಭಾವಿಸುವವರು ಸಮಾಜದಲ್ಲಿ ಇದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕ ರಿಜ್ವಾನ್ ಅರ್ಷದ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಮೇಲ್ಮನೆ ಸದಸ್ಯ ಭೋಜೆಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುನಾಥ್, ಉಪಸ್ಥಿತರಿದ್ದರು.
Key words: equal society, freedom, equality fraternity, CM Siddaramaiah
The post ಸ್ವಾತಂತ್ರ್ಯ, ಸಮಾನತೆ ಭ್ರಾತೃತ್ವ ಸರಿಯಾಗಿ ಅರ್ಥ ಮಾಡಿಕೊಂಡರೇ ಸಮ ಸಮಾಜ ನಿರ್ಮಾಣ ಸಾಧ್ಯ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




