ಮೈಸೂರು, ಮಾರ್ಚ್,19,2025 (www.justkannada.in): ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಅವರು ಇಂದು ತಾಲ್ಲೂಕಿನ ದೊಡ್ಡ ಹೆಜ್ಜೂರು, ಕಿರಂಗೂರು ಹಾಗೂ ಉಮ್ಮತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಾಡಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ಮೊದಲಿಗೆ ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಬಳಿ ಇಂದಿಗೂ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯನಿರ್ವಹಿಸದ ಬಗ್ಗೆ ಪ್ರಶ್ನಿಸಿದರು. ಜೊತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೇಡಿಕೆ ಮತ್ತು ವಸೂಲಾತಿ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು.
ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ 15ನೇ ಹಣಕಾಸು ಯೋಜನೆಯಡಿ ನಿರ್ಮಾಣಗೊಂಡಿರುವ ಶೌಚಾಲಯ ಕಾಮಗಾರಿ ಪರಿಶೀಲನೆ ಮಾಡಿದರು. ಜೊತೆಗೆ ಶಾಲೆಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿರುವುದರ ಕುರಿತು ಮಾಹಿತಿ ಪಡೆದರು.
ಬಳಿಕ ಕಿರಂಗೂರಿನ ಶಂಕರಪುರ ಹಾಡಿಗೆ ತೆರಳಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಅಲ್ಲಿನ ಸ್ಥಳೀಯರು ವಸತಿ ಕುರಿತು ಬೇಡಿಕೆ ಸಲ್ಲಿಸಿದ್ದು, ಒಂದೇ ಮನೆಯಲ್ಲಿ ಒಂದೆರಡು ಕುಟುಂಬಗಳು ಹೆಚ್ಚಾಗಿ ವಾಸವಿದ್ದು, ನಿವೇಶನ ವಂಚಿತರಾದವರಿಗೆ ಸೂಕ್ತ ವಸತಿ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಬಳಿಕ ಉಮ್ಮತ್ತೂರು ಗ್ರಾಮ ಪಂಚಾಯಿತಿಯ ನಲ್ಲೂರು ಪಾಲ ಆಶ್ರಮ ಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಮಾಡಿದ್ದು, ಇಲ್ಲಿನ ಹಂಗಾಮಿ ಶಿಕ್ಷಕರಿಗೆ ನಿಗಧಿತ ಸಮಯಕ್ಕೆ ವೇತನ ಪಾವತಿಯಾಗದಿರುವ ಕುರಿತ ಸಮಸ್ಯೆ ಆಲಿಸಿದರು. ಜೊತೆಗೆ ಶಾಲೆಗಳಲ್ಲಿ ಸಮರ್ಪಕ ಮೂಲಭೂತ ಸೌಕರ್ಯ ಮತ್ತು ಹೊಸದಾಗಿ ಶಾಲಾ ಶೌಚಾಲಯವನ್ನು ಮ-ನರೇಗಾದಿಂದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಡಿಒ ಅವರಿಗೆ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಎಇಇ ಪುಟ್ಟರಾಜು, ಪಿ.ಆರ್.ಇ.ಡಿ. ಅಭಿಯಂತರರು, ಸಿಡಿಪಿಒ ಅಧಿಕಾರಿ ಹರೀಶ್, ಪರಿಶಿಷ್ಟ ಪಂಗಡ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್, ತಾಲ್ಲೂಕು ಯೋಜನಾಧಿಕಾರಿ ಎಂ.ಎಸ್.ರಾಜೇಶ್, ನರೇಗಾ ಸಹಾಯಕ ನಿರ್ದೇಶಕರ ಎಸ್. ಗಿರಿಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವ. ಕೆ, ಟಿ.ಭವ್ಯ, ಮ-ನರೇಗಾ ಸಹಾಯಕ ಇಂಜಿನಿಯರ್ ನಂದ ಶ್ರೀನಿವಾಸ್, ಮದನ್, ಅನಿಲ್ ಸೇರಿದಂತೆ ಕಾರ್ಯದರ್ಶಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Key words: mysore, ZP, CEO, Visit, Hadi Area
The post ಹಾಡಿ ಪ್ರದೇಶಕ್ಕೆ ಜಿಪಂ ಸಿಇಓ ಭೇಟಿ: ಅಹವಾಲು ಸ್ವೀಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.