ಬೆಂಗಳೂರು,ಜುಲೈ,3,2026 (www.justkannada.in): ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ತೋಖನ್ ಸಾಹು ಅವರನ್ನು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಭೇಟಿಯಾಗಿ ಅನುದಾನ ಬಿಡುಗಡೆಗೆ ಮನವಿ ಮಾಡಿದರು.
ಬೆಂಗಳೂರಿಗೆ ಆಗಮಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ತೋಖನ್ ಸಾಹು ಅವರನ್ನು ಕುಮಾರಕೃಪ ಅತಿಥಿಗೃದಲ್ಲಿ ಭೇಟಿ ಮಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕದ ಅರ್ಹ ನಗರಾಭಿವೃದ್ಧಿ ಸಂಸ್ಥೆಗಳಿಗೆ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ) 2025-26ನೇ ಹಣಕಾಸು ವರ್ಷಕ್ಕೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ₹887 ಕೋಟಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
15ನೇ ಹಣಕಾಸು ಆಯೋಗದ ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರ ವಿಧಿಸಿದ್ದ ಎಲ್ಲಾ ಷರತ್ತುಗಳನ್ನು ಕರ್ನಾಟಕ ಸರ್ಕಾರ ಪೂರೈಸಿದೆ. ಅಲ್ಲದೆ, ಸಚಿವಾಲಯವು ಕೋರಿದ್ದ ಎಲ್ಲಾ ಅಗತ್ಯ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರವು ಎಲ್ಲಾ ನಿಯಮಗಳನ್ನು ಪಾಲಿಸಿದ್ದರೂ, ಕೇಂದ್ರ ಸರ್ಕಾರದಿಂದ ಈವರೆಗೂ ಯಾವುದೇ ರೀತಿಯ ಅನುದಾನದ ಹಣ ಬಿಡುಗಡೆಯಾಗಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ನಿಗದಿತ ಸಮಯದಲ್ಲಿ ಹಣ ಬಿಡುಗಡೆಯಾಗದಿದ್ದರೆ ಸ್ಥಳೀಯ ಸಂಸ್ಥೆಗಳ ಮೂಲಸೌಕರ್ಯ ಯೋಜನೆಗಳಿಗೆ ತೊಂದರೆಯಾಗಲಿದೆ.
ಈ ಅನುದಾನವು ಬಿಡುಗಡೆಯಾದರೆ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಸರಬರಾಜು,ನೈರ್ಮಲ್ಯೀಕರಣ ಮತ್ತು ಸ್ವಚ್ಛತೆ, ,ಘನತ್ಯಾಜ್ಯ ನಿರ್ವಹಣೆ, ಇತರೆ ಮೂಲಭೂತ ಕಾರ್ಯಗಳು ಹಾಗೂ ತುರ್ತು ನಾಗರಿಕ ಸೌಲಭ್ಯಗಳ ಅನುಷ್ಠಾನಗೊಳಿಸಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಕರ್ನಾಟಕದ ನಗರ ಪ್ರದೇಶಗಳ ಸುಸ್ಥಿರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಸಚಿವಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬಾಕಿ ಇರುವ ₹887 ಕೋಟಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
ಪೌರಾಡಳಿತ ನಿರ್ದೇಶಕರಾದ ಪಿ.ಎನ್.ರವೀಂದ್ರ ಅವರು ಉಪಸ್ಥಿತರಿದ್ದರು.
Key words: Union Minister, Meet, Minister, Yathindra Siddaramaiah, release, funds
The post ಕೇಂದ್ರ ಸಚಿವರ ಭೇಟಿ: ಅನುದಾನ ಬಿಡುಗಡೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




