26
June, 2026

A News 365Times Venture

26
Friday
June, 2026

A News 365Times Venture

ತೆರಿಗೆ ವಂಚನೆ ಮತ್ತು ತೆರಿಗೆ ಸೋರಿಕೆ ಸಂಪೂರ್ಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಸಿಎಂ ಡಿಕೆಶಿ ಸೂಚನೆ

Date:

ಬೆಂಗಳೂರು,ಜೂನ್,26,2026 (www.justkannada.in): ತೆರಿಗೆ ವಂಚನೆಗೆ ಯಾವುದೇ ಅವಕಾಶ ನೀಡಬಾರದು. ತೆರಿಗೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಾಣಿಜ್ಯ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ತಾಕೀತು ಮಾಡಿದರು.

ಇಂದು  ವಿಧಾನಸೌಧದಲ್ಲಿ ನಡೆದ ವಾಣಿಜ್ಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅಧಿಕಾರಿಗಳಿಗೆ ನೀಡಿದ  ಸ್ಪಷ್ಟ ಸೂಚನೆಗಳು ಹೀಗಿವೆ…

ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ಕಾರದ ಶಕ್ತಿ. ನೀವು ಶಕ್ತಿ ಕೊಡದಿದ್ದರೆ ಸರ್ಕಾರ ನಡೆಸುವುದು ಕಷ್ಟ. ವಾಣಿಜ್ಯ ತೆರಿಗೆ ಇಲಾಖೆಗೆ ಪ್ರಸ್ತುತ ಹಣಕಾಸು ವರ್ಷಕ್ಕೆ ನೀಡಿರುವ ತೆರಿಗೆ ಸಂಗ್ರಹದ ಗುರಿಯನ್ನು ಮೀರಿ ಸಾಧನೆ ತೋರಿಸುತ್ತೀರೆಂಬ ವಿಶ್ವಾಸ ನನಗಿದೆ. ಆರ್ಥಿಕ ಇಲಾಖೆ ಅಧಿಕಾರಿಗಳು, ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್‌ ಅವರು ಹಾಗೂ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್‌ ಅವರು ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಹಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜವಾಬ್ದಾರಿ ಈಗ ನಿಮ್ಮೆಲ್ಲರ ಮೇಲಿದೆ. ಅಧಿಕಾರಿಗಳ ಮೇಲೆ ನನಗೆ ಪೂರ್ತಿ ಭರವಸೆ ಇದೆ. ನೀವೆಲ್ಲಾ ನನ್ನ ನಿರೀಕ್ಷೆ ಈಡೇರಿಸಲು ಶ್ರಮಿಸುತ್ತೀರಿ ಎನ್ನುವ ವಿಶ್ವಾಸವೂ ಇದೆ. ಯಾವುದೇ ಸರಕು ಸಾಗಣೆ ವಾಹನವು ಅಗತ್ಯ ದಾಖಲೆಗಳಿಲ್ಲದೆ ಚೆಕ್‌ ಪೋಸ್ಟ್‌ ಅಥವಾ ರಾಜ್ಯದ ಗಡಿಯನ್ನು ದಾಟಬಾರದು. ತೆರಿಗೆ ಸೋರಿಕೆಗೆ ಯಾವುದೇ ಅವಕಾಶ ಇರಬಾರದು. ಇದರಲ್ಲಿ ಯಾವುದೇ ರೀತಿಯ ರಾಜಿ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದರು.

ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ರಾಜ್ಯದ ಎಲ್ಲ ವಲಯಗಳಿಂದಲೂ ನನಗೆ ನಿರಂತರ ಮಾಹಿತಿ ಬರುತ್ತದೆ. ಚಿಕ್ಕಪೇಟೆಯಿಂದ ಗಾಂಧಿನಗರದವರೆಗೆ, ಗಡಿ ಜಿಲ್ಲೆಗಳಿಂದ ರಾಜ್ಯದ ಎಲ್ಲ ಭಾಗಗಳಲ್ಲೂ ನನ್ನದೇ ಆದ ಸಂಪರ್ಕಗಳಿವೆ. ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ನಡೆದರೂ ಅದು ನನ್ನ ಗಮನಕ್ಕೆ ಬರುತ್ತದೆ. ಆದ್ದರಿಂದ ನನಗೆ ಬರುತ್ತಿರುವ ಮಾಹಿತಿಯೂ ನಿಮ್ಮ ಕಾರ್ಯಕ್ಷಮತೆಯ ವರದಿಯೂ ಒಂದಕ್ಕೊಂದು ಹೊಂದಿಕೆಯಾಗಬೇಕು. ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ. ಮಾಹಿತಿ ಹಂಚಿಕೆ ಮತ್ತು ಜಂಟಿ ಕಾರ್ಯಾಚರಣೆಗಳ ಮೂಲಕ ತೆರಿಗೆ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬೇಕು.

ಇಂದು ನಮ್ಮ ಬಳಿ ಸುಮಾರು 12 ಲಕ್ಷ ತೆರಿಗೆದಾರರ ಮಾಹಿತಿಯಿದೆ. ತಂತ್ರಜ್ಞಾನ ಮತ್ತು ಡೇಟಾ ಅನಾಲಿಟಿಕ್ಸ್ ಮೂಲಕ ಅವರನ್ನು 360 ಡಿಗ್ರಿ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಸಾಮರ್ಥ್ಯ ನಿಮಗಿದೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರೆ ನಿಮಗೆ ನೀಡಿರುವ ಗುರಿಯನ್ನು ಸಾಧಿಸುವುದಷ್ಟೇ ಅಲ್ಲ, ಅದನ್ನು ಮೀರಿಸುವ ಸಾಮರ್ಥ್ಯವೂ ನಿಮ್ಮಿಂದ ಸಾಧ್ಯವಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿದರೆ ಗುರಿ ಮೀರಿದ ಸಾಧನೆ ಮಾಡುವುದು ಸಾಧ್ಯ..

ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತೆರಿಗೆ ಪಾವತಿಸುವ ಪ್ರತಿಯೊಬ್ಬ ನಾಗರಿಕನನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳಬೇಕು. ಜೊತೆಗೆ ಇಲಾಖೆಯ ಸಿಬ್ಬಂದಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿದರೆ ಗುರಿಯನ್ನು ಮೀರಿದ ಸಾಧನೆ ಮಾಡುವುದು ಸಾಧ್ಯ. ಆದರೆ ತೆರಿಗೆ ವಂಚನೆಗೆ ಮಾತ್ರ ಯಾವುದೇ ಅವಕಾಶ ಇರಬಾರದು. ತೆರಿಗೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ಪರಿಶೀಲನಾ ಸಭೆ ನಡೆಯುವ ವೇಳೆಗೆ ಇಂದು ನಾನು ನೀಡಿರುವ ಪ್ರತಿಯೊಂದು ಸೂಚನೆಯೂ ಜಾರಿಯಾಗಿರಬೇಕು. ಮುಂದಿನ ಸಭೆಯಲ್ಲಿ ನಾನು ಸ್ವತಃ ಅನೇಕ ನೈಜ ಉದಾಹರಣೆಗಳೊಂದಿಗೆ ನಿಮ್ಮ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತೇನೆ ಎಂದು ಎಚ್ಚರಿಸಿದರು.

ಮತ್ತೊಮ್ಮೆ ಸ್ಪಷ್ಟವಾಗಿ ಹೇಳುತ್ತೇನೆ. ಒಂದೇ ಒಂದು ಸರಕು ಸಾಗಣೆ ವಾಹನ ಕೂಡ ಸೂಕ್ತ ಲೆಕ್ಕಪತ್ರ, ದಾಖಲೆ ಮತ್ತು ಸಂಪೂರ್ಣ ಅಕೌಂಟಬಿಲಿಟಿ ಇಲ್ಲದೆ ಚೆಕ್‌ ಪೋಸ್ಟ್‌ ಅಥವಾ ರಾಜ್ಯದ ಗಡಿಯನ್ನು ದಾಟಬಾರದು. ಇದು ನಮ್ಮ ಇಲಾಖೆಯ ಕಾರ್ಯವೈಖರಿಯ ಮೂಲ ತತ್ವವಾಗಬೇಕು. ಎಲ್ಲಾ ಜಂಟಿ ಆಯುಕ್ತರುಗಳು ಆಯಾ ವಿಭಾಗಗಳಿಗೆ ಹಂಚಿಕೆ ಮಾಡಲಾದ ತೆರಿಗೆ ಸಂಗ್ರಹಣಾ ಗುರಿಯನ್ನು ಸಾಧಿಸಿ ತೋರಿಸಿ.

ತೆರಿಗೆ ರಿಟರ್ನ್‌ ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಹಾಗೂ ತೆರಿಗೆ ರಿಟರ್ನ್‌ ಸಲ್ಲಿಸದಿರುವುದನ್ನು ಗುರುತಿಸಿ ನಿಗದಿತ ಅವಧಿಯ ಒಳಗೆ ರಿಟರ್ನ್‌ಗಳನ್ನು ಸಲ್ಲಿಸುವಂತೆ ಮಾಡಲು ಕಟ್ಟು ನಿಟ್ಟಿನ ಕ್ರಮಗಳನ್ನು  ಕೈಗೊಳ್ಳಬೇಕು. ನಿಮ್ಮ ಗುರಿ ಮುಟ್ಟಿ. ನಿಮಗೆ ಈಗ ಬರುತ್ತಿರುವ ತೆರಿಗೆಯ ಎರಡರಷ್ಟು ಸಂಗ್ರಹ ಮಾಡುವ ಸಾಮರ್ಥ್ಯ ಇದೆ. ಆದರೆ ಕಾನೂನು ಮೀರಿ, ಶೋಷಣೆ ಮಾಡಿ ಅಂತ ಹೇಳಲ್ಲ. ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಅವರನ್ನು ಸುಲಿಗೆ ಮಾಡಬಾರದು. ನಿಮ್ಮ ತೊಂದರೆಗಳು ಇದ್ದರೆ ಹೇಳಿ, ಅವು ನೈಜ ಇದ್ದರೆ ನಿವಾರಿಸೋಣ. ಪ್ರಾಮಾಣಿಕತೆ, ನಿಷ್ಠೆ, ಶ್ರಮಕ್ಕೆ ನನ್ನ ಬಳಿ ಗೌರವ, ಬೆಲೆ. ಪ್ರಾಮಾಣಿಕತೆ ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವೆ. ಎಲ್ಲಾ ಹಂತಗಳ ಅಧಿಕಾರಿಗಳು ತೆರಿಗೆದಾರರ ನೈಜ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಸೂಚಿಸಿದರು.

ನನ್ನ ಸಾರ್ವಜನಿಕ ಜೀವನಕ್ಕೆ ಸುಮಾರು ಮೂವತ್ತೆಂಟು ವರ್ಷಗಳ ಅನುಭವವಿದೆ. ಈ ಅವಧಿಯಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದೇನೆ. ಈಗ ಹಣಕಾಸು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಕಾರ್ಯವೈಖರಿಯನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಕೇಳುವುದಕ್ಕೂ, ಕಲಿಯುವುದಕ್ಕೂ ನಾನು ಸದಾ ಸಿದ್ಧನಿದ್ದೇನೆ. ನಿರಂತರ ಕಲಿಕೆಯೇ ಉತ್ತಮ ಆಡಳಿತದ ಮೂಲ ಎಂದು ನಾನು ನಂಬುತ್ತೇನೆ. ಆದ್ದರಿಂದ ಮುಂದಿನ ಸಭೆಯ ವೇಳೆಗೆ ಇಂದಿನ ವರದಿಗಿಂತ ಉತ್ತಮವಾದ ಕಾರ್ಯಕ್ಷಮತೆಯ ವರದಿಯನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ.

ರಜೆ ದಿನವಾಗಿದ್ದರೂ ಸಭೆಗೆ ಆಗಮಿಸಿ, ಇಲಾಖೆಯ ಅಭಿವೃದ್ಧಿಗೆ ಬದ್ಧತೆಯಿಂದ ಪಾಲ್ಗೊಂಡಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಕರ್ನಾಟಕದ ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಸಂಗ್ರಹಿಸುವ ಈ ಮಹತ್ವದ ಜವಾಬ್ದಾರಿಯನ್ನು ನಾವು ಎಲ್ಲರೂ ಸೇರಿ ಯಶಸ್ವಿಯಾಗಿ ನಿರ್ವಹಿಸೋಣ ಎಂದು ಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದರು.

GST ಸಂಗ್ರಹದಲ್ಲಿ ರಾಜ್ಯ ಉತ್ತಮ ಪ್ರಗತಿ ಸಾಧಿಸಿದೆ..

GST ಸಂಗ್ರಹದಲ್ಲಿ ರಾಜ್ಯ ಉತ್ತಮ ಪ್ರಗತಿ ಸಾಧಿಸಿದೆ. ಶೇ 9ರಷ್ಟು ಪ್ರಗತಿ ಆಗಿದೆ. ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಉತ್ತಮ ಸಾಧನೆಯಾಗಿದೆ. ಗುಜರಾತ್, ತಮಿಳುನಾಡು, ಹರಿಯಾಣ ರಾಜ್ಯಗಳಿಗಿಂತ ಹೆಚ್ಚು ಪ್ರಗತಿ ರಾಜ್ಯದಲ್ಲಿ ಆಗಿರುವುದು ಸಮಾಧಾನದ ಸಂಗತಿ. ಹೈದರಾಬಾದ್ IIT ಸಹಯೋಗದಲ್ಲಿ GST ವಂಚನೆ ಮೇಲೆ ತೀವ್ರ ನಿಗಾ ಇಡಲಾಗಿದೆ. (GST analytical portal)  ಇದರಿಂದಾಗಿ ಹಲವು ರೀತಿಯ ಜಿಸ್ಟ್ ವಂಚನೆಗಳನ್ನು ಪತ್ತೆಹಚ್ಚಲಾಗಿದ್ದರೂ ಇದರಲ್ಲಿ ಸಂಪೂರ್ಣ ಪ್ರಗತಿ ಸಾಧಿಸಿ ಎಂದರು.

GST ಸಂಗ್ರಹ, ಸೋರಿಕೆ, ವಂಚನೆ ಸೇರಿ ಸಮಗ್ರವಾಗಿ 360° ಯಲ್ಲಿ ನಿಗಾ ಇಡಬಹುದಾಗಿದೆ. ನಕಲಿ ರಶೀದಿ ಮತ್ತು ನಕಲಿ ITC ಗಳು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಬೋಗಸ್ ಕಂಪನಿಗಳನ್ನು ಪತ್ತೆ ಹಚ್ಚಿ 166 ಕೋಟಿ ಸಂಗ್ರಹಿಸಿದ್ದೇವೆ. ಬೋಗಸ್ ಕಂಪನಿ ಸ್ಥಾಪಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಮಾಣ ಹೆಚ್ಚಲಿ. ಇಲ್ಲಿಯವರೆಗೆ ಬೋಗಸ್ ಮಾಡುವವರನ್ನು ಬಂಧಿಸುವ ಪ್ರಮಾಣ ಕಡಿಮೆ ಇತ್ತು. ಈಗ ಬಂಧನವನ್ನು ಹೆಚ್ಚಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಸಿಬ್ಬಂದಿಯಿಂದ ಲೋಪ ಕಂಡು ಬಂದಾಗಲೂ ಕಠಿಣ ಕ್ರಮಗಳ ಮೂಲಕ ಎಚ್ಚರಿಕೆ ನೀಡಲಾಗಿದೆ. ವಿಭಾಗವಾರು ನೀಡಲಾಗಿದ್ದ ಟಾರ್ಗೆಟ್ ತಲುಪುವಲ್ಲಿ ಹಿಂದುಳಿದಿರುವ ಬಗ್ಗೆ ಅಧಿಕಾರಿಗಳು ಸ್ಪಷ್ಟ ವಿವರಗಳನ್ನು ಕೊಡಬೇಕು.

ತೆರಿಗೆದಾರರಿಗೆ ಅಗತ್ಯ ಸಲಹೆ, ಮಾರ್ಗದರ್ಶನ ಮತ್ತು ಸಹಕಾರ ಒದಗಿಸುವುದರ ಜೊತೆಗೆ, ಅವರ ತೆರಿಗೆ ಸಂಬಂಧಿತ ಗೊಂದಲಗಳನ್ನು ಆನ್‌ಲೈನ್‌ನಲ್ಲಿಯೇ ತ್ವರಿತವಾಗಿ ಬಗೆಹರಿಸುವ ಸಮಗ್ರ ವ್ಯವಸ್ಥೆಯನ್ನು ನಾವು ರಾಜ್ಯದಲ್ಲಿ ರೂಪಿಸಿದ್ದೇವೆ.” ತೆರಿಗೆದಾರರು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲದಂತೆ, ಅವರಿಗೆ ಅಗತ್ಯ ಸಲಹೆ ಮತ್ತು ಸಹಕಾರವನ್ನು ನೀಡುವ ಹಾಗೂ ಅವರ ಎಲ್ಲಾ ತೆರಿಗೆ ಸಂಬಂಧಿತ ಗೊಂದಲಗಳನ್ನು ಆನ್‌ ಲೈನ್‌ ನಲ್ಲಿಯೇ ಪರಿಹರಿಸುವ ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ತೆರಿಗೆದಾರರಿಗೆ ಸಲಹೆ, ಸಹಕಾರ ಮತ್ತು ತೆರಿಗೆ ಸಂಬಂಧಿತ ಗೊಂದಲಗಳ ತ್ವರಿತ ಪರಿಹಾರವನ್ನು ಆನ್‌ಲೈನ್‌ನಲ್ಲಿಯೇ ಒದಗಿಸುವ ವ್ಯವಸ್ಥೆಯನ್ನು ರೂಪಿಸಿದ್ದೇವೆ ಎಂದು ಡಿಕೆಶಿ ತಿಳಿಸಿದರು.

ಮೈಸೂರು ವಿಭಾಗದಲ್ಲಿ ಕಾರ್ಯಕ್ಷಮತೆ ಕುಸಿತ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರ್ಯಕ್ಷಮತೆ ಕುಸಿದಿರುವುದಕ್ಕೆ ನೆಪಗಳು, ಕಾರಣಗಳನ್ನು ಕೊಡುವುದು ಸರಿಯಲ್ಲ. ಫಲಿತಾಂಶ ಮುಖ್ಯ. ಏನೇ ತಾಂತ್ರಿಕ ತೊಂದರೆಗಳಿದ್ದರೂ ಬಗೆಹರಿಸಿಕೊಂಡು ಉತ್ತಮ ಕಾರ್ಯಕ್ಷಮತೆ ನಿರೀಕ್ಷಿಸುತ್ತೇನೆ.

ಮೇ 2026ರ ವರೆಗೆ ಜಿಎಸ್‌ ಟಿ ಸಂಗ್ರಹದಲ್ಲಿ ತೆಲಂಗಾಣ ರಾಜ್ಯ ಶೇ10 ರಷ್ಟು ಪ್ರಗತಿ ಸಾಧಿಸಿದ್ದರೆ ರಾಜ್ಯ ಶೇ9 ರಷ್ಟು ಪ್ರಗತಿ ಸಾಧಿಸಿದೆ. ಮಹಾರಾಷ್ಟ್ರ ಶೇ5, ಗುಜರಾತ್‌ ಶೇ5, ತಮಿಳುನಾಡು ಶೇ -7, ಉತ್ತರಪ್ರದೇಶ ಶೇ8 ರಷ್ಟು ಜಿಎಸ್‌ಟಿ ಪ್ರಗತಿ ಸಾಧಿಸಿವೆ. ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿ ಇದ್ದೇವೆ. ಮೊದಲ ಸ್ಥಾನಕ್ಕೆ ಬರುವ ಮಾರ್ಗಗಳನ್ನು ಶೋಧಿಸಿ. ಬಾಕಿ ಇರುವ ಮೇಲ್ಮನವಿಗಳನ್ನು ತ್ವರಿತವಾಗಿ ನಿರ್ವಹಿಸದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಮೇಲ್ಮನವಿಗಳ ವಿಲೇವಾರಿ ವಿಚಾರದಲ್ಲಿ ಹಿರಿಯ  ಅಧಿಕಾರಿಗಳು ಹೆಚ್ಚಿನ ನಿಗಾ ಇಡಬೇಕು. ತೆರಿಗೆದಾರ ಸ್ನೇಹಿಯಾಗಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಿಸುವ ಅಗತ್ಯವಿದೆ ಎಂದರು.

Key words: progress, review, meeting, Commerce Department, CM DK Shivakumar

The post ತೆರಿಗೆ ವಂಚನೆ ಮತ್ತು ತೆರಿಗೆ ಸೋರಿಕೆ ಸಂಪೂರ್ಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಸಿಎಂ ಡಿಕೆಶಿ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅಯೋಧ್ಯೆ ರಾಮಮಂದಿರ ಕಾಣಿಕೆ ದುರುಪಯೋಗ: ಇಬ್ಬರು ಅರೆಸ್ಟ್

ನವದೆಹಲಿ,ಜೂನ್,26,2026 (www.justkannada.in): ಅಯೋಧ್ಯೆಯ ರಾಮಮಂದಿರದ ಕಾಣಿಕೆ ದುರುಪಯೋಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು,...

ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು- ಪ್ರತಾಪ್ ಸಿಂಹ

ಹಾಸನ,ಜೂನ್,26,2026 (www.justkannada.in):  ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರ ಜಟಾಪಟಿ ತಾರಕಕ್ಕೇರಿದ್ದು,...

ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ರೆ ಕಠಿಣ ಕ್ರಮ ಅನಿವಾರ್ಯ-ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,26,2026 (www.justkannada.in): ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ...

ಮುತ್ತತ್ತಿ ಕಾವೇರಿ ನದಿಯಲ್ಲಿ ಮತ್ತೊಂದು ದುರಂತ: ವೈದ್ಯರೊಬ್ಬರ ಶವ ಪತ್ತೆ

ಮಂಡ್ಯ, ಜೂನ್,26,2026 (www.justkannada.in):  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾವೇರಿ...