ಮೈಸೂರು,ಸೆಪ್ಟಂಬರ್,7,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ವತಿಯಿಂದ ಇಂದು ನಡೆದ ಕಂದಾಯ ಪರಿಶೀಲನಾ ಸಭೆಯಲ್ಲಿ, ಆಸ್ತಿ ತೆರಿಗೆಯಿಂದ ವಿನಾಯಿತಿ ಪಡೆದಿರುವ ವಿವಿಧ ಸಂಸ್ಥೆಗಳಿಂದ ಸೇವಾ ಶುಲ್ಕ ವಸೂಲಾತಿ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.
ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಇತರೆ ಅರ್ಹ ಸಂಸ್ಥೆಗಳಿಗೆ ನಿಯಮಾನುಸಾರ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದ್ದರೂ, ಪಾಲಿಕೆಯಿಂದ ಒದಗಿಸಲಾಗುವ ನಾಗರಿಕ ಸೌಲಭ್ಯಗಳು ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ಅನ್ವಯವಾಗುವ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಇದುವರೆಗೆ ಆಸ್ತಿ ತೆರಿಗೆ ವಿನಾಯಿತಿ ಪಡೆದಿರುವ ಎಲ್ಲಾ ಸಂಸ್ಥೆಗಳ ವಿವರಗಳನ್ನು ವಲಯವಾರು ಪರಿಶೀಲಿಸಿ, ಅವರಿಗೆ ಅನ್ವಯವಾಗುವ ಸೇವಾ ಶುಲ್ಕವನ್ನು ನಿಗದಿಪಡಿಸಿ, ಬಾಕಿ ಉಳಿದಿರುವ ಮೊತ್ತವನ್ನು ಕಡ್ಡಾಯವಾಗಿ ವಸೂಲಿ ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ತೆರಿಗೆ ವಿನಾಯಿತಿ ಪಡೆದಿರುವ ಸಂಸ್ಥೆಗಳ ಸಂಪೂರ್ಣ ಪಟ್ಟಿಯನ್ನು ಪುನರ್‌ಪರಿಶೀಲಿಸಿ, ಸೇವಾ ಶುಲ್ಕದ ಬಾಕಿ ಮೊತ್ತವನ್ನು ಗುರುತಿಸಿ, ಸಂಬಂಧಿಸಿದ ಸಂಸ್ಥೆಗಳಿಗೆ ಬೇಡಿಕೆ ನೋಟಿಸ್‌ಗಳನ್ನು ಜಾರಿಗೊಳಿಸಿ, ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಸೇವಾ ಶುಲ್ಕ ವಸೂಲಾತಿಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡುವುದಿಲ್ಲ. ವಲಯವಾರು ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಬಾಕಿ ಮೊತ್ತದ ವಸೂಲಾತಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ನಿರ್ದೇಶನ ನೀಡಿದ್ದಾರೆ.
Key words: MCC, Commissioner, collection, service charges, tax exempted, organizations
The post ತೆರಿಗೆ ವಿನಾಯಿತಿ ಪಡೆದ ಸಂಸ್ಥೆಗಳಿಂದ ಸೇವಾ ಶುಲ್ಕ ಕಡ್ಡಾಯ ವಸೂಲಿಗೆ ಮೈಸೂರು ಪಾಲಿಕೆ ಆಯುಕ್ತರಿಂದ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




