ಮಂಗಳೂರು, ಸೆಪ್ಟೆಂಬರ್, 28,2026 (www.justkannada.in): ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ 32,611 ಕೋಟಿ ರೂ ಅನುದಾನ ಘೋಷಿಸಿದ್ದಲ್ಲದೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ಸಹ ನೀಡಲಾಗಿದ್ದು ಇದೇ ವಿಚಾರವನ್ನಿಟ್ಟುಕೊಂಡು ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯು.ಟಿ ಖಾದರ್, ‘ಬಿಜೆಪಿ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಡುಗೆ ನೀಡಿದೆ. ಬಿಜೆಪಿ ಜಿಲ್ಲೆಯಲ್ಲಿ ಕನಿಷ್ಠ ಸಂಪುಟ ಸಭೆ ಏನಾದರೂ ನಡೆಸಿದ್ದಾರೆಯೇ? ಯಾವುದಾದರೂ ಪ್ರಮುಖ ಯೋಜನೆ ರೂಪಿಸಿದ್ದಾರೆಯೇ? ನಾವು ಯಾರದ್ದೋ ಮಾತು ಕೇಳಿ ಕೆಲಸ ಮಾಡುವುದಿಲ್ಲ. ಜನರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಗುಡುಗಿದರು.
ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳ ಬಗ್ಗೆ ಬಿಜೆಪಿ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಯು.ಟಿ ಖಾದರ್, ‘ಸಿಎಂ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವುದು ನನ್ನ ಜವಾಬ್ದಾರಿ ಎಂದರು.
‘ಆರ್ಥಿಕ ಇಲಾಖೆಯು ಸರ್ಕಾರಕ್ಕೆ ಸಲಹೆ, ಎಚ್ಚರಿಕೆ ನೀಡುವುದು ಸಹಜ. ಇದು ಎಲ್ಲಾ ಸರ್ಕಾರದ ಅವಧಿಯಲ್ಲೂ ನಡೆಯುತ್ತಾ ಬಂದಿರುವ ಪ್ರಕ್ರಿಯೆ, ಆದರೆ ಕ್ಯಾಬಿನೆಟ್ಗೆ ತನ್ನದೇ ಆದ ಜವಾಬ್ದಾರಿ ಇದೆ. ಸರ್ಕಾರ ನೀಡಿದ ಮಾತನ್ನು ಈಡೇರಿಸುವುದು ಸರ್ಕಾರಕ್ಕೆ ಗೊತ್ತಿದೆ ಎಂದರು.




