15
September, 2026

A News 365Times Venture

15
Tuesday
September, 2026

A News 365Times Venture

ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ: ಸಿಎಂ ಡಿಕೆ ಶಿವಕುಮಾರ್ ಅಭಿಮತ

Date:

ಬೆಂಗಳೂರು, ಸೆಪ್ಟಂಬರ್, 15,2026 (www.justkannada.in):  “ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ. ನಾನು ಏಳನೇ ತರಗತಿಯಿಂದ ಶಾಸಕನಾಗುವವರೆಗೂ ಅನೇಕ ಅಡಚಣೆಗಳನ್ನು ಎದುರಿಸಿ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದೇನೆ. ಯುವಕರು ನಾಯಕರಾಗಲು ಮುಂದೆ ಬರಬೇಕು. ನಾಯಕನಾದವನು ನಾಯಕರನ್ನು ಸೃಷ್ಟಿಸಬೇಕು” ಎಂದು ಸಿಎಂ‌ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.

“ಏಳನೇ ತರಗತಿ ಶಾಲಾ ಚುನಾವಣೆ, ಕಾಲೇಜು ಚುನಾವಣೆಗಳಲ್ಲೂ ನನಗೆ ತಕ್ಕ ನ್ಯಾಯ ಸಿಗಲಿಲ್ಲ. ಆನಂತರವೂ ವಿದ್ಯಾರ್ಥಿ ಕಾಂಗ್ರೆಸ್ ಚುನಾವಣೆಯ ಟಿಕೆಟ್ ತಪ್ಪಿಸಲಾಯಿತು. ಬಳಿಕ ಪದವಿ ಓದುವಾಗ ದೇವೇಗೌಡರ ವಿರುದ್ದ ಸ್ಪರ್ಧಿಸುವ ಅವಕಾಶ ದೊರೆಯಿತು. ಆ ಚುನಾವಣೆಯಲ್ಲಿ ಸೋತೆ. ನಂತರ ವಿಧಾನಸಭೆ ಚುನಾವಣೆ ಗೆಲುವು ಕಂಡೆ. ಅಲ್ಲಿಂದ ಇಲ್ಲಿಯವರೆಗೆ ಪ್ರಯಾಣ ಬೆಳೆಸಿದ್ದೇನೆ” ಎಂದು ಹೇಳಿದರು.

“ಎನ್ ಪಿಎಸ್ ಶಾಲೆಯಲ್ಲಿ ಓದುವಾಗ ತುಂಟ ಎಂಬ ಕಾರಣಕ್ಕೆ ಮುಂದಿನ ತರಗತಿಗಳಿಗೆ ಮುಂದುವರೆಯಲು ಅವಕಾಶ ನೀಡಲಿಲ್ಲ. ಇದಕ್ಕಾಗಿ ಕಾರ್ಮೆಲ್ ಶಾಲೆಗೆ ಸೇರಿಸಲಾಯಿತು. ಅಲ್ಲಿ ಏಳನೇ ತರಗತಿಯಲ್ಲಿ ಚುನಾವಣೆಗೆ ನಿಂತಿದ್ದೆ. ನನ್ನ ಚಿನ್ಹೆ ನಕ್ಷತ್ರ. ನನಗೆ 80 ರಷ್ಟು ಮತಗಳು ಬಂದಿದ್ದರೂ ಶೇ. 20 ರಷ್ಟು ಮತ ಗಳಿಸಿದ್ದ ಸಹಪಾಠಿ ಆರತಿ ಎಂಬುವರನ್ನು ಶಾಲಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ನನಗೆ ಕ್ರೀಡಾ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಿ ಕೊಟ್ಟರು” ಎಂದು ಹೇಳಿದರು.

“ವಿದ್ಯಾವರ್ಧಕ ಕಾಲೇಜು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಆಗ ದೇಶಪಾಂಡೆ ಎನ್ನುವವರನ್ನು ಚುನಾವಣೆಗೆ ನಿಲ್ಲಿಸಿ ನಾನೇ ಭಾಷಣ ಮಾಡಿ ಗೆಲ್ಲಿಸಿದೆ. ಹೀಗೆ ನಾಯಕತ್ವ ಗುಣಗಳನ್ನು ಹೊಂದಿರುವವರಿಗೆ ಉಂಟಾಗುವ ಅಡಚಣೆಗಳ ಅನೇಕ” ಎಂದರು.

ಯುವ ಸಂಸತ್ತು ನಿರ್ಮಾಣ ಮಾಡುವ ಆಶಯ

“ಯುವ ಸಂಸತ್ತು ನಿರ್ಮಾಣ ಮಾಡುವ ಆಶಯದಿಂದ ಶಾಲಾ, ಕಾಲೇಜುಗಳಲ್ಲಿ ಮಾದರಿ ಸಂಸತ್ ನಡೆಸಲಾಗುವುದು. ಇದು ಬಸವಣ್ಣನವರ ಕಾಲದ ಅನುಭವ ಮಂಟಪದ ಚಿಂತನೆಗಳನ್ನು ಒಳಗೊಂಡಿದೆ. ವಿಶ್ವಕ್ಕೆ ಮೊದಲ ಸಂಸತ್ತು ಎಂದು ಖ್ಯಾತಿ ಪಡೆದಿರುವ ಅನುಭವ ಮಂಟಪದ ತಿಳುವಳಿಕೆ ಈ ಮೂಲಕ ನೀಡಲಾಗುವುದು” ಎಂದರು.

ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ

“ಜನಸೇವಕ ಎಂದು ನನ್ನನ್ನು ಜನ ಗುರುತಿಸಿದರು. ಅದೇ ರೀತಿ ವ್ಯವಸ್ಥೆಯಲ್ಲಿ ಹೊಸ ನಾಯಕತ್ವ ಬೆಳೆಯಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆ ಯುವಕರಿಗೆ ತಿಳಿದಿರಬೇಕು. ಅದಕ್ಕಾಗಿಯೇ ಪ್ರತಿ ಕಾಲೇಜಿನಲ್ಲಿ ಶಿಸ್ತು ಬದ್ಧವಾಗಿ ಚುನಾವಣೆಗಳು ನಡೆಯಬೇಕೆಂದು ಘೋಷಿಸಲಾಗಿದೆ. ಯಾರಲ್ಲಿ ಯಾವ ಕಿಡಿ ಇರುತ್ತದೆಯೋ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ನಾಯಕತ್ವದ ಅವಕಾಶ ದೊರೆಯಬೇಕು. ದಿನೇ ದಿನೇ ಹೊಸ ಬೆಳವಣಿಗೆಗಳು ಯುವಪೀಳಿಗೆಯಲ್ಲಿ ಕಾಣುತ್ತಿದ್ದೇವೆ. ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ” ಎಂದು ತಿಳಿಸಿದರು.

“ರಾಜೀವ್ ಗಾಂಧಿ ಅವರು 74-75 ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಜನರಿಗೆ ಅಧಿಕಾರ ದೊರಕಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕತ್ವ ಬೆಳೆಸಿದರು. ನಮ್ಮ ಪಕ್ಷ ತ್ಯಾಗ ಮಾಡಿದವರ ಇತಿಹಾಸವನ್ನೇ ಹೊಂದಿದೆ. ನೆಹರೂ ಅವರ ಜೈಲುವಾಸ,  ಮಹಾತ್ಮ  ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಪ್ರಾಣತ್ಯಾಗ,  ಸೋನಿಯಾ ಗಾಂಧಿ ಅವರ ಅಧಿಕಾರ ತ್ಯಾಗದ ಇತಿಹಾಸವಿದೆ” ಎಂದರು.

ಪ್ರಜಾಪ್ರಭುತ್ವ ಭಾರತದ ಆತ್ಮ

“ಪ್ರಜಾಪ್ರಭುತ್ವ ಭಾರತದ ಆತ್ಮ. ಪ್ರಜೆಗಳೇ ಇಲ್ಲಿ ಪ್ರಭುಗಳು. ಭಾರತ ವಿಶ್ವಕ್ಕೆ ಪ್ರಜಾಪ್ರಭುತ್ವದ ಮಾದರಿಯನ್ನು ಬಸವಣ್ಣನವರ ಅನುಭವ ಮಂಟಪದ ಇದಕ್ಕೆ ಮೂಲ. ನಾನು ಮುಖ್ಯಮಂತ್ರಿ ಆದ ಮೂರು ದಿನಗಳಲ್ಲೇ ಅನುಭವ ಮಂಟಪಕ್ಕೆ ಭೇಟಿ ಕೊಟ್ಟು ಅಲ್ಲಿಂದ ಸಿಎಂ ಪದವಿಯ ಪಯಣ ಆರಂಭಿಸಿದೆ. ಜಾತಿ, ಲಿಂಗ, ತಾರತಮ್ಯಗಳು ಇಲ್ಲದೆ ಎಲ್ಲರಿಗೂ ಅವಕಾಶ ನೀಡಿದ್ದನ್ನು ಇತಿಹಾಸದ ಪುಟಗಳ ಮೂಲಕ ನಾವು ಕಲಿತಿದ್ದೇವೆ.  ಪ್ರಜಾಪ್ರಭುತ್ವದ ಆಶಯಗಳು ಶಾಶ್ವತವಾಗಿರಲಿ” ಎಂದು ಹೇಳಿದರು.

“ಪ್ರಜಾಪ್ರಭುತ್ವ ಕೇವಲ ಮತದಾನಕ್ಕೆ ಸೀಮಿತವಲ್ಲ. ಪ್ರಜಾಪ್ರಭುತ್ವ ಎಂದಾಗ ಚುನಾವಣೆ, ಮತದಾನ ಪಂಚಾಯಿತಿಯಿಂದ ಸಂಸತ್ತಿನವರೆಗೆ ನಾಯಕರ ಆಯ್ಕೆ ಮಾತ್ರ ಪ್ರಜಾಪ್ರಭುತ್ವವಲ್ಲ.  ಘನತೆ, ಗೌರವ ಮತ್ತು ಬದುಕುವ ಹಕ್ಕನ್ನು ನೀಡುವುದು ನೈಜ ಪ್ರಜಾಪ್ರಭುತ್ವ” ಎಂದರು.

ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ

“ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ. ಸರ್ಕಾರ ಜನರನ್ನು ಗೌರವಿಸಿದಾಗ ಪ್ರಜಾಪ್ರಭುತ್ವವಾಗುತ್ತದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಹಿರಿಯರು ನಮಗೆ ಮಾರ್ಗದರ್ಶನ ಮಾಡಿದ್ದಾರೆ” ಎಂದು ಹೇಳಿದರು.

ಬದ್ಧತೆ ಇರುವವರು ಮಾತ್ರ ಧೈರ್ಯವಾಗಿ ಮಾತನಾಡಲು ಸಾಧ್ಯ

“ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ಭಾರತದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದ್ದು ಕಾಂಗ್ರೆಸ್ ಪಕ್ಷ . ಕಾಂಗ್ರೆಸ್ ನ ಇತಿಹಾಸ ದೇಶ ಇತಿಹಾಸ. ದೇಶಕ್ಕೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ನೀಡಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನ, ರಾಷ್ಟ್ರ ಧ್ವಜ,  ರಾಷ್ಟ್ರಗೀತೆ ಕಾಂಗ್ರೆಸ್ ಕೊಡುಗೆ. ಪ್ರಜಾಪ್ರಭುತ್ವದ ಮೇಲೆ ಬದ್ಧತೆ ಇರುವವರು ಮಾತ್ರ ಧೈರ್ಯವಾಗಿ ಮಾತನಾಡಲು ಸಾಧ್ಯ” ಎಂದರು.

“ಪ್ರತಿ ತಾಲೂಕಿನಲ್ಲಿ ಮಾರ್ಗದರ್ಶನ ನೀಡಲು ಕಾನೂನು ತಂಡ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದ ಕಾರಣಕ್ಕೆ ಪಕ್ಷದಿಂದ ಲೀಗಲ್ ಬ್ಯಾಂಕ್ ತೆರೆಯಲು ಮುಂದಾಗಿದ್ದೇವೆ. ಎಸ್ ಐಆರ್ ನಿಂದ ಒಂದು ಕೋಟಿ ಜನ ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. 47 ಲಕ್ಷ ಜನರಿಗೆ ಖಾಯಂ ನಿವಾಸ ಪತ್ರ ಹಾಗೂ ಆದಾಯ ಪತ್ರ ಒದಗಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮತದಾನದ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದು” ಎಂದರು

“ಡಬಲ್ ಇಂಜಿನ್ ಸರ್ಕಾರ ಇದ್ದರೂ ಜನ 2023ರಲ್ಲಿ  136 ಸೀಟುಗಳ ಮೂಲಕ ನಮ್ಮ ಸರ್ಕಾರವನ್ನು  ಅಧಿಕಾರಕ್ಕೆ ತಂದರು. ಜನರ ಮನಸ್ಸನ್ನು ಅರಿಯುವುದು ಕಷ್ಟ. ಭಾರತ್ ಜೋಡೋ ಸಂದರ್ಭದಲ್ಲಿ ಜನರ, ನೋವು ಕಷ್ಟಗಳನ್ನು ಅರಿತುಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು” ಎಂದು ಹೇಳಿದರು.

ರಾಜಕೀಯ ಸಿದ್ಧಾಂತದ ಬದ್ಧತೆ ಅಗತ್ಯ

“ಜನರಿಗೆ ಸಾಮಾಜಿಕ,  ಆರ್ಥಿಕ ಶಕ್ತಿ ನೀಡಲು ಐದು ಗ್ಯಾರಂಟಿ ನೀಡಿದ್ದೇವೆ. ಪ್ರತಿವರ್ಷ 52,000 ಕೋಟಿ ರೂ. ಖರ್ಚು ಮಾಡಲಾಗಿದೆ. ಅದಕ್ಕೆ ನಮ್ಮ ರಾಜಕೀಯ ಸಿದ್ಧಾಂತದ ಬದ್ಧತೆಯೇ ಕಾರಣ. ಎಸ್ ಸಿಎಸ್ ಪಿ- ಟಿಎಸ್ ಪಿ ಯೋಜನೆಯನ್ನು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದರು. ಆದರೆ ಕೇಂದ್ರ ಸರ್ಕಾರ ಏಕೆ ಈ ಯೋಜನೆಯನ್ನು  ಜಾರಿಗೆ ತರಬಾರದು. ಇದನ್ನು ಜಾರಿಗೆ ತರಲು ಬದ್ಧತೆ ಇರಬೇಕು” ಎಂದು ಅಭಿಪ್ರಾಯಪಟ್ಟರು

ಮೀಸಲಾತಿಯನ್ನು ಕಾಪಾಡಿದ್ದು ಕಾಂಗ್ರೆಸ್ ಸರ್ಕಾರ

“ದೇಶದ ಜನರ ಮತದಾನ ಉಳಿಯಬೇಕು. ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ದೇವರು ವರವನ್ನು ಕೊಡುವುದಿಲ್ಲ, ಶಾಪವನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ಕೊಟ್ಟ ಅವಕಾಶವನ್ನು ಬಳಸಿಕೊಂಡು ಜನರಿಗೆ ಸರಿಯಾಗಿ ಅವಕಾಶ ಕೊಡಬೇಕು. ಭಾರತದ ಜನರಿಗೆ ನಾನು ಖಡ್ಗ ಕೊಡುವುದಿಲ್ಲ ಮತದಾನದ ಹಕ್ಕನ್ನು ನೀಡಿದ್ದೇವೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಯಾವ ವರ್ಗದವರನ್ನು ನೋಯಿಸಲು ನಮಗೆ ಇಷ್ಟವಿಲ್ಲ.  ನಮ್ಮ ಪಕ್ಷದ ಸಿದ್ಧಾಂತದ ಪ್ರಕಾರ ಸರ್ವರಿಗೂ ಸಮಬಾಳು ನೀಡಲಾಗುವುದು. ನಮಗೆ ಮನುಷ್ಯತ್ವ, ಮಾನವೀಯತೆ ಮುಖ್ಯ. ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಲಾಗಿದೆ” ಎಂದು ಹೇಳಿದರು.

“10-15 ಲಕ್ಷ ನಿವೇಶನಗಳನ್ನು ಬಡವರಿಗೆ ಹಂಚಬೇಕೆಂದು ಕಾರ್ಯಕ್ರಮ ರೂಪಿಸಿಸಲಾಗಿದೆ. ಉಳುವವನಿಗೆ ಭೂಮಿಯಂತಹ ಕಾರ್ಯಕ್ರಮವನ್ನು ಬಿಜೆಪಿ, ಜೆಡಿಎಸ್ ಪಕ್ಷಗಳು ಕೊಟ್ಟಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಮಾತ್ರ ಇಂಥ ಕಾರ್ಯಕ್ರಮ ನೀಡಿದೆ” ಎಂದರು.

ಈ ಸರ್ಕಾರ ನಿಮ್ಮೊಂದಿಗಿರುತ್ತದೆ

“ಮಲ್ಲಿಕಾರ್ಜುನ ಖರ್ಗೆ 371 ಜೆ ಜಾರಿ ಮಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬದಲಾವಣೆ ತಂದಿದ್ದಾರೆ. ಆ ಬದ್ಧತೆ ಬೇರೆ ಯಾರಿಗೂ ಇಲ್ಲ.  ಸಾಂಸ್ಕೃತಿಕ, ಕ್ರೀಡೆ,‌ ಕಲೆಗಳಿಗೆ ಪ್ರೋತ್ಸಾಹ ನೀಡಲು 10 ಸಾವಿರ ಭಾರತ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಈ ಸರ್ಕಾರ ನಿಮ್ಮೊಂದಿಗಿರುತ್ತದೆ” ಎಂದು ಹೇಳಿದರು.

Key words: CM D.K. Shivakumar, inaugurating, International Day of Democracy, celebrations, Vidhana Soudha

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸರ್ಕಾರದ ವತಿಯಿಂದ ಇಂಜಿನಿಯರ್ ಗಳ ದಿನ ಆಚರಣೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

ಬೆಂಗಳೂರು, ಸೆಪ್ಟಂಬರ್, 15,2026 (www.justkannada.in):  “ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಇಂಜಿನಿಯರ್...

ವಂದೇ ಮಾತರಂ ಚರಣ ಕಡಿತ ಖಂಡಿಸಿ ಸೆ.15ರಿಂದ ಪಾದಯಾತ್ರೆ- ಡಾ.ಈ.ಸಿ.ನಿಂಗರಾಜ್ ಗೌಡ

ಮೈಸೂರು,ಸೆಪ್ಟಂಬರ್, 15,2026 (www.justkannada.in): ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ಕೇವಲ...

ಹಬ್ಬ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ: ಒಂದೇ ಕುಟುಂಬದ ಮೂವರು ಸಾವು

ಮಂಡ್ಯ,ಸೆಪ್ಟಂಬರ್,15,2026 (www.justkannada.in):  ಗಣೇಶ ಹಬ್ಬ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ...

ದೇಶದ ಜನತೆಗೆ ಗೌರಿ ಗಣೇಶ ಹಬ್ಬದ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ,ಸೆಪ್ಟಂಬರ್,14,2026 (www.justkannada.in): ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮವಾಗಿದ್ದು ಈ...