ಮೈಸೂರು,ಜುಲೈ,25,2026 (www.justkannada.in): ಆಷಾಢ ಮಾಸದ ಪ್ರಥಮ ಏಕಾದಶಿ ಪರ್ವಕಾಲ ಹಿನ್ನೆಲೆಯಲ್ಲಿ ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮ ಮಠದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉಡುಪಿ ಪಲಿಮಾರು ಮಠದ ಸಂಸ್ಥಾನಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಹಾಗೂ ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದಂಗಳರವರು ಸಹಸ್ರಾರು ಭಕ್ತರಿಗೆ ಶಂಖ ಚಕ್ರಗಳ ಮುದ್ರಾಧಾರಣೆ ನೆರವೇರಿಸಿದರು.
ಬಳಿಕ ಮಾತನಾಡಿದ ವಿದ್ಯಾಧೀಶ ತೀರ್ಥ ಶ್ರೀಪಾದಂಗಳ ರವರು, ಆಷಾಢಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಿಂದ ಉತ್ಥಾನದ್ವಾದಶಿಯ ತನಕ ಶ್ರೀಮನ್ನಾರಯಣನು ಯೋಗನಿದ್ರೆಯಲ್ಲಿ ತೊಡಗುತ್ತಾನೆ ಎನ್ನುವ ನಂಬಿಕೆ ಇದೆ. ಮಳೆಗಾಲದಲ್ಲಿ ಸೊಳ್ಳೆ, ಕ್ರಿಮಿ ಕೀಟಗಳಿಂದ ಎದುರಾಗುವ ರೋಗ ರುಜಿನಗಳನ್ನು ಎದುರಿಸಲು ಬೇಕಾದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ತಪ್ತ ಮುದ್ರಾಧಾರಣೆ ಪೂರಕವಾಗಲಿದೆ ಎಂದರು.
ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಶ್ರೀವತ್ಸ ಮಾತನಾಡಿ, ಬೆಳಿಗ್ಗಿನಿಂದಲೇ ಮಠಕ್ಕೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ತೋಳಿಗೆ, ಎದೆಯ ಭಾಗಕ್ಕೆ ಹಾಗೂ ಹೊಟ್ಟೆಯ ಮೇಲೆ ಶಂಖ ಹಾಗೂ ಚಕ್ರದ ಮುದ್ರೆ ಹಾಕಿಸಿಕೊಂಡರು. ಪ್ರತಿವರ್ಷವೂ ನಾನಾ ಕಡೆಗಳಿಂದ ಭಕ್ತರು ಆಗಮಿಸಿ ತಪ್ತ ಮುದ್ರೆಯನ್ನು ಹಾಕಿಸಿಕೊಳ್ಳುತ್ತಾರೆ. ಸುದರ್ಶನ ಹೋಮವನ್ನು ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದಾ , ಪದ್ಮ ಚಿಹ್ನೆಯನ್ನು ಎದೆಯ ಭಾಗ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಮಿತ್ರ ಮಂಡಳಿ ಕಾರ್ಯದರ್ಶಿ ರಾಘವೇಂದ್ರ ರಾವ್, ಖಜಾಂಜಿ ಸುರೇಶ್ ರಾವ್, ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ, ಪಿ ಎಸ್ ಶೇಖರ್, ಕಾರ್ಯದರ್ಶಿ ಕೆ.ವಿ ಶ್ರೀಧರ್, ವಾಸುದೇವ್ ಭಟ್, ಕೃಷ್ಣ ದಾಸ್ ಪುರಾಣಿ, ಸುಬ್ರಹ್ಮಣ್ಯ ತಂತ್ರಿ, ಹಾಗೂ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.
Key words: Ekadashi, Mysore, devotees, Sri Krishnadham Math
The post ಮೈಸೂರಿನಲ್ಲಿ ಏಕಾದಶಿ ಸಂಭ್ರಮ: ಶ್ರೀ ಕೃಷ್ಣಧಾಮ ಮಠದಲ್ಲಿ ಭಕ್ತರಿಗೆ ಮುದ್ರಾಧಾರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




