ಬೆಂಗಳೂರು,ಸೆಪ್ಟಂಬರ್,8,2026 (www.justkannada.in): ಇಂದು ವಿಕಾಸಸೌಧದ ಸಭಾಂಗಣದಲ್ಲಿ ಮೈಸೂರಿನಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (PPP) ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿ ಯೋಜನೆಯ ಪ್ರಗತಿ ಕುರಿತು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಮೈಸೂರು ಈಗಾಗಲೇ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಪ್ರವಾಸೋದ್ಯಮದ ಪ್ರಮುಖ ತಾಣವಾಗಿದ್ದು, ಚಿತ್ರನಗರಿಯಂತಹ ಮಹತ್ವಾಕಾಂಕ್ಷೆಯ ಯೋಜನೆಯು ನಗರದ ಸಾಂಸ್ಕೃತಿಕ ಮತ್ತು ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ವೇಗ ನೀಡುವ ಸಾಮರ್ಥ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ, ಉದ್ದೇಶಿತ ಚಿತ್ರನಗರಿಯನ್ನು ಕೇವಲ ಚಿತ್ರೀಕರಣಕ್ಕೆ ಸೀಮಿತವಾಗಿರದೆ, ಅತ್ಯಾಧುನಿಕ ಚಿತ್ರೀಕರಣ ಸೌಲಭ್ಯಗಳು, ಸ್ಟುಡಿಯೋಗಳು, ತಾಂತ್ರಿಕ ಮೂಲಸೌಕರ್ಯ, ಪೋಸ್ಟ್-ಪ್ರೊಡಕ್ಷನ್ ಸೌಲಭ್ಯಗಳು ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ಅಗತ್ಯವಿರುವ ಸಮಗ್ರ ವ್ಯವಸ್ಥೆಗಳನ್ನು ಒಳಗೊಂಡ ದೇಶದ ಅತ್ಯುತ್ತಮ ಚಿತ್ರನಗರಿಯಾಗಿ ರೂಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ವಿವರವಾದ ಚರ್ಚೆ ನಡೆಸಿದರು.
ಯೋಜನೆಯ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗದಂತೆ ಪ್ರತಿ ಹಂತದ ಕಾರ್ಯಯೋಜನೆ, ಪ್ರಗತಿ ಹಾಗೂ ಎದುರಾಗಬಹುದಾದ ಸವಾಲುಗಳ ಕುರಿತು ನಿರಂತರವಾಗಿ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಮೈಸೂರಿನ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಯೋಜನೆಯನ್ನು ಪರಿಣಾಮಕಾರಿಯಾಗಿ ಹಾಗೂ ಗುಣಮಟ್ಟದೊಂದಿಗೆ ಸಾಕಾರಗೊಳಿಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾಹಿತಿ ಕಾರ್ಯದರ್ಶಿಗಳಾದ ಜೆ. ಮಂಜುನಾಥ್ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Film City, project, Mysore:, Minister, Dr. Yathindra Siddaramaiah, meeting
The post ಮೈಸೂರಿನಲ್ಲಿ ಫಿಲಂ ಸಿಟಿ ಯೋಜನೆ: ಪರಿಶೀಲನಾ ಸಭೆ ನಡೆಸಿ ಚರ್ಚಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




