ಬೆಂಗಳೂರು,ಜುಲೈ,30,2026 (www.justkannada.in): ತಮಿಳುನಾಡಿಗೆ 15 ದಿನಗಳವರೆಗೆ 3,500 ಕ್ಯೂಸೆಕ್ ನೀರನ್ನು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನ ಸಿಡಬ್ಲ್ಯುಎಂಎ ಎತ್ತಿಹಿಡಿದ ಬೆನ್ನಲ್ಲೆ ರಾಜ್ಯದಲ್ಲಿ ಕಾವೇರಿ ಹೋರಾಟದ ಕಿಚ್ಚು ಮತ್ತೆ ಭುಗಿಲೆದ್ದಿದೆ. ಈ ಸಂಬಂಧ ಇದೀಗ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಹಾಕಿ ಕೊಟ್ಟಿರುವ ಜವಾಬ್ದಾರಿಯಂತೆ ಚಿತ್ರರಂಗ ರೈತರ ಪರ ನಿಲ್ಲಲಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ತಿಳಿಸಿದ್ದಾರೆ.
ಸಿಡಬ್ಲ್ಯುಎಂಎ ಆದೇಶದ ವಿರುದ್ದ ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ರಾಜ್ಯಾದ್ಯಂತ ರೈತರು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗಿದ್ದು ಈ ಬೆನ್ನಲ್ಲೆ ಕನ್ನಡ ಚಿತ್ರರಂಗದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷೆ ಜಯಮಾಲಾ ಹಾಗೂ ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷರುಗಳ ಸಮ್ಮುಖದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಯಿತು.
ಈ ವೇಳೆ ಮಾತನಾಡಿದ ಫಿಲ್ಮ ಚೇಂಬರ್ ಅಧ್ಯಕ್ಷೆ ಜಯಮಾಲಾ, ನಟ ಡಾ.ರಾಜ್ ಕುಮಾರ್ ಅವರು ಹಾಕಿ ಕೊಟ್ಟಿರುವ ಜವಾಬ್ದಾರಿಯಂತೆ ನೆಲ, ಜಲ, ಭಾಷೆಗೆ ಧಕ್ಕೆಯಾದಾಗ ನಾವು ರೈತರ ಪರವಾಗಿ ನಿಲ್ಲುತ್ತೇವೆ. ನಾವು ಇಡೀ ಚಿತ್ರರಂಗ ರೈತರ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು. ಈ ಹಿಂದೆ ಮಹದಾಯಿ ಹೋರಾಟಕ್ಕೆ ಚಿತ್ರರಂಗ ಹುಬ್ಬಳ್ಳಿಗೆ ಹೋಗಿ ರೈತರ ಪರವಾಗಿ ನಿಂತಿತ್ತು ಎಂದರು.
ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡಿ, ಕಾವೇರಿ ನೀರಿನ ವಿಚಾರದಲ್ಲಿ ಕಾವೇರಿ ನಿಯಂತ್ರಣ ಮಂಡಳಿ ಅವೈಜ್ಞಾನಿಕ ತೀರ್ಪು ನೀಡಿದೆ. ನಮ್ಮ ರೈತರಿಗೆ ನೀರು ಇಲ್ಲ. ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿದ್ದರೂ ಸರಿಯಾಗಿ ಮಳೆಯಾಗದೇ ನಮ್ಮ ಜಲಾಶಯಗಳಲ್ಲಿ ನೀರಿಲ್ಲ. ಇಂತಹ ಸಂದರ್ಭದಲ್ಲಿ ಕಾವೇರಿ ನೀರು ಬಿಡೋದಕ್ಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಡಾ.ರಾಜ್ಕುಮಾರ್ ಅವರ ಮಹದಾಯಿ ಮತ್ತು ಗೋಕಾಕ್ ಚಳವಳಿಯಿಂದ ನಾವು ಪ್ರೇರಿತರಾಗಿದ್ದೇವೆ, ಕನ್ನಡ ಚಿತ್ರರಂಗ ರೈತರ ಪರವಾಗಿ ನಿಲ್ಲುತ್ತೇವೆ. ನೆಲ, ಜಲ, ಭಾಷೆ ಅಂತಾ ಬಂದಾಗ ಇಡೀ ಚಿತ್ರರಂಗ ಕನ್ನಡಿಗರ ಜೊತೆ ಇರುತ್ತದೆ ಎಂದು ಸಾರಾ ಗೋವಿಂದು ತಿಳಿಸಿದರು.
Key words: Cauvery dispute, film industry, farmers, Jayamala
The post ಡಾ.ರಾಜ್ ಕುಮಾರ್ ಹಾಕಿ ಕೊಟ್ಟ ಜವಾಬ್ದಾರಿಯಂತೆ ರೈತರ ಪರ ಚಿತ್ರರಂಗ ನಿಲ್ಲುತ್ತೆ- ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




