23
August, 2026

A News 365Times Venture

23
Sunday
August, 2026

A News 365Times Venture

ಕಬಿನಿ ತುಂಬುತ್ತಿದೆ, ಜಲಾಶಯ ತುಂಬಿದಾಗ ನೀರನ್ನು ಹರಿಸಲೇಬೇಕು- ಸಿಎಂ ಡಿ.ಕೆ ಶಿವಕುಮಾರ್

Date:

ಮೈಸೂರು, ಆ.1,2026 (www.justkannada.in): “ಕಬಿನಿ ಜಲಾಶಯ ಭರ್ತಿಯಾಗುತ್ತಿದೆ. ಅಣೆಕಟ್ಟು ತುಂಬಿದಾಗ ನೀರು ಹರಿಸಲೇಬೇಕಾಗುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ನೀರು ಬಿಡಬಾರದು ಎಂದು ಹೋರಾಟ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆಶಿವಕುಮಾರ್,  “ಕಬಿನಿ ಜಲಾಶಯದ ನೀರಿನ ಸಂಗ್ರಹಣೆ ಬಗ್ಗೆ ಅಧಿಕಾರಿಗಳು ಪ್ರತಿ ಗಂಟೆಯೂ ಮಾಹಿತಿ ನೀಡುತ್ತಿದ್ದಾರೆ. ಒಳಹರಿವು 40 ಸಾವಿರ ಕ್ಯೂಸೆಕ್ಸ್ ಮುಟ್ಟಿದೆ. ಪ್ರಕೃತಿ ಯಾರ ಸ್ವತ್ತೂ ಅಲ್ಲ. ಪ್ರಕೃತಿಯ ಅಣತಿಯಂತೆ ನಾವು ಬದುಕುತ್ತಿದ್ದೇವೆ. ನಾವು ನೀರು ಬಿಡುಗಡೆ ಮಾಡಲ್ಲ ಎಂದು ತೀರ್ಮಾನ ಮಾಡಿದರೂ, ಜಲಾಶಯ ತುಂಬಿದಾಗ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೋರಾಟಗಾರರು ನೀರು ಬಿಡುವ ಕಡೆ ಹೋಗಬಾರದು. ನೀರಿನ ರಭಸಕ್ಕೆ ನೀವು ಕೊಚ್ಚಿ ಹೋಗಬಹುದು.‌ ಯಾರೂ ನೀರಿಗೆ ಅಡ್ಡ ಮಲಗಲು ಹೋಗಬೇಡಿ” ಎಂದು ಮನವಿ ಮಾಡಿದರು.

“ನಮ್ಮ ಸ್ನೇಹಿತರು ತಮಿಳುನಾಡಿಗೆ ನೀರು ಹರಿಸಬಾರದಾಗಿ ಹೋರಾಟ, ಬಂದ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ಹೋರಾಟಕ್ಕೆ ಹಿನ್ನೆಲೆ ಇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಹೋರಾಟಕ್ಕೂ ಗೌರವವಿದೆ. ಆದರೆ ಈಗ ಪ್ರತಿಭಟನೆ ಬೇಡ. ಕಾನೂನು ಚೌಕಟ್ಟಿಗೆ ಏನೂ ತೊಂದರೆಯಾಗಬಾರದು, ಜನಜೀವನಕ್ಕೆ ತೊಂದರೆಯಾಗಬಾರದು. ಈ ರಾಜ್ಯದಲ್ಲಿ ಎಲ್ಲಾ ಜನರು ಬದುಕುತ್ತಿದ್ದಾರೆ. ಎಲ್ಲರನ್ನೂ ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ. ತಮಿಳುನಾಡು ಸೇರಿದಂತೆ ನಾವೆಲ್ಲರೂ ಒಂದೇ ದೇಶದ ಪ್ರಜೆಗಳು” ಎಂದು ತಿಳಿಸಿದರು.

“ಬಂಗಾರಪ್ಪ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ, ದೇವೇಗೌಡರ ಕಾಲದಲ್ಲೂ ಸಂಕಷ್ಟ ಎದುರಾದಾಗ ಅಂದಿನ ಸಂದರ್ಭಕ್ಕೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಮಾಡಿದ್ದು ಸರಿ, ಅವರುಗಳು ಮಾಡಿದ್ದು ತಪ್ಪು ಎಂದು ನಾವು ಹೇಳುವುದಿಲ್ಲ‌. ತಮಿಳುನಾಡಿಗೆ 177 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶವಿದೆ. ಇದಕ್ಕೆ ಸುಪ್ರೀಂಕೋರ್ಟ್ ಕೂಡ ಬಲ ನೀಡಿದೆ. ನಾವು ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಬೇಕು. ಜೊತೆಗೆ ನಮ್ಮ ರೈತರನ್ನೂ ಕಾಪಾಡಬೇಕು. ನಮ್ಮ ರೈತರ ಹಿತವನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ‌. ಈ ಆದೇಶ ಎರಡೂ ರಾಜ್ಯಕ್ಕೆ ವರ” ಎಂದು ಅಭಿಪ್ರಾಯಪಟ್ಟರು.

“ಎರಡೂ ರಾಜ್ಯಗಳನ್ನೂ ಕಾಪಾಡುವ ತೀರ್ಪನ್ನು ಈ ಹಿಂದೆ ನೀಡಲಾಗಿದೆ. ಮಾಧ್ಯಮವೊಂದರಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಏನೆಲ್ಲಾ ಅನುಕೂಲವಾಗಲಿದೆ ಎಂದು ಚೆನ್ನಾಗಿ ವಿಶ್ಲೇಷಣೆ ಮಾಡಲಾಗಿದೆ. ಕಾವೇರಿ ನೀರಿನ ವಿಚಾರವಾಗಿ ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಅವರು, ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಅನೇಕರು ಅವರ ಕೈಲಾದ ಪ್ರಯತ್ನ ಮಾಡಿದ್ದಾರೆ.  ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರಿಗೂ ಯಾವ್ಯಾವ ಜಲಾಶಯಗಳಲ್ಲಿ ಎಷ್ಟೆಷ್ಟು ನೀರಿದೆ ಎನ್ನುವ ಮಾಹಿತಿ ಕೂಡ ಇದೆ. ಬೇರೆ ಸಂದರ್ಭಗಳಿಗೆ ಹೋಲಿಸಿದರೆ ಅರ್ಧ ನೀರನ್ನೂ ಬಿಡುಗಡೆ ಮಾಡಿಲ್ಲ ಎಂದು ನಮ್ಮ ಮನವಿ ತಿರಸ್ಕರಿಸಿದ್ದಾರೆ” ಎಂದು ಹೇಳಿದರು.

ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ

“ಬಿಜೆಪಿಯವರ ಕಾವೇರಿ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನೂ ಸಹ ನಾನು ಗಮನಿಸಿದ್ದೇನೆ. ತಮಿಳುನಾಡಿನ ಸಂಸದರು, ವಿವಿಧ ಪಕ್ಷಗಳ ನಾಯಕರು ಅವರ ರಾಜಕೀಯ ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿದ್ದಾರೆ. ಅವರಿಗೂ ಎಲ್ಲಾ ಅರಿವಿದೆ. ಈ ಹಿಂದೆ ನಿಮ್ಮ ಸುಪರ್ಧಿಯಲ್ಲಿ ಅಣೆಕಟ್ಟು ಕಟ್ಟಿಕೊಳ್ಳಬಹುದು ಎಂದು ಹೇಳಿದ್ದರು. ಇದಕ್ಕೆ ದಾಖಲೆಗಳೂ ಸಹ ಇವೆ” ಎಂದರು.

ಮೇಕೆದಾಟು ವಿಚಾರ ಸುಪ್ರೀಂನಲ್ಲಿ ಜಯ

“ಮೇಕೆದಾಟು ವಿಚಾರದಲ್ಲಿ ನಮಗೆ ಸುಪ್ರೀಂಕೋರ್ಟ್ ನಲ್ಲಿ ದೊಡ್ದ ಜಯ ಸಿಕ್ಕಿದೆ. ಸಂಸತ್ ನಲ್ಲಿಯೂ ಸಹ ಅವರ ಜಾಗದಲ್ಲಿ ಅಣೆಕಟ್ಟು ಕಟ್ಟಿಕೊಳ್ಳಲು ಕಾನೂನು ಏನು ಹೇಳುತ್ತದೆ ಎಂದು ತುಂಬಾ ಚೆನ್ನಾಗಿ ಉತ್ತರ ನೀಡಲಾಗಿದೆ” ಎಂದರು.

“ತುಂಗಭದ್ರಾ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ನಡೆಸಿ ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ. ಅವರು ಸಹ ಸಮಿತಿ ರಚನೆ ಮಾಡುವುದಾಗಿ ತಿಳಿಸಿದ್ದಾರೆ. ನಾನು ಮುಖ್ಯಮಂತ್ರಿ ಆದ ಮೇಲೆ ನಡೆದ ಐತಿಹಾಸಿಕ ತೀರ್ಮಾನ. ಐತಿಹಾಸಿಕ ಹೆಜ್ಜೆ” ಎಂದರು.

“ತಮಿಳುನಾಡು ಸಿಎಂ ಆಗಸ್ಟ್ 3 ರಂದು ರಾಜ್ಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ ಇಲ್ಲಿ ಪರಿಸ್ಥಿತಿ ಸರಿಯಿಲ್ಲ. ಏಕೆಂದರೆ ಯಾವುದೇ ಮಾತುಕತೆಗಳು ಶಾಂತಿ, ಸೌಹಾರ್ದಯುತವಾಗಿ ನಡೆಯಬೇಕು. ನಮ್ಮ ಪರಿಸ್ಥಿತಿ, ಅವರ ಪರಿಸ್ಥಿತಿ ಇಬ್ಬರಿಗೂ ಅರಿವಿದೆ. ಸಮಸ್ಯೆ ಮಾತುಕಥೆಯಲ್ಲಿ ಬಗೆಹರಿಯುವುದಾದರೆ ಬಗೆಹರಿಯಲಿ. ಅವರ ಹಕ್ಕನ್ನು ಅವರು ಪಡೆಯಲಿ. ನಾವು ಅದಕ್ಕೆ ಎಂದಿಗೂ ಅಡ್ಡಿ ಮಾಡುವುದಿಲ್ಲ. ನ್ಯಾಯಾಲಯ ನೀಡಿದ ನಮ್ಮ ಹಕ್ಕನ್ನು ನಾವು ಪಡೆಯೋಣ. ಇದಕ್ಕೆ ಎಲ್ಲರೂ ಸಹಕಾರ ನೀಡುತ್ತಾರೆ ಎಂದು ಭಾವಿಸೋಣ. ವಿಜಯ್ ಅವರ ಭೇಟಿಗೆ ಎಲ್ಲಾ ಪರಿಸ್ಥಿತಿ ತಿಳಿಯಾದ ನಂತರ ದಿನಾಂಕ ನಿಗದಿ ಮಾಡಲಾಗುವುದು” ಎಂದರು.

ತಮಿಳುನಾಡಿಗೆ ನೀರು ಹರಿಸಲಾಗುವುದೇ ಎಂದು ಕೇಳಿದಾಗ, “ಸರ್ವಪಕ್ಷ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ನಾಯಕರು, ಕಾನೂನು ತಜ್ಞರ ಮಾತನ್ನು ಆಲಿಸಲಾಗುವುದು. ಒಂದು ಕಡೆ ಯಡಿಯೂರಪ್ಪ ಅವರು, ವಿಜಯೇಂದ್ರ ಅವರು ನಗುತ್ತಿದ್ದಾರೆ. ಇನ್ನೊಂದು ಕಡೆ ಸಂಸದರು, ಮಂತ್ರಿಗಳು ಕರ್ನಾಟಕಕ್ಕೆ ಸಂಸತ್ತಿನಲ್ಲಿ ಸಹಾಯ ಮಾಡುತ್ತಿದ್ದಾರೆ” ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆಗಿದ್ದು ಒಳ್ಳೆಯದು ಎಂಬುದೇ ನಿಮ್ಮ ಅಭಿಪ್ರಾಯ ಎಂದು ಕೇಳಿದಾಗ, “ಕಳೆದ ವರ್ಷ ಎಷ್ಟು ನೀರು ಬಿಡಲಾಗಿತ್ತು, ಈ ವರ್ಷ ಎಷ್ಟು ನೀರು ಬಿಡಲಾಗಿದೆ ಎಂದು ಮಾಧ್ಯಮಗಳೇ ಗಮನಿಸಿ ತೀರ್ಮಾನ ಮಾಡಿ. ಬೋರ್ಡ್ ಇಲ್ಲದೇ ಇದ್ದಾಗ 16. ಟಿಎಂಸಿ ನೀರು ಬಿಡಬೇಕು ಎಂದೆಲ್ಲಾ ತೀರ್ಮಾನ ಮಾಡಲಾಗಿದೆ ಎನ್ನುವ ದಾಖಲೆಗಳಿವೆ. ಪ್ರಸ್ತುತ ತಮಿಳುನಾಡು 9 ಸಾವಿರ ಕ್ಯೂಸೆಕ್ಸ್ ಗೆ ಬೇಡಿಕೆ ಇಟ್ಟಿತ್ತು. ಆದರೆ 3,500 ಕ್ಯೂಸೆಕ್ ನೀರು ಹರಿಸಲು ಆದೇಶ ನೀಡಿದ್ದಾರೆ” ಎಂದು ತಿಳಿಸಿದರು.

ಕಬಿನಿಗೆ ಬಾಗಿನ ಅರ್ಪಿಸುವಿರಾ ಎಂದು ಕೇಳಿದಾಗ, “ಈಗ ಬೇಡ ತಡೆಯಿರಿ. ಏನೂ ಇಲ್ಲದೇ ಈಗಾಗಲೇ ನಮ್ಮ ವಿರುದ್ಧ ದಾಳಿ ಮಾಡುತ್ತಿದ್ದಾರೆ” ಎಂದರು.

“ಶುಭಮುಹೂರ್ತ, ಶುಭ ಘಳಿಗೆಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆದ ಮೇಲೆ ಮೈಸೂರಿಗೆ ಬಂದಿದ್ದೇನೆ. ಚಾಮುಂಡಿ ತಾಯಿಗೆ ನಮಿಸಲಿದ್ದೇನೆ. ಮೈಸೂರಿನ ನೆಲದಿಂದ ಸ್ವಾಮಿ ವಿವೇಕಾನಂದ ಅವರು ಅಂದು ದೊಡ್ಡ ಸಂದೇಶ ನೀಡಿದ್ದಾರೆ. ಅಂದಿನ ಕಾಲದಲ್ಲೇ ನಮ್ಮ ಮೈಸೂರು ಮಹಾರಾಜರು ಶೈಕ್ಷಣಿಕ, ಸಾಂಸ್ಕೃತಿಕ ಕೊಡುಗೆಯನ್ನು ಈ ರಾಜ್ಯಕ್ಕೆ ನೀಡಿದ್ದಾರೆ. ಅವರು ರಾಜ್ಯದ ಅಭಿವೃದ್ಧಿಗೆ ನೀಡಿದ ಉತ್ತೇಜನ ಯಾರೂ ಸಹ ಮರೆಯಲು ಸಾಧ್ಯವಿಲ್ಲ. ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಬಾಬಾ ಸಾಹೇಬರು ಹೇಳಿದ್ದಾರೆ” ಎಂದರು.

Key words: Kabini, reservoir, filling up, water, Release, CM, DK Shivakumar

The post ಕಬಿನಿ ತುಂಬುತ್ತಿದೆ, ಜಲಾಶಯ ತುಂಬಿದಾಗ ನೀರನ್ನು ಹರಿಸಲೇಬೇಕು- ಸಿಎಂ ಡಿ.ಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತಮಿಳುನಾಡಿಗೆ ನೀರು: ಕಬಿನಿ ಡ್ಯಾಂ ಬಳಿ ರೈತರ ಪ್ರತಿಭಟನೆ, ಮುತ್ತಿಗೆಗೆ ಯತ್ನ

ಮೈಸೂರು,ಆಗಸ್ಟ್,22,2026 (www.justkannada.in):  ತಮಿಳುನಾಡಿಗೆ ನಿತ್ಯ ನೀರು ಹರಿಸುವ ಮೂಲಕ ಕಾವೇರಿ ನೀರು...

KSOU ಬಿಒಎಂ ನೇಮಕಕ್ಕೆ ರಾಜಕೀಯ ಲೆಕ್ಕಾಚಾರ : ಸಾಮಾಜಿಕ ನ್ಯಾಯದ ಸಮೀಕರಣದಲ್ಲಿ ತಿಮ್ಮಯ್ಯ–ಶಿವಕುಮಾರ್ ಹೆಸರು!

ಮೈಸೂರು, ಆ.೨೨,೨೦೨೬: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್‌...

ಬಗೆದಷ್ಟು ಬಯಲಿಗೆ ‘ಚಿನ್ನತಂಬಿ’ಯ ಕರ್ಮಕಾಂಡ: ಮತ್ತೆರೆಡು FIR ದಾಖಲು

ಮೈಸೂರು,ಆಗಸ್ಟ್,22,2026 (www.justkannada.in): ಚಿನ್ನ ಗಿರವಿ ಇಟ್ಟುಕೊಂಡು ನೂರಾರು ಗ್ರಾಹಕರಿಗೆ ವಂಚಿಸಿರುವ ಸುಂದರ್‌...

IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆ

ಬೆಂಗಳೂರು, ಆಗಸ್ಟ್, 22,2026 (www.justkannada.in):   ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ...