ಮೈಸೂರು,ಜೂನ್,24,2025 (www.justkannada.in): ಮೈಸೂರು ಅರಮನೆಗೆ ಸುಬ್ರಹ್ಮಣ್ಯ ಲೀಡರ್ ಆಗಿದ್ದು ಅರಮನೆ ದಿವಾಳಿ ಆಗುತ್ತಿದೆ. ಮೈಸೂರು ಅರಮನೆ ಆಡಳಿತ ಮಂಡಳಿಗೆ ಕೆ.ಎ.ಎಸ್ ಅಧಿಕಾರಿಯನ್ನ ನೇಮಿಸಿ ಅರಮನೆ ಉಳಿಸಿಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್, ಜೂನ್ 26 ರಂದು ಮೈಸೂರು ದಸರಾ ಆಚರಣೆ ಸಂಬಂಧ ಹೈ ಪವರ್ ಮೀಟಿಂಗ್ ಇದೆ. ಅಧಿಕಾರಿಗಳು ಸಿಎಂರನ್ನೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅರಮನೆಗೆ ಸುಬ್ರಹ್ಮಣ್ಯನೇ ಲೀಡರ್. ಹೀಗಾಗಿ ಅರಮನೆ ದಿವಾಳಿ ಆಗುತ್ತಿದೆ. ಅದ್ದರಿಂದ ಅರಮನೆ ನಿರ್ವಹಣೆಯನ್ನ ಮಹರಾಜರಿಗೆ ಕೊಡೋದು ಒಳ್ಳೆಯದು. ಅರಮನೆ ಮಂಡಳಿಗೆ ಕೆಎಎಸ್ ಅಧಿಕಾರಿಯನ್ನ ನೇಮಕ ಮಾಡಬೇಕು ಅಂತ ಇದೆ. ಆದರೆ ಆ ವ್ಯಕ್ತಿಯನ್ನ ಬರಲು ಇವರು ಬಿಡುತ್ತಿಲ್ಲ. ಅರಮನೆಗೆ ಬರುವ ಪ್ರವಾಸಿಗರ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಇದನ್ನ ಕೇಳುವವರೇ ಯಾರು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಕ್ಷೇತ್ರದಲ್ಲಿ ಮುಡಾ ಹಾಳಾಯಿತು. ಅರಮನೆ ದಿವಾಳಿ ಆಗುತ್ತಿದೆ. ಮೈಸೂರು ಅರಮನೆಗೆ ವಿಶ್ವ ವಿಖ್ಯಾತ ಮನ್ನಣೆ ಇದೆ. ಆದರೆ ಮೂರು ಜನ ಗುಂಪು ಕಟ್ಟಿಕೊಂಡು ದಸರಾ ಆಚರಣೆ ಮಾಡುತ್ತಾರೆ. ಎಲ್ಲಾ ಕಡೆ ಸಿದ್ದರಾಮಯ್ಯ ಶಿಷ್ಯರೇ ಕುಳಿತು ಹಾಳು ಮಾಡಿದ್ದಾರೆ. ಮಿಸ್ಟರ್ ಸಿದ್ದರಾಮಯ್ಯ ಇನ್ನೇನು ಉದ್ದಾರ ಮಾಡ್ತೀರಾ. ಸರ್ಕಾರ ಅರಮನೆ ಕಡೆ ಗಮನಹರಿಸಬೇಕು ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ವಸತಿ ಇಲಾಖೆಯಲ್ಲಿನ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಆಶ್ರಯ ಸಮಿತಿಯೇ ಪರಮೋಚ್ಚ. ಆಶ್ರಯ ಸಮಿತಿ ಗ್ರಾಮಸಭೆ ಮೂಲಕ ಆಯ್ಕೆ ಆಗಬೇಕು. ಸಚಿವರು ತನಕ ಹಣ ಹೋಗಲ್ಲ. ಆಶ್ರಯ ಸಮಿತಿ, ಶಾಸಕರ ಹಂತದಲ್ಲೇ ಮನೆಗಳು ಮಾರಾಟ ಆಗುತ್ತವೆ. ಕಾಮಗಾರಿಯಲ್ಲಿ ಸಚಿವರಿಗೆ 10% ಕಮಿಷನ್ ಹೋಗುತ್ತೆ. ಕೆಲಸ ಮುಗಿಸುವವರೆಗೆ 25% ಆಗುತ್ತೆ. ಸಿದ್ದರಾಮಯ್ಯ ರಾಜ್ಯ ಹರಾಜು ಹಾಕಿದ್ದಾರೆ. ಎಲ್ಲಾ ಭಾಗ್ಯಗಳನ್ನ ಹೆಂಗಸರಿಗೆ ಕೊಟ್ಟಿದ್ದಾರೆ . ಮದ್ಯದ ದರ ಹೆಚ್ಚು ಮಾಡಿದ್ದು ಕುಡಿಯೋರು ಕಡಿಮೆ ಆಗಲಿ ಅಂತ ಮಾಡಿದ್ದೇವೆ ಎನ್ನುತ್ತಾರೆ. ನೀವೇನೂ ಹುಚ್ಚ ಅಂದ್ರೆ ಜನ ಹುಚ್ಚರಾ.? ರಾಜ್ಯದಲ್ಲಿ ಗಾಂಜಾ ಅಫೀಮು ಎಲ್ಲಾ ಕಡೆ ಹೆಚ್ಚಾಗಿದೆ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.
ಸಹಕಾರ ಕ್ಷೇತ್ರದಲ್ಲಿ ಜಿಟಿ ದೇವೇಗೌಡ ಕುಟುಂಬ ಮುಗಿಸೋದು ಸಿಎಂ ಪ್ಲಾನ್.
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕರ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್ , ಜಿಟಿ ದೇವೇಗೌಡ, ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಇದ್ದಾರೆ. ಸಹಕಾರ ಕ್ಷೇತ್ರದಲ್ಲಿ ಇವರ ಹಿಡಿತ ತಪ್ಪಿಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಅಂತ ಮಾಡುತ್ತಿದ್ದಾರೆ. ಕಾರ್ಯಕರ್ತರು ಚುನಾವಣೆಗೆ ನಿಂತರೆ ಹಣದ ಕೊರತೆ ಆಗುತ್ತೆ. ಶಾಸಕರು ನಿಂತರೇ ಹಣ ಖರ್ಚು ಮಾಡುತ್ತಾರೆ. ಸಹಕಾರ ಕ್ಷೇತ್ರದಲ್ಲಿ ಜಿಟಿ ದೇವೇಗೌಡ ಕುಟುಂಬ ಮುಗಿಸೋದು ಸಿಎಂ ಪ್ಲಾನ್ ಎಂದು ಹೇಳಿದರು.
Key words: Mysore palace board, KAS officer , save, palace, H.Vishwanath
The post Mysore palace board; ಕೆ.ಎ.ಎಸ್ ಅಧಿಕಾರಿ ನೇಮಿಸಿ ಅರಮನೆ ಉಳಿಸಿ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




