ಮೈಸೂರು,ಫೆಬ್ರವರಿ, 26,2026 (www.justkannada.in): ತನ್ನ ಅಧೀನದಲ್ಲಿರುವ 150 ಎಕರೆ ಜಾಗದಲ್ಲಿ ಬಡಾವಣೆ నిರ್ಮಿಸಿ ನಿವೇಶನಗಳನ್ನು ಹರಾಜು ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಮಾಸ್ಟರ್ ಪ್ಲಾನ್ ಸಿದ್ದಪಡಿಸಿದೆ.
ಹೌದು, ಎಂಡಿಎ ಅಧ್ಯಕ್ಷ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತ ಕೆ.ಆರ್.ರಕ್ಷಿತ್ ಮತ್ತು ಮಂಡಳಿ ಸದಸ್ಯರು ಎಂಡಿಎ ಆರ್ಥಿಕ ಮೂಲ ಸದೃಢಗೊಳಿಸಲು ಈ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.
ಎಂಡಿಎ ವ್ಯಾಪ್ತಿಯಲ್ಲಿರುವ ಬಡಾವಣೆಗಳಲ್ಲಿ ಈಗಾಗಲೇ ನಿವೇಶನಗಳನ್ನು ಜೇಷ್ಠತೆ ಆಧಾರದ ಮೇಲೆ ಹಂಚಿಕೆ ಮಾಡಿದ್ದರೂ ಸಾಕಷ್ಟು ಕಡೆ ಎಕರೆಗಟ್ಟಲೇ ಜಾಗವು ಪ್ರಾಧಿಕಾರದ ಒಡೆತನದಲ್ಲಿಯೇ ಇದೆ. ಅಂತಹ ಒಟ್ಟು 150 ಎಕರೆ ಪ್ರದೇಶವನ್ನು ಗುರುತಿಸಿರುವ ಪ್ರಾಧಿಕಾರ, ಅಲ್ಲಿ 20X30 ಅಡಿ, 30×40ಅಡಿ , 40×60 ಅಡಿ, 50X80 ಅಡಿ ಅಳತೆಯ ನಿವೇಶನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಸಾಮಾನ್ಯ ಹಂಚಿಕೆ ವಿಧಾನ ಬದಲಾಗಿ ಈ ನಿವೇಶನಗಳನ್ನು ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲು ಎಂಡಿಎ ನಿರ್ಧರಿಸಿದೆ. ಇದರಿಂದ ಹೆಚ್ಚಿನ ಆದಾಯ ಗಳಿಸುವುದರ ಜತೆಗೆ ನಗರದಲ್ಲಿರುವ ಎಂಡಿಎ ಭೂಮಿಗಳ ಅಕ್ರಮ ಒತ್ತುವರಿ ತಡೆಗಟ್ಟಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಎಂಡಿಎ ಇದರಿಂದ ಬರೋಬ್ಬರಿ 1 ಸಾವಿರ ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆಯನ್ನೂ ಸಹ ಹೊಂದಿದೆ ಎನ್ನಲಾಗಿದೆ.
ಈಗಾಗಲೇ ಈ ಹಿಂದಿನ ಮುಡಾ ಅಭಿವೃದ್ಧಿ ಪಡಿಸಿ, ಇದೀಗ ಎಂಡಿಎ ವ್ಯಾಪ್ತಿಯಲ್ಲಿರುವ ಬಡಾವಣೆಗಳೂ ಸೇರಿದಂತೆ ಸುಮಾರು 700 ಲೇ ಔಟ್ ಗಳನ್ನು ಈಗಾಗಲೇ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಮೈಸೂರು ನಗರದ ಹೊರ ವಲಯದಲ್ಲಿನ ವಿಜಯನಗರ (ಮೊದಲ ಹಂತದಿಂದ ನಾಲ್ಕನೇ ಹಂತ), ವಿಜಯಶ್ರೀಪುರ, ದಟ್ಟಗಳ್ಳಿ, ಶ್ರೀರಾಮಪುರ, ಜೆ.ಪಿ.ನಗರ, ದೇವನೂರು, ರಾಜೀವನಗರ, ಲಲಿತಾದ್ರಿನಗರ ಮತ್ತು ಹೆಬ್ಬಾಳ ಪ್ರದೇಶಗಳಲ್ಲಿ ಸುಮಾರು 150 ಎಕರೆ ಖಾಲಿ ಭೂಮಿಯನ್ನು ಗುರುತಿಸಿದ್ದಾರೆ. ನಗರದ ಒಳಭಾಗದಲ್ಲಿ ಅಭಿವೃದ್ಧಿಪಡಿಸಲಾಗುವ ನಿವೇಶನಗಳನ್ನು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲು ಮುಖ್ಯಮಂತ್ರಿ ಅವರ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಅವರು, ಎಂಡಿಎ ವ್ಯಾಪ್ತಿಯಲ್ಲಿನ ಖಾಲಿ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹರಾಜಿನ ಮೂಲಕ ಮಾರಾಟ ಮಾಡುವ ಸಂಬಂಧ ಯೋಜನೆ ರೂಪಿಸಲಾಗಿದೆ. ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದಿದ್ದಾರೆ.
Key words: MDA, master plan ,150 acre, Layout. site
The post 150 ಎಕರೆಯಲ್ಲಿ ಬಡಾವಣೆ: ಮಾಸ್ಟರ್ ಪ್ಲಾನ್ ಸಿದ್ದಪಡಿಸಿದ ‘MDA’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




