ಮೈಸೂರು, ಮೇ.27,2026 (www.justkannada.in): ಜಿಲ್ಲಾಡಳಿತದ ವತಿಯಿಂದ ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪಾರ ಜಿಲ್ಲಾಧಿಕಾರಿ ಐಶ್ವರ್ಯ ಆರ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗೃತಿ ಜಾಥಾ
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜೂನ್ 12 ರಂದು ಬೆಳಿಗ್ಗೆ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಪೀಪಲ್ಸ್ ಪಾರ್ಕ್ ವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ಬೃಹತ್ ಜಾಗೃತಿ ಜಾಥಾ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ ಹಾಗೂ ವೀರಗಾಸೆ ಕಲಾ ತಂಡಗಳು ಜಾಥಾದಲ್ಲಿ ಭಾಗವಹಿಸಿ ಜಾಥಾಗೆ ವಿಶೇಷ ಮೆರುಗು ನೀಡಲಿವೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮ: ಜೂನ್ 12 ರಂದು ಬೆಳಿಗ್ಗೆ 11:00 ಗಂಟೆಗೆ ಪೀಪಲ್ಸ್ ಪಾರ್ಕ್ ನಲ್ಲಿ ಪ್ರಧಾನ ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಸ್ವಯಂ ಸೇವಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸಾಮೂಹಿಕ ಪ್ರಮಾಣ ವಚನ ಸ್ವೀಕಾರ
ಜೂನ್ 12 ರಂದು ಬೆಳಿಗ್ಗೆ 11:00 ಗಂಟೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಕಚೇರಿಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ‘ಪ್ರಮಾಣ ವಚನ’ ಸ್ವೀಕಾರಿಸಲಾಗುವುದು. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸಿದರು.
ವ್ಯಾಪಕ ಜಾಗೃತಿ ಮೂಡಿಸಿ
ಜಾಥಾ ಸಂದರ್ಭದಲ್ಲಿ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986 ರ ಕುರಿತು ಮಾಹಿತಿಯಿರುವ ಕರಪತ್ರಗಳನ್ನು ಹಂಚುವುದರ ಮೂಲಕ ವ್ಯಾಪಕ ಜಾಗೃತಿ ಮೂಡಿಸಿ ಎಂದರು.
ಮೈಸೂರು ನಗರ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಡಂಗೂರ’ ಸಾರಿಸುವ ಮೂಲಕ ಮತ್ತು ಸ್ಥಳೀಯ ಕಸ ವಿಲೇವಾರಿ ವಾಹನಗಳ ಧ್ವನಿವರ್ಧಕಗಳ ಮೂಲಕ ಉಚಿತವಾಗಿ ಬಾಲಕಾರ್ಮಿಕ ವಿರೋಧಿ ಘೋಷಣೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಇಲಾಖೆಗಳಿಗೆ ನಿರ್ದೇಶನ ನೀಡಿದರು.
ಸ್ಪರ್ಧೆಗಳು: ಬಾಲಕಾರ್ಮಿಕ ಪದ್ಧತಿ ವಿರೋಧಿ ಕುರಿತು ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಪ್ರಬಂಧ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬಾಲಕಾರ್ಮಿಕ & ಕಿಶೋರ ಕಾರ್ಮಿಕ ಕಾಯ್ದೆ 1986 ಕಲಂ 17ರಡಿ ನೇಮಕಗೊಂಡ ಅಧಿಕಾರಿಗಳ ತಂಡದ ಸಹಭಾಗಿತ್ವದಲ್ಲಿ ತಾಲ್ಲೂಕುವಾರು ‘ಬಾಲ, ಕಿಶೋರ ಕಾರ್ಮಿಕ ರಕ್ಷಣಾ ಅಭಿಯಾನವನ್ನು ಹಮ್ಮಿಕೊಂಡು ಬಾಲ/ಕಿಶೋರ ಕಾರ್ಮಿಕ ರಕ್ಷಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಲಲಿತಾ ಬಾಯಿ, ಮೈಸೂರು ವಿಭಾಗದ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಎಚ್.ಪಿ ಹಾಗೂ ಕಾರ್ಮಿಕ ಇಲಾಖೆಯ ಎಲ್ಲಾ ಹಿರಿಯ ಕಾರ್ಮಿಕ ನಿರೀಕ್ಷಕರು ಉಪಸ್ಥಿತರಿದ್ದರು.
Key words: World Anti-Child Labor Day, June 12, Mysore, ADC, R. Aishwarya
The post ಜೂ.12 ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ: ಅಪಾರ ಜಿಲ್ಲಾಧಿಕಾರಿ ಆರ್. ಐಶ್ವರ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




