14
July, 2025

A News 365Times Venture

14
Monday
July, 2025

A News 365Times Venture

MYSORE: ಡಾ.ರಂಗನಾಥಯ್ಯ ಎಂಬ “ಸಂತ” ವೈದ್ಯ.

Date:

ಮೈಸೂರು,ಜುಲೈ,2,2025 (www.justkannada.in): ಸೌಖ್ಯವಿಲ್ಲ ಎಂದು ತನ್ನಲ್ಲಿಗೆ ಬರುವವರ, ಆರೋಗ್ಯದ ಸ್ಥಿತಿಯನ್ನು  ಅವರ ಮುಖಚರ್ಯೆಯಲ್ಲಿ, ನಡಿಗೆಯಲ್ಲಿ ಅಂದಾಜಿಸಿ, ಸ್ವಲ್ಪಹೊತ್ತು ನಾಡಿ ಹಿಡಿದು ಪರೀಕ್ಷಿಸಿ- “ನಿಮಗೇನು ಆಗಿಲ್ಲ ರೀ..,’’ ಎಂದು ಆರೋಗ್ಯ ತಪಾಸಣೆಗೆ ಇಳಿವ ವೈದ್ಯರನ್ನು ಕನ್ನಡದ ಕ್ಲಾಸಿಕಲ್ ಸಿನಿಮಾಗಳಲ್ಲಿ ನೋಡಿದ್ದೆ, ಲೇಖಕರ ಬರಹಗಳಲ್ಲಿ ಕಂಡಿದ್ದೆ. ಆದರೆ, ಪ್ರತ್ಯಕ್ಷ ನೋಡಿದ್ದು ಮಾತ್ರ  ಮೈಸೂರಿನಲ್ಲಿ !

23 ವರ್ಷಗಳ ಹಿಂದಿನ ಮಾತು. ಹೀಗೆ ಏನೋ, ಮೈಯಲ್ಲಿ ಹುಷಾರಿಲ್ಲ ಎಂದು ನಿತ್ರಾಣಗೊಂಡಾಗ, ಕುವೆಂಪುನಗರದ ಧನ್ವಂತರಿ ಆಸ್ಪತ್ರೆಯ ಡಾ. ರಂಗನಾಥಯ್ಯ ಅವರ ಬಳಿ ನನ್ನನ್ನು ಕರೆದೊಯ್ದು ಕೂರಿಸಿದವರು, ಗೆಳೆಯ ಅ. ಮ. ಭಾಸ್ಕರ್. ಅದು ಮೊದಲ ಭೇಟಿ. ನಾಡಿ ಹಿಡಿಯುತ್ತಲೇ, ಊರು-ಉದ್ಯೋಗ ಎಲ್ಲವನ್ನೂ ವಿಚಾರಿಸುತ್ತಲೇ, “ಓ, ಪತ್ರಕರ್ತರೇ, ನೀವು ಸಮಾಜದ ಅರೋಗ್ಯವನ್ನು ಕಾಪಾಡಬೇಕಾದವರು. ನೀವು ಒಂದು ರೀತಿಯಲ್ಲಿ ವೈದ್ಯರ ರೀತಿ ಕೆಲಸ ಮಾಡಬೇಕು…!,” ಎಂದು ಬುದ್ಧಿವಾದ ಹೇಳುತ್ತಲೇ,  ಒಂದಿಷ್ಟು ಮಾತ್ರೆ ಕೊಟ್ಟರು.

ಮೊದಲ ಭೇಟಿಯಲ್ಲಿಯೇ ಸುಮಾರು 25  ನಿಮಿಷಕ್ಕೂ ಹೆಚ್ಚುಕಾಲ ನನ್ನನ್ನು ತಪಾಸಣೆಗೆ ಒಳಪಡಿಸಿದ ರಂಗನಾಥಯ್ಯ, ಇಷ್ಟು ಅವಧಿಯಲ್ಲಿ  ಅವರು ನನ್ನ ಮೈಗಷ್ಟೇ  ಚಿಕಿತ್ಸೆ ನೀಡಲಿಲ್ಲ. ಮನಸ್ಸಿಗೂ ನೀಡಿದರು. ಬುದ್ಧ, ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದ,  ಚಾಮರಾಜನಗರದ ರಾಚಯ್ಯ-ಇಷ್ಟು ಜನರ ವಿಚಾರವನ್ನೂ ಮನಸ್ಸಿಗಿಳಿಸಿದರು. ವೈದ್ಯರೊಬ್ಬರು ಗಾಂಧಿ-ಅಂಬೇಡ್ಕರ್ ಬಗ್ಗೆ ಮಾತನಾಡಿದ್ದುಅವರ ಚಿಂತನೆಯನ್ನುಸಾಮಾಜಿಕ ಮದ್ದು ಎಂದು ಬಣ್ಣಿಸಿದ್ದು- ಎರಡೂ ಇಷ್ಟವಾಯಿತು.

ಅಲ್ಲಿಂದ ಮುಂದೆ ಅವರು ಪರಿವಾರದ ವೈದ್ಯರೇ ಆದರು. ಮೈಸೂರು ಮಾತ್ರವಲ್ಲ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು-ಇಲ್ಲೆಲ್ಲಾ ಹರಡಿಕೊಂಡಿರುವ ನಮ್ಮ ಕುಟುಂಬದ ಎಲ್ಲ ಹಿರಿಕಿರಿಯರು ಡಾ. ರಂಗನಾಥಯ್ಯ ಅವರ ಬಳಿ ಚಿಕಿತ್ಸೆ ಪಡೆದಿದ್ದೇವೆ ! ನನ್ನ ತಂದೆಗೆ ಎರಡು ಬಾರಿ ಮರುಜನ್ಮ ನೀಡಿದ್ದಾರೆ.

ಆರೋಗ್ಯ ಸರಿ ಇಲ್ಲ ಎಂದು ತನ್ನಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ಕನಿಷ್ಠ 20 ನಿಮಿಷ ಮೀಸಲಿಡುವ ಡಾಕ್ಟರ್ ಅವರನ್ನು ಅದೊಮ್ಮೆ ,  “ಒಬ್ಬರಿಗೆ ಇಷ್ಟೊಂದು ಸಮಯ ಮೀಸಲಿಡುವಿರಿ. ಅವರ ಊರಿನ, ಕುಟುಂಬದ ಸಮಾಚಾರವನ್ನೆಲ್ಲಾ ಕೇಳುವಿರಿ ? ಯಾಕೆ ಸಾರ್,” ಎಂದು ಕೇಳಿದ್ದೆ.  ” ರೋಗಿಗೆ ಚಿಕಿತ್ಸೆ ನೀಡುವುದರಲ್ಲಿ ವೈದ್ಯನ ಹೆಚ್ಚುಗಾರಿಕೆ ಇಲ್ಲ.  ರೋಗ ಎಂತಹದ್ದು, ಅದು ಯಾಕೆ ಬಂದಿದೆ ಎಂಬುದನ್ನು ಪತ್ತೆಹಚ್ಚುವುದರಲ್ಲಿ  ದೊಡ್ಡತನವಿದೆ. ಅದೇ ನಿಜವಾದ ವೈದ್ಯತನ. ಔಷಧಿಯನ್ನು ಯಾರು ಬೇಕಾದರೂ ನೀಡಿಯಾರು, ರೋಗವನ್ನು ಪತ್ತೆಹಚ್ಚಲು ವೈದ್ಯನೇ ಬೇಕು. ಇಷ್ಟು ಮಾಡಿದರೆ ರೋಗಿ ಅರ್ಧ ಗೆದ್ದಂತೆ,” ಎಂದಿದ್ದರು.

‘ಅದ್ಸರಿ, ಬಂದವರ ಬಳಿ ಕುಶಲೋಪರಿಗೆ ಇಳಿಯುವಿರಲ್ಲಾ ,” ಎಂದು ಪ್ರಶ್ನಿಸಿದಾಗ, ” ಚಿಕಿತ್ಸೆ ನೀಡುವ ವೈದ್ಯನಿಗೆ ರೋಗಿಯ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯ ಅರಿವೂ ಇರಬೇಕು, ಇಲ್ಲದಿದ್ದರೆ ಚಿಕಿತ್ಸೆ ಅಪೂರ್ಣ,”  ಎಂದು ಮುಗುಳ್ನಕ್ಕಿದ್ದರು ನಮ್ಮ ಡಾಕ್ಟ್ರು !

ಕೈಗುಣ ಎಂಬುದನ್ನು ಡಾ. ರಂಗನಾಥಯ್ಯ ಅವರು ಒಪ್ಪುವುದಿಲ್ಲ. “ಅಂಥದ್ದೆಲ್ಲಾ ಇರೋದಿಲ್ಲ.  ಕೆಲಸ ಯಾವುದೇ ಇರಲಿ. ಮಾಡುವುದನ್ನು ಶ್ರದ್ಧೆ, ಪ್ರೀತಿ ಹಾಗೂ ಪ್ರಾಮಾಣಿಕವಾಗಿ ಮಾಡಿದರೆ, ಅದು ಸರಿಯಾದ ಫಲ ನೀಡುತ್ತದೆ. ಇದನ್ನೇ ಜನ ಕೈಗುಣ ಎನ್ನುತ್ತಾರೆ. ಕಾಯಕ ಶ್ರದ್ಧೆ ಇರುವುದು ಹಾಗೂ ಇರಬೇಕಾಗಿರುವುದು ಕೈನಲ್ಲಿ ಅಲ್ಲ. ಮನಸ್ಸಿನಲ್ಲಿ, ಅಲ್ಲವೇ ?,” ಎಂಬ ಅವರ ಉತ್ತರ ಬುದ್ಧನ ಚಿಂತನೆಯನ್ನು ನೆನಪಿಸಿತ್ತು.  ಹಾಂ, ಅವರು ಬುದ್ಧನ ಅಭಿಮಾನಿ. ಅವರ ಬಗ್ಗೆ ಬಹಳ ಓದಿಕೊಂಡಿದ್ದಾರೆ. ಈಗ ಅವರು ಸಹಕಾರಿ ತತ್ತ್ವದಲ್ಲಿ ಸ್ಥಾಪಿಸಿ, ಮುನ್ನಡೆಸುತ್ತಿರುವ ಆಸ್ಪತ್ರೆ ಹೆಸರೇ ಗೌತಮ ಆಸ್ಪತ್ರೆ.  “ಈ ದೇವರು, ದಿಂಡ್ರು, ಪೂಜೆ, ಪುನಸ್ಕಾರ- ಇದ್ಯಾವುದರ ಬಗ್ಗೆಯೂ ವೈಯಕ್ತಿಕವಾಗಿ ನನಗೆ ನಂಬಿಕೆ ಇಲ್ಲ. ಆದರೆ, ಈ ಎಲ್ಲವೂ ಮನುಷ್ಯನಿಗೆ ಒಂದು ಭರವಸೆಯನ್ನೋ, ವಿಶ್ವಾಸವನ್ನೋ ನೀಡುತ್ತದೆ ಎಂದಾದರೆ, ನಾನೇಕೆ ಅದನ್ನು ವಿರೋಧಿಸಲಿ. ನಂಬದಿರುವುದನ್ನೆಲ್ಲಾ ವಿರೋಧಿಸಬೇಕು ಎಂದೇನಿಲ್ಲ,” ಎಂಬುದು ರಂಗನಾಥಯ್ಯ ನಮ್ಮಂಥವರಿಗೆ ಹಂಚುತ್ತಲೇ ಇರುವ ಸಾಮಾನ್ಯ ವಿವೇಕ.

ತಮ್ಮ ಪ್ರೊಫೆಸರ್ ಅವರಿಗೆ ಸಂಬಂಧಿಸಿದ ಅನುಭವವೊಂದನ್ನುಆಗಾಗ ಡಾಕ್ಟರ್ ಹೇಳುತ್ತಿರುತ್ತಾರೆ. ಇದು

40 ವರ್ಷಗಳ ಹಿಂದಿನ ಘಟನೆ.  ಡಾ. ರಂಗನಾಥಯ್ಯ ಅವರ ಪ್ರೊಫೆಸರ್ ಕೂಡ  ಮೈಸೂರಿನ ವೈದ್ಯರು. ಅವರ ಬಳಿ

ಪ್ರಭಾವಿ ವ್ಯಕ್ತಿಯೊಬ್ಬರು ತಮ್ಮ ಮಗನನ್ನು ಕರೆದುಕೊಂಡು ಬಂದರು. ಅವರ ಕೈಯಲ್ಲೊಂದು ಮೆಡಿಕಲ್ ರಿಪೋರ್ಟ್ ಇತ್ತು. ಬಂದವರ ಮುಖದಲ್ಲಿ ವಿಪರೀತ ಆತಂಕವಿತ್ತು. ವೈದ್ಯರು ಆ ರಿಪೋರ್ಟ್ ಎಲ್ಲವನ್ನೂ ನೋಡಿ, ಮುಖದಲ್ಲಿ ಒತ್ತಾಯದ ನಗುವೇರಿಸಿಕೊಂಡೇ, ನಥಿಂಗ್ ಟು ವರಿ ಎಂದರು. “ಹೊರಗಡೆ ಇರುವ ನರ್ಸ್ ಕರೆಯಪ್ಪ…,’ ಎಂದು ಪ್ರಭಾವಿ ವ್ಯಕ್ತಿಯ ಮಗನನ್ನು ಕೊಠಡಿಯಿಂದ ಹೊರಗೆ ಕಳುಹಿಸಿ, ಬಳಿಕ ಪ್ರಭಾವಿ ಮನುಷ್ಯನಿಗೆ, “ನಿಮ್ಮ ಮಗನನ್ನು ಇರುವಷ್ಟು ಕಾಲ ಚೆನ್ನಾಗಿ ನೋಡಿಕೊಳ್ಳಿ. ಹೆಚ್ಚೆಂದರೆ ಎರಡು-ಮೂರು ವರ್ಷ ಇರುತ್ತಾರೆ. ಈ ರಿಪೋರ್ಟ್ ನೋಡಿದರೆ, ಆತನ ಕಾಯಿಲೆ ವಾಸಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ…,” ಎಂದು ಬೇಸರದಲ್ಲಿ ಹೇಳಿದರು. ಪ್ರಭಾವಿ ಮನುಷ್ಯ ಬೇಸರದಲ್ಲಿ ಊರನ್ನೇ ಬಿಟ್ಟು ಹೋದರು !

ಇದೆಲ್ಲವೂ ಆಗಿ ಹತ್ತು ವರುಷಗಳಾದ ಮೇಲೆ, ಯಾವುದೋ ಸಮಾರಂಭದಲ್ಲಿ ಆ ಪ್ರಭಾವಿ ಮನುಷ್ಯ ರಂಗನಾಥಯ್ಯ ಅವರ ಪ್ರೊಫೆಸರ್ಗೆ ಸಿಗುತ್ತಾರೆ. ಜತೆಯಲ್ಲಿ ಅವರ ಮಗನೂ…!

ಈ ಘಟನೆಯನ್ನು ಉಲ್ಲೇಖಿಸಿ ಡಾ. ರಂಗನಾಥಯ್ಯ ಹೇಳುವುದು,

“ಈ ವೈದ್ಯ ವಿಜ್ಞಾನ, ಸಂಶೋಧನೆಯನ್ನು ಮೀರಿ ಯಾವುದೋ ಒಂದು ಶಕ್ತಿ ಕೆಲಸ ಮಾಡುತ್ತಿರುತ್ತದೆ. ನಾನು ಪ್ರಕೃತಿಯನ್ನು ನಂಬುವೆ. ಜನ ಅದನ್ನೇ ದೇವರು ಎನ್ನಬಹುದು. ಹಾಗಾಗಿ, ವೈದ್ಯರು ಕೂಡ ನಿರ್ಣಾಯಕ ಕ್ಷಣದಲ್ಲಿ ದೇವರ ಮೇಲೆ ಭಾರ ಹಾಕುತ್ತಾರೆ. ನಾನು ನೇಚರ್ ವಿಲ್ ಟೇಕ್ ಕೇರ್ !”

ಡಾ. ರಂಗನಾಥಯ್ಯ ಅವರು ನನ್ನ ಪಾಲಿಗೆ ಬರೀ ವೈದ್ಯರಲ್ಲ. ನಮ್ಮ ಕುಟುಂಬದ ಹಿರಿಯ ಸದಸ್ಯರು. ನನ್ನ ಚಿಕ್ಕಪ್ಪನಂತೆ… ! ನೀವು ಸಂತರು ಸಾರ್ ಎಂದರೆ, “ನಾನು ಮನುಷ್ಯ. ಸಂತನಾಗುವುದರಲ್ಲಿ ಹೆಚ್ಚಗಾರಿಕೆ ಇಲ್ಲ. ಮನುಷ್ಯತ್ವ, ಮಾನವೀಯತೆ ಇರುವ ಮನುಷ್ಯನಾಗುವುದರಲ್ಲಿ ಹೆಚ್ಚುಗಾರಿಕೆ ಮತ್ತು ಸಾರ್ಥಕತೆ ಇದೆ,” ಎನ್ನುತ್ತಾರೆ ಡಾಕ್ಟರ್. ಇದು ಒಂದು ರೀತಿಯ ಸಂತತನ !vtu

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಳಿಕ ಕೆಲ ವರುಷಗಳ ಕಾಲ ಯುದ್ಧ ಸಂತ್ರಸ್ತ ಅರಬ್ ದೇಶಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಬಳಿಕ ಮೈಸೂರಿನ ಕೆಆರ್ ಆಸ್ಪತ್ರೆ, ಸ್ಯಾನಿಟೋರಿಯಂ ಆಸ್ಪತ್ರೆಯ‌ ವೈದ್ಯಕೀಯ ಅಧೀಕ್ಷಕರಾಗಿ‌ ಸೇವೆ ಸಲ್ಲಿಸಿ ನಿವೃತ್ತರಾದರು. ಈಗ ಮೈಸೂರಿನ‌ ಶ್ರೀರಾಂಪುರದಲ್ಲಿ ಸಹಕಾರಿ ತತ್ತ್ವದಡಿ ಗೌತಮ ಆಸ್ಪತ್ರೆ ಮುನ್ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದವರು, ಚಾಮರಾಜನಗರದ ಶ್ರೀಸಾಮಾನ್ಯರು ಮಾತ್ರವಲ್ಲ, ಮೈಸೂರಿನ ಬಹುತೇಕ ಪ್ರಸಿದ್ದ ರಾಜಕಾರಣಿಗಳ ನೆಚ್ಚಿನ ವೈದ್ಯರು ನಮ್ಮ ಡಾ. ರಂಗನಾಥಯ್ಯ.

ವೈದ್ಯ ದಿನದ ಶುಭಾಶಯಗಳು ಸರ್.

ಕೃಪೆ: ಚೀ.ಜ.ರಾಜೀವ್, ಮೈಸೂರು

Key words: MYSORE, saintly, doctor, Dr. Ranganathaiah

The post MYSORE: ಡಾ.ರಂಗನಾಥಯ್ಯ ಎಂಬ “ಸಂತ” ವೈದ್ಯ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಹಭಾಷಾ ಹಿರಿಯ ನಟಿ ಬಿ.ಸರೋಜಾ ದೇವಿ ಇನ್ನಿಲ್ಲ

ಬೆಂಗಳೂರು,ಜುಲೈ,14,2025 (www.justkannada.in): ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿರುವ ಬಹುಭಾಷಾ ಹಿರಿಯ ನಟಿ...

ಜು.19 ರಂದು ಮೈಸೂರಿನಲ್ಲಿ ಬೃಹತ್ ಸಮಾರಂಭ: ಸಕಲ ಸಿದ್ದತೆಗೆ ಸಚಿವ ಹೆಚ್.ಸಿ.ಮಹದೇವಪ್ಪ ಸೂಚನೆ

ಮೈಸೂರು,ಜುಲೈ,12,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜುಲೈ19 ರಂದು ಮಹಾರಾಜ...

ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸೈನ್ಯ ,ಅಂತರಿಕ್ಷದಲ್ಲೂ ಕೆಲಸ ಪ್ರಗತಿಯ ಪ್ರತೀಕ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು ಜುಲೈ,13,2025 (www.justkannada.in):  ಶೇ100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು,...

ಸರ್ಕಾರದಲ್ಲಿ ಮೋಡ ಕವಿದ ವಾತಾವರಣ: ಯಾವಾಗ ಗುಡುಗು ಸಿಡಿಲು ಬರುತ್ತೋ ಗೊತ್ತಿಲ್ಲ-ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,12,2025 (www.justkannada.in): ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ ....