11
July, 2025

A News 365Times Venture

11
Friday
July, 2025

A News 365Times Venture

ಆರ್ಥಿಕ ಸಮಾನತೆ ಬಂದರೆ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ: ಅದಕ್ಕಾಗಿಯೇ ಗ್ಯಾರೆಂಟಿ ಜಾರಿ- ಸಿಎಂ ಸಿದ್ದರಾಮಯ್ಯ

Date:

 

ಮೈಸೂರು ಮೇ, 12,2025 (www.justkannada.in): ಯಾರು ಕೂಡ ಹಸಿವಿನಿಂದ ಇರಬಾರದು ಎಂದು ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಆರ್ಥಿಕ ಸಮಾನತೆಯನ್ನು ತಂದರೆ ಮಾತ್ರ ಅಭಿವೃದ್ದಿಯನ್ನು ಕಾಣಲು ಸಾಧ್ಯ ಎಂದು ಆರ್ಥಿಕ ಸಮಾನತೆಯನ್ನು ತರಲು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ಹೆಚ್. ಡಿ ಕೋಟೆಯ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ, ಪುತ್ಥಳಿ ಅನಾವರಣ, 2569 ನೇ ಬುದ್ಧಪೂರ್ಣಿಮೆ ಭಗವಾನ್ ಬುದ್ಧ ಜಯಂತಿ ಮಹೋತ್ಸವ  ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು. ಇಂದು ಗೌತಮ ಬುದ್ಧ ಅವರ ಜನ್ಮದಿನ , ಸರ್ಕಾರದ ವತಿಯಿಂದ ಬುದ್ಧ ಜಯಂತಿಯನ್ನು ಆಚರಣೆ ಮಾಡುತ್ತಾ ಇದ್ದೇವೆ. ಬುದ್ಧ ಸುಮಾರು 2500 ವರ್ಷಗಳ ಹಿಂದೆ ಭಾರತದಲ್ಲಿ ಜನಿಸಿ ಜೀವಿಸಿದ್ದರು. ಬುದ್ಧ ಅವರು ಆಸೆಯೇ ದುಃಖಕ್ಕೆ ಕಾರಣ ಎಂದು ತಿಳಿಸಿದರು ಎಂದು ಮಾಹಿತಿ ನೀಡಿದರು.

ನಾವು ಇಂದು ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಆಚರಣೆ ಮಾಡುತ್ತಾ ಇದ್ದೇವೆ. ಬಸವಣ್ಣ ಅವರು ದಯೆಯೇ ಧರ್ಮದ ಮೂಲವಯ್ಯ ಎಂದು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಹಲವು ಜಾತಿ ಧರ್ಮಗಳ ಜನರು ವಾಸಿಸುತ್ತಿದ್ದೇವೆ. ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಬುದ್ಧ ಬಸವ ಅಂಬೇಡ್ಕರ್ ಅವರನ್ನು ಮಾನವತಾವಾದಿಗಳು ಎಂದು ಕರೆಯುತ್ತೇವೆ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಎಂದು ತಿಳಿಸಿದರು.

ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ನ್ಯಾ. ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಿ ಸಮೀಕ್ಷೆ ಮಾಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಜನರು ಅಭಿವೃದ್ದಿ ಹೊಂದಲು ಆರ್ಥಿಕವಾಗಿ ಸಭಲರಾಗಲು ಶಿಕ್ಷಣ ಅತಿ ಮುಖ್ಯ. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು. ಆಗ ನಾವು ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಅವರಿಗೆ ಗೌರವ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು.

ನಾವು ಗ್ಯಾರೆಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ಕಳೆದ ವರ್ಷ 52 ಸಾವಿರ ಕೋಟಿ ಹಾಗೂ 1 ಲಕ್ಷದ 34 ಸಾವಿರ ಕೋಟಿಯನ್ನು ಅಭಿವೃದ್ದಿ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹಸಿವು ಮುಕ್ತ ಮಾಡಲು ಅನ್ನ ಭಾಗ್ಯ ಯೋಜನೆ, ರಾಜ್ಯದ 1.2 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2000, ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಯುವ ನಿಧಿ ಯೋಜನೆಯಡಿ ಪದವಿ ಪಡೆದ ನಿರುದ್ಯೋಗಿಗಳಿಗೆ 3000 ಹಾಗೂ ಡಿಪ್ಲಮೋ ಪಡೆದ ನಿರುದ್ಯೋಗಿಗಳಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಹುತ್ವದಿಂದ ಕೂಡಿರುವ ದೇಶದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ- ಸಚಿವ ಡಾ . ಹೆಚ್.ಸಿ ಮಹದೇವಪ್ಪ

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ . ಹೆಚ್.ಸಿ ಮಹದೇವಪ್ಪ ಅವರು ಮಾತನಾಡಿ ಭಾರತ ದೇಶ ವೈವಿಧ್ಯಮಯವಾದ ದೇಶ. ಬಹುತ್ವದಿಂದ ಕೂಡಿರುವ ದೇಶದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ದೇಶಕ್ಕೆ ಅಪಾಯ ಬಂದರೆ ನಾವೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ಡಾ. ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ಶ್ರೇಷ್ಟವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿ ನನ್ನನ್ನು ಟೀಕೆ ಮಾಡಿ ಎಂದು ಜನರಿಗೆ ತಿಳಿಸಿದ್ದಾರೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದಿಸಿ ಅರ್ಥಿಸಲಾಗುತ್ತಿದೆ. ಬೀದರ್ ನಿಂದ ಚಾಮರಾಜನಗರ ವರೆಗೆ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ರಕ್ಷಣೆಯ ಶಪಥ ಮಾಡಿದೆವು ಎಂದು ತಿಳಿಸಿದರು.

ಇಂದು ಬುದ್ಧ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿದ್ದೇವೆ. ಬುದ್ಧ ಎಂದರೆ ಶಾಂತಿ ಸಹನೆ ಪ್ರೀತಿ ಸಹಬಾಳ್ವೆ. ಆಲ್ಬರ್ಟ್ ಐನ್ ಸ್ಟೀನ್ ಅವರು ಬೌದ್ಧ ಧರ್ಮವನ್ನು ಅನುಸರಣೆ ಮಾಡಿದರು ಎಂದು ಮಾಹಿತಿ ನೀಡಿದರು.

ಗ್ಯಾರೆಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸಿವೆ- ಸಚಿವ ಕೆ.ವೆಂಕಟೇಶ್

ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ.ವೆಂಕಟೇಶ್ ಅವರು ಮಾತನಾಡಿ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಜಿಲ್ಲೆಗಳ ಅಭಿವದ್ಧಿಗೆ 3400 ಕೋಟಿಗಳನ್ನು ನೀಡಲಾಗಿದೆ. ಅನಿಲ್ ಕುಮಾರ್ ಅವರು ಉತ್ತಮವಾಗಿ ತಾಲ್ಲೂಕಿನ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದೆ ರೀತಿ ಅಭಿವೃದ್ದಿ ಮಾಡಲು ಮುಂದೆಯೂ ತಮ್ಮ ಅವಕಾಶ ಅತಿ ಮುಖ್ಯ. ಗ್ಯಾರೆಂಟಿ ಯೋಜನೆಗಳು ಜನರ ಜೀವನ ಮಟ್ಟವನ್ನು ಸುಧಾರಿಸಿವೆ. ಗ್ಯಾರೆಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿರುವ ಹಾದಿಯಲ್ಲಿ ನಾವು ನಡೆಯಬೇಕು. ನಾವು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಬೆಳೆಯಬೇಕು. ನಾವು ಹಿಂದೆ ಕಳೆದುಕೊಂಡ ಎಲ್ಲಾ ಹಕ್ಕುಗಳನ್ನು ನಾವು ಪಡೆಯಲು  ಶಿಕ್ಷಣವನ್ನು ಪಡೆಯಬೇಕು. ಹಾಂಡ್ಪೋಸ್ಟ್ ನಿಂದ ಬಾವಲಿವರೆಗೆ ರಸ್ತೆ ಅಗಲೀಕರಣಕ್ಕೆ ಕಳೆದ ಬಾರಿ ಅನುದಾನ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ರಸ್ತೆ ಆಗಿಲ್ಲ. ಈ ಬಾರಿ ಆಗುತ್ತದೆ ತಾಲ್ಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹೆಚ್. ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು ಮಾತನಾಡಿ ನಾನು ಇಂದು ಇಲ್ಲಿ ನಿಂತು ಭಾಷಣ ಮಾಡಲು ಕಾರಣ ಡಾ. ಬಿ. ಆರ್ ಅಂಬೇಡ್ಕರ್. ನಮ್ಮ ತಾಲ್ಲೂಕಿಗೆ ಅತಿ ಹೆಚ್ಚು ಅನುದಾನ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ನಮ್ಮ ತಾಲ್ಲೂಕಿಗೆ ಡಬಲ್ ರಸ್ತೆಗೆ ಮನವಿ ಮಾಡಲಾಗಿದೆ. ಇದಕ್ಕೆ 300 ಕೋಟಿ ಅನುದಾನವನ್ನು ನೀಡಿದ್ದಾರೆ. ನಮ್ಮ ತಾಲ್ಲೂಕಿಗೆ ಹೆಚ್ಚು ಗಾರ್ಮೆಂಟ್ಸ್ ಗಳು ಹಾಗೂ ಕಾರ್ಖಾನೆಗಳು ಬೇಕು. ಇದರಿಂದ ಇಲ್ಲಿನ ಜನರಿಗೆ ಉದ್ಯೋಗಗಳು ದೊರೆಯುತ್ತವೆ. ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಎಸ್ ಟಿ ಎಸ್ ಸಿ ಜನಸಂಖ್ಯೆ ಇದ್ದು ಇಲ್ಲಿಗೆ ಎಸ್ ಸಿಪಿ ಹಾಗೂ ಟಿ ಎಸ್ ಪಿ. ಅನುದಾನ ನೀಡಬೇಕು. ತಾಲ್ಲೂಕಿಗೆ 5 ಎಕರೆ ಜಾಗ ನೀಡಿ ಅಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.

ಚಾಮರಾಜನಗರ ಲೋಕಸಭಾ ಸದಸ್ಯಸುನೀಲ್ ಬೋಸ್ ಅವರು ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್ ಅಂಬೇಡ್ಕರ್ ಅವರು ಹಲವಾರು ಡಿಗ್ರಿಗಳನ್ನು ಪಡೆದರು. ಇವರು ತಮ್ಮ ಜ್ಞಾನಕ್ಕೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ಅವರು ಐಷಾರಾಮಿ ಜೀವನಕ್ಕೆ ಆಸೆ ಪಡೆದೆ ನೊಂದವರ ಬಡವರ ಪರ ಹೋರಾಟ ಮಾಡಿದರು. ಅವರು ಭಾರತಕ್ಕೆ ಶ್ರೇಷ್ಟವಾದ ಸಂವಿಧಾನವನ್ನು ನೀಡಿದರು. ಮಹಿಳೆಯರಿಗೆ ಸಮಾನತೆಯನ್ನು ನೀಡಬೇಕು ಎಂದು ಹೋರಾಟ ಮಾಡಿದರು. ಕಾರ್ಮಿಕರ ಪರ ಹೋರಾಟ ಮಾಡಿ ದಿನಕ್ಕೆ 8 ಗಂಟೆಗಳು ಮಾತ್ರ ಕೆಲಸ ಮಾಡಬೇಕು ಅಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಪ್ರತಿಪಾದಿಸಿದರು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕಡಿ ರವಿಶಂಕರ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ , ವಿಧಾನ ಪರಿಷತ್ ಸದಸ್ಯ, ಡಿ ತಿಮ್ಮಯ್ಯ, ಗ್ಯಾರೆಂಟಿ ಯೋಜನೆಗಳ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್,   ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್ ಯಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Key words: Development, economic equality, guarantee, CM Siddaramaiah

The post ಆರ್ಥಿಕ ಸಮಾನತೆ ಬಂದರೆ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ: ಅದಕ್ಕಾಗಿಯೇ ಗ್ಯಾರೆಂಟಿ ಜಾರಿ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಈ ವರ್ಷ ನರ್ಸಿಂಗ್ ಕೋರ್ಸ್‌ ಶುಲ್ಕ ಹೆಚ್ಚಳವಿಲ್ಲ: ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು, ಜುಲೈ 11,2025 (www.justkannada.in): ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪೋಷಕರ ಮೇಲಿನ...

KSOU: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ “ಉಚಿತ ಶಿಕ್ಷಣ” ಗ್ಯಾರಂಟಿ.

ಮೈಸೂರು, ಜು.೧೦,೨೦೨೫:  ಇನ್ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತ ಸಮುದಾಯದ...

ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು,ಜುಲೈ,10,2025 (www.justkannada.in):  ಮುಡಾದಲ್ಲಿ ಅಕ್ರಮ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ...

ಆಸ್ತಿ ಕಬಳಿಕೆಗೆ ಸಂಚು: ಐವರ ವಿರುದ್ದ ಪ್ರಕರಣ ದಾಖಲು

ಮೈಸೂರು,ಜುಲೈ,10,2025 (www.justkannada.in): ಅಸಲಿ ವ್ಯಕ್ತಿ ಇದ್ದರೂ ಸಹ  ಆಸ್ತಿ ಕಬಳಿಸಲು ಸಂಚು...