ಬೆಂಗಳೂರು,ಜುಲೈ,3,2025 (www.justkannada.in): ಸಮಾವೇಶದ ವೇಳೆ ಹೆಚ್ಚುವರಿ ಎಸ್ ಪಿ ನಾರಾಯಣ ಭರಮನಿ ಮೇಲೆ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಮನನೊಂದು ಎಸ್ ಪಿ ನಾರಾಯಣ ಭರಮನಿ ಅವರು ರಾಜೀನಾಮೆಗೆ ಮುಂದಾಗಿದ್ದು ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರದಿಂದ ಪೊಲೀಸ್ ಇಲಾಖೆಯ ಮನೋಬಲಕ್ಕೆ ಧಕ್ಕೆ! ಸಿಎಂ ಸಿದ್ದರಾಮಯ್ಯನವರೇ, ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಅವರ ಮೇಲೆ ನೀವು ಬಹಿರಂಗ ವೇದಿಕೆಯ ಮೇಲೆ ಕೈ ಎತ್ತಿದ್ದ ಘಟನೆಗೆ ಕಾರಣ ನಿಮ್ಮ ಅಧಿಕಾರದ ದರ್ಪವೋ, ಮದವೋ, ದುರಹಂಕಾರವೋ, ವಿಫಲ ಸರ್ಕಾರ ಮುನ್ನಡೆಸುತ್ತಿರುವ ಹತಾಶೆಯೋ, ಅಥವಾ ಇಷ್ಟರಲ್ಲೇ ಅಧಿಕಾರ ಬಿಟ್ಟುಕೊಡಬೇಕು ಎನ್ನುವ ಕಾತಾಳವೋ, ಅದನ್ನ ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತೇನೆ
ಆದರೆ ನಿಮ್ಮ ನಡೆಯಿಂದ ಒಬ್ಬ ಕರ್ತವ್ಯನಿಷ್ಠ ಅಧಿಕಾರಿಯ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಇಡೀ ಪೊಲೀಸ್ ಇಲಾಖೆಯ ಮನೋಬಲಕ್ಕೆ ಚ್ಯುತಿ ತಂದಿದೆ. ಅಧಿಕಾರಶಾಹಿಯ ನೈತಿಕತೆಗೆ ಪೆಟ್ಟು ಕೊಟ್ಟಿದೆ, ನೌಕರಶಾಹಿಯ ಆತ್ಮಸ್ಥೈರ್ಯ ಕುಸಿದಿದೆ ಎಂದು ಕಿಡಿಕಾರಿದ್ದಾರೆ.
ನಿಮ್ಮ ಯಡವಟ್ಟುಗಳಿಂದ ಪ್ರತಿ ದಿನ ಒಂದಲ್ಲ ಒಂದು ಒಂದು ರೀತಿ ತಮ್ಮ ಸರ್ಕಾರಕ್ಕೆ, ವೈಯಕ್ತಿಕವಾಗಿ ತಮಗೆ ಕೆಟ್ಟ ಹೆಸರು ಬರುತ್ತಲೇ ಇದೆ. ಇನ್ನಾದರೂ ಈ ಭಂಡ ಬಾಳು ಬಿಡಿ. ಅಧಿಕಾರದ ವ್ಯಾಮೋಹ ಬಿಟ್ಟು ರಾಜನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ. ನಿವೃತ್ತಿಯ ಅಂಚಿನಲ್ಲಿ ಖಳನಾಯಕನಾಗಿ ಇತಿಹಾಸದ ಪುಟ ಸೇರುವುದಕ್ಕಿಂತ, ಗೌರವದಿಂದ ಕುರ್ಚಿ ತ್ಯಾಗ ಮಾಡುವುದು ನಿಮಗೂ ಒಳಿತು, ರಾಜ್ಯಕ್ಕೂ ಒಳಿತು ಎಂದು ಆರ್.ಅಶೋಕ್ ತಿಳಿಸಿದ್ದಾರೆ.
Key words: ASP, CM Siddaramaiah, arrogance, R. Ashok
The post ಎಎಸ್ಪಿ ಮೇಲೆ ಕೈ ಎತ್ತಿದ್ದ ಘಟನೆಗೆ ಕಾರಣ ನಿಮ್ಮ ಅಧಿಕಾರದ ದರ್ಪವೋ, ದುರಹಂಕಾರವೋ –ಸಿಎಂ ವಿರುದ್ದಆರ್.ಅಶೋಕ್ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.