ಬೆಂಗಳೂರು,ಜೂನ್,27,2025 (www.justkannada.in): ಮಲೆ ಮಹದೇಶ್ವರ ಬೆಟ್ಟದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಶೀಘ್ರ ಸತ್ಯಾಂಶ ಬಯಲಿಗೆಳೆದು ದುಷ್ಕರ್ಮಿಗಳನ್ನ ಬಂಧಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾರುವ ಬಿವೈ ವಿಜಯೇಂದ್ರ, ಮಲೈ ಮಹದೇಶ್ವರರ ವಾಹನವೆಂದು ಹುಲಿಯನ್ನು ಪೂಜಿಸುವ ಬೆಟ್ಟದ ಸನ್ನಿಧಿಯಲ್ಲೇ ತಾಯಿ ಹುಲಿ ಸೇರಿದಂತೆ ಐದು ಹುಲಿಗಳು ಸಾವನ್ನಪ್ಪಿರುವ ಸುದ್ದಿ ಅತ್ಯಂತ ಆಘಾತಕಾರಿ, ಅಮಾನವೀಯ ಹಾಗೂ ಭಕ್ತರ ಮನಸ್ಸಿಗೆ ಘಾಸಿ ತರಿಸಿರುವ ಘಟನೆಯಾಗಿದೆ.
ಹುಲಿಗಳ ಸಾವಿಗೆ ವಿಷ ಪ್ರಾಶನವಾಗಿದ್ದರೆ ಅದು ಅತ್ಯಂತ ಹೇಯ ಹಾಗೂ ಖಂಡನೀಯ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ರಚಿಸಿರುವ ತನಿಖಾ ತಂಡ ಶೀಘ್ರ ಸತ್ಯಾಂಶವನ್ನು ಬಯಲಿಗೆಳೆದು ದುಷ್ಕರ್ಮಿಗಳನ್ನು ಬಂಧಿಸಲಿ ಎಂದು ಒತ್ತಾಯಿಸುವೆ. ‘ಮನು ಕುಲದ ಅಸ್ತಿತ್ವ ವನ್ಯಜೀವಿ ಪ್ರಾಣಿಗಳ ಸಂರಕ್ಷಣೆಯಲ್ಲಿದೆ’ ಎಂಬ ಅರಿವು ಇನ್ನಷ್ಟು ವ್ಯಾಪಿಸಬೇಕಿದೆ, ಕಾಡಂಚಿನಲ್ಲಿ ವಾಸಿಸುವ ಜನರಲ್ಲಿ ಅರಣ್ಯ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಕುರಿತು ಅರಿವಿನ ಜಾಗೃತಿಯ ಕಾರ್ಯಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ವನ್ಯಜೀವಿಯೂ ಮನುಷ್ಯ ಸಮಾಜದ ಸ್ನೇಹಜೀವಿ ಹಾಗೂ ದೇಶದ ಸಂಪತ್ತು ಎಂಬ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಾಂದೋಲನವನ್ನು ಸರ್ಕಾರ ಆರಂಭಿಸಲಿ, ಅದರಲ್ಲೂ ಹುಲಿ ಸಂತತಿ ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶದ ಹೆಮ್ಮೆಯ ಹೆಗ್ಗುರುತಾಗಿದೆ. ಹುಲಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಈ ನಿಟ್ಟಿನಲ್ಲಿ ಸರ್ಕಾರ ಹುಲಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದ ಯೋಜನೆಯನ್ನು ಬಳಸಿಕೊಂಡು ವಿಶೇಷ ಆದ್ಯತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಲ್ಲದೇ ಹುಲಿಗಳ ಸಂರಕ್ಷಣೆ ಹಾಗೂ ಸುರಕ್ಷತೆಯತ್ತ ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
Key words: Five Tigers, Death, BJP, State president, BY Vijayendra
The post ಐದು ಹುಲಿಗಳ ಸಾವು: ಶೀಘ್ರ ಸತ್ಯಾಂಶ ಬಯಲಿಗೆಳೆದು ದುಷ್ಕರ್ಮಿಗಳನ್ನ ಬಂಧಿಸಲಿ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.