8
July, 2025

A News 365Times Venture

8
Tuesday
July, 2025

A News 365Times Venture

ಕಾಲ್ತುಳಿತ – ಪ್ರತಿಭಟನೆ : ಬಿಜೆಪಿ ಆಡಳಿತಾವಧಿಯ ಹೆಣಗಳ ಲೆಕ್ಕ ತಿಳಿಸಿದ ಸಿಎಂ ಸಿದ್ದರಾಮಯ್ಯ.

Date:

ಬೆಂಗಳೂರು, ಜೂ.೧೭, ೨೦೨೫: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೇಳುವ ಮೊದಲು ಇಂತಹದ್ದೇ ಅವಘಡಗಳು ನಡೆದಿದ್ದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕರ ಪಟ್ಟಿ ಬಿಡುಗಡೆಗೆ ಮಾಡಿ ಎಂದು ವಿಪಕ್ಷಗಳಿಗೆ ಹೇಳಿದ ಸಿಎಂ ಸಿದ್ದರಾಮಯ್ಯ.

ಕಾಲ್ತುಳಿತ ಪ್ರಕರಣದ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಈ ಘಟನೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು ಅದು ಹೀಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿರುವುದು ಒಂದು ಅಪಘಾತ. ಒಂದು ಜವಾಬ್ದಾರಿಯುತ ಸರ್ಕಾರವಾಗಿ ಆ ಘಟನೆಯ ಹೊಣೆಯನ್ನು ನಾವು ಹೊತ್ತಿದ್ದೇವೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ, ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ವರ್ಗಾವಣೆ ಮಾಡಿದ್ದೇವೆ. ನನ್ನ ರಾಜಕೀಯ ಕಾರ್ಯದರ್ಶಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದೇನೆ. ಈ ಪ್ರಕರಣದ ಸಮಗ್ರ ತನಿಖೆಗೆ ನಿವೃತ್ತ ನ್ಯಾಯಾಧೀಶರಾದ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನೂ ರಚಿಸಿದ್ದೇವೆ.

ಇಷ್ಟೆಲ್ಲ ಕ್ರಮಕೈಗೊಂಡ ನಂತರವೂ ರಾಜ್ಯದ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಹೊರತು ಜನರ ಬಗೆಗಿನ ಕಾಳಜಿಯಿಂದ ಅಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೆಣಗಳ ಮೇಲಿನ ರಾಜಕೀಯ ಬಿಜೆಪಿ ಪಾಲಿಗೆ ಹೊಸದೇನಲ್ಲ. ಅಪಘಾತ, ಹತ್ಯೆ, ದೌರ್ಜನ್ಯಗಳು ನಡೆದ ತಕ್ಷಣ ಸತ್ತ ಜೀವಗಳನ್ನು ಹುಡುಕಿಕೊಂಡು ಹೋಗುವ ರಣಹದ್ದುಗಳಂತೆ ಎರಗಿ ಬೀಳುವುದು ಬಿಜೆಪಿಯ ರಕ್ತದಲ್ಲಿಯೇ ಇದೆ. ತಮ್ಮ ಊಟದೆಲೆಯ ಮೇಲೆ ಆನೆ ಸತ್ತುಬಿದ್ದಿದ್ದರೂ ಎದುರಿಗಿದ್ದವರ ಎಲೆ ಮೇಲೆ ಸತ್ತು ಬಿದ್ದ ನೊಣದ ಕಡೆ ಬೊಟ್ಟುಮಾಡುವುದು ಬಿಜೆಪಿಯ ಹಳೆಯ ಚಾಳಿ ಎನ್ನುವುದನ್ನು ರಾಜ್ಯದ ಜನತೆ ಅರ್ಥಮಾಡಿಕೊಂಡಿದ್ದಾರೆ.

ಪ್ರತಿಯೊಂದು ಅಪಘಾತದ ಹಿಂದೆ ಸಾವು-ನೋವಿಗೆ ಈಡಾದವರ ಕುಟುಂಬದ ದು:ಖ ಮತ್ತು ಸಂಕಟ ಇರುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಇದೇ ಕಾರಣಕ್ಕಾಗಿ ನಾವು ಇಂತಹ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸುವುದಿಲ್ಲ. ಹೀಗಿದ್ದರೂ ರಾಜ್ಯದ ಬಿಜೆಪಿ ನಾಯಕರು ಮತ್ತೆ ಮತ್ತೆ ಇಂತಹ ಪ್ರಕರಣಗಳನ್ನು ಕೆದಕಿ ಕೆದಕಿ ಜನರನ್ನು ಪ್ರಚೋದಿಸುತ್ತಿರುವ ಹಿನ್ನೆಲೆಯಲ್ಲಿ ಇವರ ಆತ್ಮವಂಚಕ ನಡವಳಿಕೆಯನ್ನು ಬಯಲು ಮಾಡುವ ಉದ್ದೇಶದಿಂದ ಬಿಜೆಪಿ ಆಡಳಿತದಲ್ಲಿನ ಕೆಲವು ಪ್ರಕರಣಗಳನ್ನು ರಾಜ್ಯದ ಜನತೆಯ ಗಮನಕ್ಕೆ ತರಲು ಇಷ್ಟಪಡುತ್ತೇನೆ.

2002ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡದಲ್ಲಿ ಎಲ್ಲ ಧರ್ಮಗಳಿಗೆ ಸೇರಿದ್ದ ಅಂದಾಜು ಎರಡು ಸಾವಿರ ಅಮಾಯಕರು ಪ್ರಾಣ ಕಳೆದುಕೊಂಡರು. ಆ ಘಟನೆಯ ಹೊಣೆಹೊತ್ತು ರಾಜೀನಾಮೆ ನೀಡುವಂತೆ ಅವರದ್ದೇ ಪಕ್ಷದ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಸೂಚನೆ ನೀಡಿದರೂ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ರಾಜೀನಾಮೆ ನೀಡಿಲ್ಲ ಮಾತ್ರವಲ್ಲ, ಇಲ್ಲಿಯ ವರೆಗೆ ಕನಿಷ್ಠ ವಿಷಾದವನ್ನೂ ಸೂಚಿಸಿಲ್ಲ. ನಮ್ಮ ರಾಜೀನಾಮೆ ಕೇಳುವವರು ಮೊದಲು ಇದಕ್ಕೆ ಉತ್ತರಿಸಿ.

ಕಳೆದ ಏಪ್ರಿಲ್ ತಿಂಗಳಲ್ಲಿ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರಗಾಮಿಗಳು ನಡೆಸಿದ್ದ ಹತ್ಯಾಕಾಂಡದಲ್ಲಿ 26 ಭಾರತೀಯರು ಪ್ರಾಣ ಕಳೆದುಕೊಂಡರು. ಈ ಘಟನೆಯ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕೆಂದು ನಮ್ಮ ಪಕ್ಷ ಒತ್ತಾಯಿಸಿಲ್ಲ. ಈ ಘಟನೆಯ ಚರ್ಚೆಗೆ ಕನಿಷ್ಠ ಸಂಸತ್ ನ ವಿಶೇಷ ಅಧಿವೇಶನ ಕರೆಯಬೇಕೆಂಬ ನಮ್ಮ ಪಕ್ಷದ ಬೇಡಿಕೆಯನ್ನೂ ಪ್ರಧಾನಿಯವರು ಒಪ್ಪಿಕೊಂಡಿಲ್ಲ. ದೇಶಕ್ಕೆಲ್ಲ ಸಿಂಧೂರ ಹಂಚಲು ಹೊರಟಿರುವ ಪ್ರಧಾನಿಯವರಿಗೆ ಇಲ್ಲಿಯ ವರೆಗೆ 26 ಅಮಾಯಕರ ಸಾವಿಗೆ ಕಾರಣರಾದ ನಾಲ್ಕು ಮಂದಿ ದುರುಳರು ಯಾರು ಎನ್ನುವುದನ್ನು ಪತ್ತೆ ಹಚ್ಚಲಾಗಿಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯ ಅಲ್ಲವೇ? ಈ ವೈಫಲ್ಯದ ಹೊಣೆಯನ್ನು ಯಾರು ಹೊರಬೇಕು? ಪಂಡಿತ ಜವಾಹರಲಾಲ್ ನೆಹರೂ ಅವರಾ? ರಾಹುಲ್ ಗಾಂಧಿಯವರಾ? ಇಲ್ಲವೇ ಪ್ರಧಾನಿ ನರೇಂದ್ರ ಮೋದಿಯವರೇ?

ಕಳೆದ ಎರಡು ವರ್ಷಗಳಿಂದ ದೇಶದ ಈಶಾನ್ಯ ಭಾಗದ ಮಣಿಪುರ ಹಿಂಸೆಯ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಹೀಗಿದ್ದರೂ ಆ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗ್ 20 ತಿಂಗಳ ಕಾಲ ಕುರ್ಚಿಗೆ ಅಂಟಿಕೂತಿದ್ದರು. ಕೊನೆಗೂ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ರಾಜೀನಾಮೆ ನೀಡಿದ್ದರು. ಈಗಲೂ ಅಲ್ಲಿ ಹಿಂಸಾಚಾರ ಮುಂದುವರಿದಿದೆ. ಇದರ ಹೊಣೆಯನ್ನು ಕೇಂದ್ರ ಗೃಹಸಚಿವರು ಹೊರುವುದು ಬೇಡವೇ?

ಗುಜರಾತ್ ನ ಮೋರ್ಬಿ ಸೇತುವೆ ಕುಸಿದು ಬಿದ್ದು 140 ಮಂದಿ ಮೃತಪಟ್ಟಿದ್ದರು. ಈ ವರ್ಷದ ಜನವರಿ ತಿಂಗಳಲ್ಲಿ ಮಹಾಕುಂಭಮೇಳದದಲ್ಲಿ  30 ಯಾತ್ರಿಕರು ಪ್ರಾಣ ಕಳೆದುಕೊಂಡರು. ಆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿರುವವರು ಬಿಜೆಪಿಗೆ ಸೇರಿದವರಲ್ಲವೇ? ಇವರು ರಾಜೀನಾಮೆ ನೀಡುವುದು ಬಿಡಿ, ಆ ಘಟನೆಗಳ ಬಗ್ಗೆ ಇಲ್ಲಿಯ ವರೆಗೆ ಸರಿಯಾದ ತನಿಖೆಯನ್ನೇ ಅಲ್ಲಿನ ಸರ್ಕಾರ ನಡೆಸಿಲ್ಲ. ಹೀಗಿರುವಾಗ ನಮ್ಮ ರಾಜೀನಾಮೆ ಕೇಳಲು ರಾಜ್ಯದ ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ?

ನಮ್ಮ ಸರ್ಕಾರ ರಾಜ್ಯದ ಏಳು ಕೋಟಿ ಜನರಿಗೆ ಉತ್ತರದಾಯಿಯಾಗಿದೆ. ಈ ಕಾರಣಕ್ಕಾಗಿ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಭ್ರಷ್ಟರಾಗಿದ್ದಾರೆಂದು ಮೇಲ್ನೋಟಕ್ಕೆ ಅನಿಸಿದವರ ವಿರುದ್ದ ಕ್ರಮಕೈಗೊಳ್ಳಲಾಗಿದೆ. ಉಳಿದಂತೆ ಇದರ ಬಗ್ಗೆ ಆಮೂಲಾಗ್ರವಾದ ಮತ್ತು ನಿಷ್ಪಕ್ಷಪಾತ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಗಿದೆ. ಆಯೋಗ ನೀಡುವ ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ದ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು.

ರಾಜ್ಯ ಬಿಜೆಪಿ ನಾಯಕರು ಇನ್ನಾದರೂ ಪ್ರತಿಭಟನೆಯಂತಹ ಬೀದಿ ಪ್ರಹಸನವನ್ನು ಕೈಬಿಟ್ಟು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಲಿ.

key words: CM Siddaramaiah, BJP leaders, resigned, stampede, Chinnasamy Stadium. Bengaluru.

 

vtu

SUMMARY:

CM Siddaramaiah told the opposition parties to release a list of BJP leaders who had resigned when similar incidents occurred before asking for their resignations in connection with the stampede near Chinnaswamy Stadium.

The post ಕಾಲ್ತುಳಿತ – ಪ್ರತಿಭಟನೆ : ಬಿಜೆಪಿ ಆಡಳಿತಾವಧಿಯ ಹೆಣಗಳ ಲೆಕ್ಕ ತಿಳಿಸಿದ ಸಿಎಂ ಸಿದ್ದರಾಮಯ್ಯ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೆಡಿಎಸ್ ನಿಂದ ಶಾಸಕ ಜಿಟಿ ದೇವೇಗೌಡ ದೂರ: ಮೊದಲ ಬಾರಿಗೆ ಮೌನ ಮುರಿದ ಪುತ್ರ ಜಿ.ಡಿ ಹರೀಶ್ ಗೌಡ

ಮೈಸೂರು,ಜುಲೈ,7,2025 (www.justkannada.in):  ಶಾಸಕ ಜಿಟಿ ದೇವೇಗೌಡ  ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ...

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಅದು ಅಧಿಸೂಚಿತ ಖಾಯಿಲೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು, ಜುಲೈ,7,2025 (www.justkannada.in): ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಹೃದಯಾಘಾತ ಒಂದು...

ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸೇವೆ ವಿಸ್ತಾರ ಮಾಡಲು ಪಕ್ಷ ಚಿಂತನೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಜುಲೈ,7,2025 (www.justkannada.in): ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ AICC ಹಿಂದುಳಿದ ವರ್ಗಗಳ ರಾಷ್ಟ್ರೀಯ...

ಸಿಎಂ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ವಿಶ್ವಾಸವಿಲ್ಲ- ಬಿವೈ ವಿಜಯೇಂದ್ರ

ಶಿವಮೊಗ್ಗ,ಜುಲೈ,7,2025 (www.justkannada.in): ಮುಖ್ಯಮಂತ್ರಿಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್  ಶಾಸಕರಿಗೇ ವಿಶ್ವಾಸ...