ವಿಜಯನಗರ, ಮೇ,16,2025 (www.justkannada.in): ಕೊಪ್ಪಳದ ಬಲ್ಡೋಟ ಉಕ್ಕು ಕಾರ್ಖಾನೆಯ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ವರದಿ ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ವಿಜಯನಗರದ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕೊಪ್ಪಳದ ಬಲ್ಡೋಟ ಉಕ್ಕು ಕಾರ್ಖಾನೆಯ ಕೆಲಸವನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿಗಳ ಆದೇಶ ಹೊರತಾಗಿಯೂ , ಕೆಲಸ ಮುಂದುವರೆದಿರುವ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿಗಳಿಗೆ ಹಣದ ಕೊರತೆಯಿಲ್ಲ
ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಜನರು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯ ಹಣದ ಕೊರತೆಯಿಲ್ಲ. ಕಳೆದ ವರ್ಷದಂತೆ ಈ ಸಾಲಿನ ಬಜೆಟ್ ನಲ್ಲಿಯೂ ಗ್ಯಾರಂಟಿಗಳಿಗೆ ಹಣ ಮೀಸಲಿರಿಸಲಾಗಿದೆ ಎಂದರು.
ಹೊಸಪೇಟೆಯಲ್ಲಿ ಎರಡು ವರ್ಷದ ಸಾಧನಾ ಸಮಾವೇಶ
ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನಾ ಸಮಾವೇಶವನ್ನು ವಿಜಯನಗರದ ಹೊಸಪೇಟೆಯಲ್ಲಿ ಮೇ 20 ರಂದು ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನ ಆಗಮಿಸುವ ಸಾಧ್ಯತೆಯಿದೆ ಎಂದರು.
ಆಡಳಿತಾತ್ಮಕ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ರಚನೆ
ಗ್ರೇಟರ್ ಬೆಂಗಳೂರು ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಟೀಕಿಸುತ್ತಿರುವ ಬಗ್ಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ವಿಭಾಗಗಳನ್ನು ರಚಿಸಬೇಕೆಂದು ಅಂದಿನ ಬಿಜೆಪಿಯ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ರವರು ಯೋಜಿಸಿದ್ದರು. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನ ನೆಲೆಸಿದ್ದು, ಈ ನಗರದ ಆಡಳಿತವನ್ನು ಒಂದು ಮಹಾನಗರ ಪಾಲಿಕೆ ನಿರ್ವಹಿಸುವುದು ಕಷ್ಟಸಾಧ್ಯ. ಆದ್ದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ಮಹಾನಗರಕ್ಕೆ ಮೂರು ಅಥವಾ ಹೆಚ್ಚು ಮಹಾನಗರಪಾಲಿಕೆಗಳನ್ನು ರಚಿಸಬೇಕೆಂಬ ಚಿಂತನೆಯಿಂದ ನನ್ನ ಹಿಂದಿನ ಮುಖ್ಯಮಂತ್ರಿಯ ಅವಧಿಯಲ್ಲಿ ಬಿ.ಎಸ್.ಪಾಟೀಲ್, ಸಿದ್ದಯ್ಯ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಆದ್ದರಿಂದ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ, ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದರು.
ಗಂಗಾವತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ
ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅನರ್ಹತೆಯ ಕುರಿತ ಪ್ರಶ್ನೆಗೆ ಉತ್ತರಿಸಿ, ನ್ಯಾಯಾಲಯ ಅವರಿಗೆ ಏಳು ವರ್ಷಗಳ ಶಿಕ್ಷೆಗೆ ಗುರಿಪಡಿಸಿದ್ದು, ಸಂವಿಧಾನದಂತೆ ಅವರು ಅನರ್ಹರಾಗುತ್ತಾರೆ. ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ, ಪಕ್ಷದ ತೀರ್ಮಾನದಂತೆ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಗಂಗಾವತಿ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತ ಗೆಲ್ಲುತ್ತದೆ. ಪ್ರಜಾಪ್ರಭುತ್ವದಲ್ಲಿ ಟೀಕಿಸುವುದು ಸಹಜ. ಆದರೆ ನಮ್ಮ ಸರ್ಕಾರದ ಸಾಧನೆ, ನಮ್ಮ ಬದ್ಧತೆಯ ಬಗ್ಗೆ ಜನರಿಗೆ ತಿಳಿದೇ ತಿಳಿಯುತ್ತದೆ ಎಂದರು.
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗಬೇಕು
2008-2013ರವರೆಗೆ ವಿರೋಧಪಕ್ಷದ ನಾಯಕನಾಗಿ , ಲೋಕಾಯುಕ್ತ ಸಂತೋಷ್ ಹೆಗಡೆ ಅವರ ಅಕ್ರಮ ಗಣಿಗಾರಿಕೆಯ ವರದಿ ಆಧರಿಸಿ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಅಂದು ಬಿಜೆಪಿ ಸರ್ಕಾರದ ಅದನ್ನು ವಿರೋಧಿಸಿತ್ತು. ಅಂದು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ಹೋರಾಟಕ್ಕೆ ಇಂದು ಫಲ ದೊರೆತಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗಬೇಕು ಹಾಗೂ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ತಿಳಿಸಿದರು.
ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ದಾಂತವನ್ನು ಸದಾ ವಿರೋಧಿಸಿದ್ದೇನೆ
ಸಿದ್ದರಾಮಯ್ಯನವರು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ತನಗೆ ಸಹಾಯ ಮಾಡಿದ್ದರು ಎಂದು ಜನಾರ್ಧನ ರೆಡ್ಡಿಯವರ ಹೇಳಿಕೆಯ ಬಗ್ಗೆ ಪ್ರತಿಕ್ರಯಿಸಿ, ಅವರ ಹೇಳಿಕೆ ಅಪ್ಪಟ ಸುಳ್ಳು. ಅವರು ಬಿಜೆಪಿ ಪಕ್ಷದವರಾಗಿದ್ದು, ಅವರಿಗೆ ಸಹಾಯ ಮಾಡಲು ಹೇಗೆ ಸಾಧ್ಯ. ನಾನು ನನ್ನ ರಾಜಕೀಯ ಜೀವನದುದ್ದಕ್ಕೂ ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ದಾಂತವನ್ನು ವಿರೋಧಿಸುತ್ತಾ ಬಂದಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Koppal, Baldota Steel, Factory, CM Siddaramaiah
The post ಕೊಪ್ಪಳ ಬಲ್ಡೋಟ ಉಕ್ಕು ಕಾರ್ಖಾನೆ : ಜಿಲ್ಲಾಧಿಕಾರಿಗಳ ವರದಿ ಪರಿಶೀಲಿಸಿ ಸೂಕ್ತ ತೀರ್ಮಾನ-ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.