ಮೈಸೂರು, ಮಾರ್ಚ್,5,2025 (www.justkannada.in): ಆಸ್ಪತ್ರೆಯಲ್ಲಿ ಸರಿಯಾಗಿ ವೈದ್ಯರಿಲ್ಲದೆ ಗರ್ಭಿಣಿಯರು ಮತ್ತು ಬಾಣಂತಿಯರ ಪರದಾಟ ನಡೆಸುತ್ತಿರುವ ಪರಿಸ್ಥಿತಿ ನಂಜನಗೂಡು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದೆ.
ಸದ್ಯ ಗರ್ಭಿಣಿಗೆ ಆಂಬ್ಯುಲೆನ್ಸ್ ನಲ್ಲೇ ಚಿಕಿತ್ಸೆ ನೀಡಿರುವ ಘಟನೆ ನಂಜನಗೂಡು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ . ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಿಯಾಗಿ ವೈದ್ಯರಿಲ್ಲದೆ ಹಾಗೂ ವೈದ್ಯರ ನಿರ್ಲಕ್ಷ್ಯತನದಿಂದ ಗರ್ಭಿಣಿಯರು, ಬಾಣಂತಿಯರಿಗೆ ನಿತ್ಯ ನರಕ ಅನುಭವಿಸುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ ಅವರು, ನಂಜನಗೂಡು ತಾಲ್ಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೂ ದೊಡ್ಡಾಸ್ಪತ್ರೆಯಾಗಿದೆ. ಸಾಕಷ್ಟು ಗರ್ಭಿಣಿ ಮತ್ತು ಬಾಣಂತಿಯರು ಗಡಿ ಭಾಗದಿಂದಲೂ ಇಲ್ಲಿಗೆ ಬರುತ್ತಾರೆ. ಆದರೆ, ಉತ್ತಮ ಸೇವೆ ಸಿಗುತ್ತಿಲ್ಲ. ರಾತ್ರಿಯ ಪಾಳಿಯಲ್ಲಿ ವೈದ್ಯರಿಲ್ಲ, ಬೆಳಿಗ್ಗೆ ಆಸ್ಪತ್ರೆಗೆ ಬಂದರು ವೈದ್ಯರ ದರ್ಶನವಾಗಿಲ್ಲ. ಆಸ್ಪತ್ರೆಯಲ್ಲಿರುವ ಇಬ್ಬರು ಮಹಿಳಾ ವೈದ್ಯಾಧಿಕಾರಿಗಳ ಕಾರ್ಯವೈಖರಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆಯಲ್ಲಿ ವೈದ್ಯಕೀಯ ಸೇವೆ ಸ್ಥಗಿತವಾಗಿದ್ದು, ಗರ್ಭಿಣಿ ಮತ್ತು ಬಾಣಂತಿಯರು ಬಂದರೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರಿಲ್ಲದ ಕಾರಣ ಇಂದು ಆಂಬುಲೆನ್ಸ್ ನಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ನಂತರ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತು ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮತ್ತು ಎಕ್ಸರೇ ಸೇವೆ ಇದ್ದರೂ ಕೂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ಥಗಿತವಾಗಿದ್ದು, ಸ್ಕ್ಯಾನಿಂಗ್ ಮತ್ತು ಎಕ್ಸರೇಗೆ ಖಾಸಗಿ ಆಸ್ಪತ್ರೆಗಳತ್ತ ಕಳುಹಿಸುತ್ತಿದ್ದಾರೆ. ಅಲ್ಲದೆ ಔಷಧಿಗಳನ್ನು ಖಾಸಗಿ ಮೆಡಿಕಲ್ ಗೆ ಬರೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಕೇಳಿ ಬಂದಿದೆ. ಸಮಯಕ್ಕೆ ಸರಿಯಾಗಿ ಬಾರದೆ ನಿರ್ಲಕ್ಷ್ಯ ವಹಿಸಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಸವಟ್ಟಿಗೆ ನಾಗೇಂದ್ರ ಒತ್ತಾಯಿಸಿದ್ದಾರೆ.
Key words: Nanjanagudu, Hospital, Pregnant woman, treated, ambulance
The post ಗರ್ಭಿಣಿಗೆ ಆಂಬ್ಯುಲೆನ್ಸ್ ನಲ್ಲೇ ಚಿಕಿತ್ಸೆ: ವೈದ್ಯರ ನಿರ್ಲಕ್ಷ್ಯ: ಸೂಕ್ತ ಕ್ರಮಕ್ಕೆ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.