ಮಂಡ್ಯ,ಜೂನ್,27,2025 (www.justkannada.in): ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗುತ್ತಿದ್ದು, ಜೂನ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳು ಜೂನ್ 30 ರಂದು ಬೆಳಿಗ್ಗೆ 10.30 ಗಂಟೆಯ ನಂತರ ಕೆಆರ್.ಎಸ್ ಗೆ ಆಗಮಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ. ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದರು.
ವೇದಿಕೆ, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ
ಸರ್ಕಾರ ಇ- ಆಫೀಸ್ ನಲ್ಲಿ ಕಾರ್ಯನಿರ್ವಹಿಸಲು ಅವಶ್ಯಕವಿರುವ ಲ್ಯಾಪ್ ಟಾಪ್ ಅನ್ನು ಜಿಲ್ಲೆಯ 185 ಗ್ರಾಮ ಆಡಳಿತಾಧಿಕಾರಿಗಳಿಗೆ ಒದಗಿಸಿದ್ದು, ಸಂಕೇತಿಕವಾಗಿ ಗ್ರಾಮ ಆಡಳಿತಾಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಲ್ಯಾಪ್ ಟಾಪ್ ವಿತರಿಸಿದರು.
ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದಲ್ಲಿ ಸರ್ಕಾರಿ ಕೆಲಸಗಳನ್ನು ಇ- ಆಫೀಸ್ ಮೂಲಕ ನಿರ್ವಹಿಸಬೇಕಿದ್ದು, ಕೆಲಸವನ್ನು ಪಾರದರ್ಶಕ ಹಾಗೂ ದಕ್ಷತೆಯಿಂದ ನಿರ್ವಹಿಸಿ ಎಂದರು.
ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳ ಗಣಕೀಕರಣ ಪ್ರಕ್ರಿಯೆ ತಾಲ್ಲೂಕು ಕಚೇರಿಗಳಲ್ಲಿ ನಡೆಯುತ್ತಿದ್ದು, ಮಂಡ್ಯ ತಾಲ್ಲೂಕು ಕಚೇರಿಯಿಂದ ಸಂಕೇತಿಕವಾಗಿ ಗಣಕೀಕೃತ ಪ್ರತಿಯನ್ನು ಸಚಿವ ಚಲುವರಾಯಸ್ವಾಮಿ ವಿತರಿಸಿದರು.
ಸಭೆಯಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕಾ.ನೀ.ನಿ.ನಿ ಅಧೀಕ್ಷಕ ಅಭಿಯಂತರ ರಘುರಾಮ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Key words: CM Siddaramaiah, KRS, Minister, N. Chaluvarayaswamy
The post ಜೂ. 30 ರಂದು ಕೆ.ಆರ್.ಎಸ್ ಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಸಚಿವ ಎನ್.ಚಲುವರಾಯಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.