ಬೆಂಗಳೂರು,ಫೆಬ್ರವರಿ,21,2025 (www.justkannada.in): 2024ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇಚ್ಛೆ/ಆಯ್ಕೆಗಳನ್ನು (ಆಪ್ಷನ್) ದಾಖಲಿಸಲು ಫೆ.24ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ ನಂತರ ರದ್ದುಪಡಿಸಿಕೊಂಡ ಸೀಟು ಹಾಗೂ ಹಂಚಿಕೆಯಾಗದೆ ಉಳಿದಿರುವ ಸೀಟುಗಳನ್ನು ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಈ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಮುಂಗಡವಾಗಿ 5 ಲಕ್ಷ ರೂಪಾಯಿ (ಕಾಷನ್ ಡೆಪಾಸಿಟ್) ಪಾವತಿಸಬೇಕು ಎಂದು ಅವರು ವಿವರಿಸಿದ್ದಾರೆ.
ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಫೆ.24ರ ರಾತ್ರಿ 8ಕ್ಕೆ ಪ್ರಕಟಿಸಲಾಗುತ್ತದೆ. ಫೆ.25ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಶುಲ್ಕ ಪಾವತಿಸಿ, ಕಾಲೇಜಿಗೆ ವರದಿ ಮಾಡಿಕೊಳ್ಳಲು ಫೆ.28 ಕೊನೆ ದಿನ. ಎಂಸಿಸಿ ಸೂಚನೆ ಅನ್ವಯ ಈ ದಿನಾಂಕ ವಿಸ್ತರಣೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸೀಟು ಹಂಚಿಕೆ ನಂತರ ಮುಂಗಡ ಹಣವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಲಾಗುತ್ತದೆ. ಸೀಟು ಹಂಚಿಕೆ ನಂತರ ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದಲ್ಲಿ ಮುಂಗಡ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೆ, ದಂಡ ಕೂಡ ವಿಧಿಸಲಾಗುತ್ತದೆ. ಅಂತಹವರನ್ನು ಮುಂದಿನ ವರ್ಷದ ಎಂಸಿಸಿ ಕೌನ್ಸೆಲಿಂಗ್ ಸೇರಿದಂತೆ ಪಿಜಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಿರ್ಬಂಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೆಇಎ ಅಥವಾ ಎಂಸಿಸಿಯಿಂದ ಅಥವಾ ಇತರೆ ರಾಜ್ಯಗಳಲ್ಲಿ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ಇಟ್ಟುಕೊಳ್ಳದೇ ಇರುವವರು ಮತ್ತು ಎಂಸಿಸಿಯ ಮೂರನೇ ಅಥವಾ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಸೀಟು ಹಂಚಿಕೆಯಾಗದಿರುವವರು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಬಹುದು. ಕೆಇಎ ಮೂಲಕ ಪ್ರೀ ಕ್ಲಿನಿಕಲ್/ ಪ್ಯಾರಾ ಕ್ಲಿನಿಕಲ್ ಸೀಟು ಪಡೆದವರೂ ಭಾಗವಹಿಸಬಹುದು ಎಂದು ಅವರು ವಿವರಿಸಿದ್ದಾರೆ.
ಮಾಪ್ ಅಪ್ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ, ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಮತ್ತು ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಸುತ್ತಿನಲ್ಲಿ ಇನ್ನೂ ಉತ್ತಮ ಸೀಟಿಗೆ ಸೇರಲು ಆಸಕ್ತಿ ಇರುವವರು ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಲು ಫೆ.23ರೊಳಗೆ ಮತ್ತೊಮ್ಮೆ 500 ರೂಪಾಯಿ ಪಾವತಿಸಿ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕು. ಹೈಕೋರ್ಟ್ ಆದೇಶದಂತೆ ಈ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಪ್ ಅಪ್ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ಕೊನೆಯ ಇಚ್ಛೆ/ಆಯ್ಕೆ ಆಗಿರುತ್ತದೆ. ಅಭ್ಯರ್ಥಿಗಳು ಹೊಸದಾಗಿ ದಾಖಲಿಸುವ ಮೇಲ್ಪಟ್ಟ ಆದ್ಯತೆಗಳಲ್ಲಿ ಯಾವುದೇ ಸೀಟುಗಳು ಹಂಚಿಕೆಯಾದಲ್ಲಿ, ಹಂಚಿಕೆಯಾಗುವ ಸೀಟಿಗೆ ಪ್ರವೇಶ ಪಡೆಯಬೇಕು ಮತ್ತು ಮಾಪ್ ಅಪ್ ಸುತ್ತಿನ ಪ್ರಸ್ತುತ ಹೊಂದಿರುವ ಸೀಟು ತಂತಾನೆ ರದ್ದಾಗುತ್ತದೆ. ಒಂದು ವೇಳೆ ಯಾವುದೇ ಸೀಟು ಹಂಚಿಕೆಯಾಗದೆ ಇದ್ದಲ್ಲಿ, ಮಾಪ್ ಅಪ್ ಸುತ್ತಿನಲ್ಲಿ ಹಂಚಿಕೆಯಾದ ಸೀಟೇ ಉಳಿಯುತ್ತದೆ ಎಂದು ಅವರು ವಿವರಿಸಿದ್ದಾರೆ.
ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ಹೊಸದಾಗಿ ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು. ಈ ಸಂದರ್ಭದಲ್ಲಿ ಶುಲ್ಕದ ವಿನ್ಯಾಸವನ್ನು ಕಡ್ಡಾಯವಾಗಿ ನೋಡಬೇಕು. ಸೀಟು ಹಂಚಿಕೆ ಫಲಿತಾಂಶದ ನಂತರ ಸೀಟು ರದ್ದುಪಡಿಸಿಕೊಂಡರೆ ವಿಧಿಸುವ ದಂಡದ ವಿವರಗಳನ್ನು ಗಮನದಲ್ಲಿ ಇಟ್ಟುಕೊಂಡೇ ಇಚ್ಛೆ/ಆಯ್ಕೆಗಳನ್ನು ನಮೂದಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.
Key words: PG, Medical, Seat allocation, stray vacancy round
The post ಪಿಜಿ ವೈದ್ಯಕೀಯ: ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ: ತಮ್ಮ ಆಯ್ಕೆ ದಾಖಲಿಸಲು ಫೆ.24 ಕೊನೆ ದಿನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.