ನವದೆಹಲಿ,ಜೂನ್,24,2025 (www.justkannada.in): ಬೆಲೆ ಕುಸಿತದಿಂದ ತೀವ್ರ ಕಂಗಾಲಾಗಿರುವ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.
ನಫೆಡ್ ಮೂಲಕ ಮಾವು ಖರೀದಿ ಮಾಡಬೇಕು ಹಾಗೂ ತಕ್ಷಣವೇ ಕನಿಷ್ಠ ಬೆಂಬಲ ಬೆಲೆ ಘೊಷಣೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಕೃಷಿ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಾವು ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಬೆಲೆ ಸಿಗದ ಕಾರಣಕ್ಕೆ ಮಾವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಇಂಥ ಕಷ್ಟಕಾಲದಲ್ಲಿ ತಾವು ರೈತರ ನೆರವಿಗೆ ಧಾವಿಸಬೇಕು ಎಂದು ಕುಮಾರಸ್ವಾಮಿ ಅವರು ಕೋರಿದ್ದಾರೆ.
ಸದ್ಯಕ್ಕೆ ಕೇಂದ್ರ ಸರಕಾರ ನೆರವಿಗೆ ಬಾರದಿದ್ದರೆ ಬೆಳೆಗಾರರಿಗೆ ಬೇರೆ ನೆರವಿನ ಖಾತರಿ ಇಲ್ಲ. ಕೂಡಲೇ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ನಫೆಡ್ ಮತ್ತು ಎನ್‍ಸಿಸಿಎಫ್ ಮೂಲಕ ಕೂಡಲೇ ಮಾವು ಖರೀದಿ ಆರಂಭಿಸಬೇಕು, ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ವಿನಂತಿ ಮಾಡಿದ್ದಾರೆ.
ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. ಮಾವನ್ನು ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಹೆಚ್ಚಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು 8ರಿಂದ 10 ಲಕ್ಷ ಟನ್ ಮಾವು ಈ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ದುರದೃಷ್ಟದ ಸಂಗತಿ ಎಂದರೆ, ಹವಾಮಾನ ವೈಪರೀತ್ಯದಿಂದ ರೋಗರುಜಿನ ತಗುಲಿ ಪ್ರಸಕ್ತ ವರ್ಷದಲ್ಲಿ ಮಾವಿನ ಇಳುವರಿ ಶೇ.30ರಷ್ಟು ಕಡಿಮೆಯಾಗಿದೆ ಎಂದ ಅಂಶವನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Key words: help, mango growers, H.D. Kumaraswamy, Letter, Union Agriculture Minister
The post ಮಾವು ಬೆಳೆಗಾರರ ನೆರವಿಗೆ ಮನವಿ: ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ ಹೆಚ್.ಡಿ.ಕುಮಾರಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.