ಬೆಂಗಳೂರು, ಫೆಬ್ರವರಿ, 27,2025 (www.justkannada.in): ರಾಜ್ಯದಲ್ಲಿ ನೀರಿನ ಸಮಸ್ಯೆ ಇರುವಾಗ ಪಕ್ಕದ ರಾಜ್ಯಕ್ಕೆ ನೀರು ಹರಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಮೀರ್ ಸಾಧಿಕ್ ನಂತೆ ಜನರಿಗೆ ದ್ರೋಹ ಬಗೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್ ಅವರು, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಸುಮಾರು ಒಂದೂವರೆ ಟಿಎಂಸಿ ನೀರನ್ನು ತೆಲಂಗಾಣಕ್ಕೆ ಕಾಂಗ್ರೆಸ್ ಸರ್ಕಾರ ಹರಿಸಿದೆ. ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ತೃಪ್ತಿಪಡಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕನ್ನಡಿಗರ ಹಿತವನ್ನು ಕಡೆಗಣಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಭೆ ಮಾಡುತ್ತಿದ್ದಾರೆ. ಈಗ ಅದೇ ಸರ್ಕಾರದ ಸಚಿವರು ನೀರು ಹರಿಸಿರುವುದು ಜನರಿಗೆ ಮಾಡಿರುವ ದ್ರೋಹ. ಮೀರ್ ಸಾಧಿಕ್ ನಂತೆ ಸರ್ಕಾರ ವರ್ತಿಸಿರುವುದನ್ನು ರೈತರು ಕ್ಷಮಿಸುವುದಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವಾಗ ನೀರು ಹರಿಸಿರುವುದರಿಂದ ಜನರಿಗೆ ತೊಂದರೆಯಾಗಲಿದೆ. ಒಬ್ಬೊಬ್ಬ ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಸಿಲ್ಲ. ಖಾಯಂ ಮಾಡುತ್ತೇವೆ, ಸಂಬಳ ನೀಡುತ್ತೇವೆಂದು ಭರವಸೆ ನೀಡಿ ಈಗ ಕೈ ಕೊಟ್ಟಿದ್ದಾರೆ. ಮೋಸದ ಆಶ್ವಾಸನೆಗಳಿಂದಾಗಿ ಭಿಕ್ಷೆ ಬೇಡುವ ಮಟ್ಟಕ್ಕೆ ಸರ್ಕಾರ ಬಂದಿದೆ. ಬೆಂಗಳೂರಿನ ಆಸ್ಪತ್ರೆಗಳ ವೈದ್ಯರಿಗೆ ವೇತನ ನೀಡಿಲ್ಲ. ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ. ಹಾಲಿನ ಪ್ರೋತ್ಸಾಹಧನದ ಬಾಕಿ ಉಳಿದಿದೆ. ಇದರ ಜೊತೆಗೆ ತೆರಿಗೆಗಳನ್ನು ಏರಿಸಲಾಗಿದೆ. ಬೆಂಗಳೂರಿನಲ್ಲಿ ಇ-ಖಾತಾ ಮಾಡಿಸಲು 12 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ಹೊಸ ವ್ಯವಸ್ಥೆಯಲ್ಲಿ ಇದು ಸಾಮಾನ್ಯ ಎಂದು ಹೇಳುತ್ತಾರೆ. ಏಜೆಂಟ್ ಗಳು ಜನರಿಂದ ಹಣ ವಸೂಲಿ ಮಾಡುತ್ತಿದ್ದು, ಇಂತಹವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ಮಹಾ ಕುಂಭಮೇಳಕ್ಕೆ ಹೋಗುವುದು ಬಿಜೆಪಿಗೆ ಸಾಮಾನ್ಯ. ಡಿಸಿಎಂ ಡಿ.ಕೆ.ಶಿವಕುಮಾರ್ ಏಕೆ ಹೋಗುತ್ತಾರೆ ಎಂದು ಅವರ ಪಕ್ಷದವರೇ ಪ್ರಶ್ನಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಕೀಳಾಗಿ ಮಾತಾಡಿದ್ದು, ಆ ಮಾತನ್ನು ಡಿ.ಕೆ.ಶಿವಕುಮಾರ್ ಧಿಕ್ಕರಿಸಿದ್ದಾರೆ. ಈಶ ಫೌಂಡೇಶನ್ ನ ಕಾರ್ಯಕ್ರಮಕ್ಕೂ ಹೋಗಿದ್ದಾರೆ. ಅವರ ಮನಸ್ಸಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಇದು ಪಕ್ಷದ ಆಂತರಿಕ ವಿಚಾರ. ಕಾಂಗ್ರೆಸ್‌ನಲ್ಲಿ ಕರಿ ಬೆಕ್ಕಿನ ಕಾಟ ಹೆಚ್ಚಾಗಿದೆ. ಅದರ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಉತ್ತರಿಸಬೇಕು ಎಂದು ವ್ಯಂಗ್ಯವಾಡಿದರು.
ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದಾಗಲೇ ಎಲ್ಲರೂ ಸುಮ್ಮನಿದ್ದರು. ಪಕ್ಷದೊಳಗಿನ ಆಂತರಿಕ ಕಚ್ಚಾಟ ಎಲ್ಲರಿಗೂ ಗೊತ್ತಾಗಿದೆ. ಇದು ಮುಖ್ಯಮಂತ್ರಿ ಬದಲಾಗುವ ಸ್ಥಿತಿಯ ಲಕ್ಷಣ. ಸಿಎಂ ಸಿದ್ದರಾಮಯ್ಯ ಅವರು ವೀಕ್ ಆಗಿದ್ದಾರೆ. ಆದ್ದರಿಂದ ತಾವೇ ಮಾಸ್ ಲೀಡರ್ ಎಂಬ ಸಂದೇಶವನ್ನು ಡಿ.ಕೆ.ಶಿವಕುಮಾರ್ ನೀಡಿದ್ದಾರೆ ಎಂದರು.
Key words: Congress government, betrayed, people, Mir Sadiq, R. Ashok
The post ಮೀರ್ ಸಾಧಿಕ್ ನಂತೆ ಜನರಿಗೆ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.