ಮೈಸೂರು,ಜೂನ್,20,2025 (www.justkannada.in): ಮೈಸೂರು ನಗರವನ್ನು ಯೋಗ ನಗರವನ್ನಾಗಿಸುವ ಕಾಲ ಬರುತ್ತಿದೆ ಎಂದು ಸರಕಾರಿ ಆಯುರ್ವೇದ ಆಸ್ಪತ್ರೆ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಸೀತಾಲಕ್ಷ್ಮಿ ಹೇಳಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಮೇಟಗಳ್ಳಿಯಲ್ಲಿರುವ ಜಿಎಸ್‌ಎಸ್‌ಎಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ವೈಜ್ಞಾನಿಕ ಪ್ರಾಣಾಯಾಮ ಫೌಂಡೇಶನ್ ಟ್ರಸ್ಟ್ ವತಿಯಿಂದ ಹಾಗೂ ಎಟಿಎಂಇ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಆರ್.ವಿ ಇಂಜಿನಿಯರಿಂಗ್ ಕಾಲೇಜು ಮತ್ತು ಭಾರತೀಯ ಯೋಗ ಸಂಘಟನೆ ಸಹಕಾರದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಯೋಗ ಪ್ರಾಣೋತ್ಸವ-2025 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯೋಗ ಜನರ ಬದುಕನ್ನು ಸದೃಢವಾಗಿಸುವಲ್ಲಿ ಅತ್ಯಂತ ಪರಿಣಾಮಾತ್ಮಕ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರು ಯೋಗ ಹಾಗೂ ಪ್ರಾಣಾಯಾಮದ ಮೊರೆ ಹೋಗಬೇಕು ಆಗ ಮಾತ್ರ ಆರೋಗ್ಯ ಜೀವನ ಸಾಧ್ಯ, . ಪ್ರಸ್ತುತ ಎಲ್ಲರೂ ಒತ್ತಡದ ಬದುಕಿನಲ್ಲಿ ಸಿಲುಕಿದ್ದಾರೆ. ನಮಗೆ ನಾವು ಸಮಯವನ್ನು ಮೀಸಲಿರಸದಿದ್ದರೆ, ಮುಂದೆ ಆಸ್ಪತ್ರೆಗಳಿಗೆ ಹಣ ವ್ಯಯ ಮಾಡುವ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಕಾರ್ಯಕ್ರಮದಲ್ಲಿ ವಿದುಷಿ ಡಾ. ತುಳಸಿ ರಾಮಚಂದ್ರ ಅವರ ನೇತೃತ್ವದಲ್ಲಿ ಪ್ರಾಣ ತತ್ವ ವಿಕಾಸ – ಯೋಗ ನೃತ್ಯವನ್ನು ನಡೆಸಿಕೊಟ್ಟರು. ವೈಜ್ಞಾನಿಕ ಪ್ರಾಣಾಯಾಮದ ಸೆಮಿನಾರ್ ನಲ್ಲಿ ಆರೋಗ್ಯಕ್ಕಾಗಿ ಪ್ರಾಣಾಯಾಮ ಶೀರ್ಷಿಕೆಯಡಿ ಪೇಪರ್ ಪ್ರೆಸೆಂಟ್ ಅನ್ನು 42 ಮಂದಿ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕ್ಯಾನ್ಸರ್ ಕೇರ್ ಇಂಡಿಯಾ ನ್ಯೂರೋ ಸರ್ಜನ್ ಡಾ. ರಾಜಶೇಖರ್ ರೆಡ್ಡಿ ಪೊರೆಡ್ಡಿ, ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮಹಾ ಮೇದಾನಂದಜಿ ಸ್ವಾಮಿಜೀ, ಎಟಿಎಂಇ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಲ್.ಬಸವರಾಜ್, ವೈಜ್ಞಾನಿಕ ಪ್ರಾಣಾಯಾಮ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕಿ ಡಾ.ದೇವಕಿ ಮಾಧವ್ ಉಪಸ್ಥಿತರಿದ್ದರು.
Key words: Mysore, International Yoga Day, GSSS Engineering and Technology College
The post ಮೈಸೂರನ್ನು ಯೋಗ ನಗರವನ್ನಾಗಿಸುವ ಕಾಲ ಬರುತ್ತಿದೆ- ಡಾ.ಸೀತಾಲಕ್ಷ್ಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.