ಮೈಸೂರು,ಅಕ್ಟೋಬರ್,1,2026 (www.justkannada.in) ಮೈಸೂರು ಮಹಾನಗರ ಪಾಲಿಕೆ, ರೋಟರಿ ಉತ್ತರ ವಲಯ, ಅನಿಕೇತನ ಸೇವಾ ಟ್ರಸ್ಟ್ ಹಾಗೂ ಜಿಎಸ್ಎಸ್ ಯೋಗ ಕೇಂದ್ರದ ಸಹಯೋಗದಲ್ಲಿ ಅ.2ರಂದು ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಕುವೆಂಪು ನಗರದ ಜೋಡಿ ರಸ್ತೆಯಲ್ಲಿರುವ ಕುವೆಂಪು ಪ್ರತಿಮೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂದು ಬೆಳಗ್ಗೆ 7 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದು ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ನಗರಪಾಲಿಕೆ ಸದಸ್ಯ ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.
ಸ್ವಚ್ಛತೆ ದೇವರಿಗೆ ಸಮಾನ, ಸ್ವಾತಂತ್ರ್ಯದಷ್ಟೇ ಸ್ವಚ್ಛತೆಯೂ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನಂಬಿಕೆಯಾಗಿತ್ತು. ಗಾಂಧೀಜಿಯವರ ಕನಸು ಕೇವಲ ರಾಜಕೀಯ ಸ್ವಾತಂತ್ರ್ಯಕ್ಕೆ ಸೀಮಿತವಾಗಿರಲಿಲ್ಲ; ಸ್ವಚ್ಛ ಹಾಗೂ ಆರೋಗ್ಯಕರ ಭಾರತ ನಿರ್ಮಾಣವೂ ಅವರ ಆಶಯವಾಗಿತ್ತು.
ರಸ್ತೆಯಲ್ಲಿ ಕಸ ಎಸೆಯದಿರುವುದು, ನದಿಗಳಿಗೆ ತ್ಯಾಜ್ಯ ಹಾಕದಿರುವುದು ಸೇರಿದಂತೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಗಾಂಧೀಜಿಯವರಿಗೆ ನಿಜವಾದ ಗೌರವ ಸಲ್ಲಿಸಬಹುದು. ಆದ್ದರಿಂದ ಈ ಬಾರಿಯ ಗಾಂಧಿ ಜಯಂತಿಯನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ, ಸ್ವಚ್ಛತಾ ಕಾರ್ಯದ ಮೂಲಕ ಆಚರಿಸೋಣ ‘ನನ್ನ ಸುತ್ತಮುತ್ತಲಿನ 10 ಅಡಿ ಜಾಗವನ್ನು ನಾನೇ ಸ್ವಚ್ಛವಾಗಿಡುತ್ತೇನೆ’ ಎಂಬ ಸಂಕಲ್ಪವನ್ನು ಈ ಗಾಂಧಿ ಜಯಂತಿಯಂದು ನಾವೆಲ್ಲರೂ ಮಾಡೋಣ ಎಂದು ಕರೆ ನೀಡಿದ್ದಾರೆ.
ಮನೆಯ ಸುತ್ತಮುತ್ತ, ಅಂಗಳ ಹಾಗೂ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಸ್ವಚ್ಛತೆಯ ಅಭಿಯಾನವನ್ನು ನಮ್ಮ ಮನೆಗಳಿಂದಲೇ ಆರಂಭಿಸೋಣ. ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜು ಆವರಣ, ಆಟದ ಮೈದಾನ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ಕಾರ್ಯದಲ್ಲಿ ಭಾಗವಹಿಸೋಣ. ‘ದಿನದಲ್ಲಿ ಒಂದು ಗಂಟೆ ದೇಶಕ್ಕಾಗಿ ಎಂಬ ಮನೋಭಾವದೊಂದಿಗೆ ಸ್ವಚ್ಛ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಕೆ.ವಿ ಮಲ್ಲೇಶ್ ತಿಳಿಸಿದ್ದಾರೆ.




