ಬೆಂಗಳೂರು,ಫೆಬ್ರವರಿ,11,2025 (www.justkannada.in): ಇಂದು ಸಂಜೆ ಉದ್ಘಾಟನೆ ಆಗಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಜಾಹೀರಾತಿನಲ್ಲಿ ಉದ್ಘಾಟಕರಾದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಫೋಟೊ ಹಾಕದೇ ಶಿಷ್ಟಾಚಾರ ಪಾಲನೆಯಲ್ಲೂ ಕಾಂಗ್ರೆಸ್ ಸರ್ಕಾರದ ಕೀಳು ರಾಜಕೀಯ ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಈ ಕುರಿತು ಟ್ವೀಟ್ ಮಾಡಿರುವ ಆರ್. ಅಶೋಕ್, ಇಂದು ಸಂಜೆ ಉದ್ಘಾಟನೆ ಆಗಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ದಿನಪತ್ರಿಕೆಗಳಲ್ಲೂ ಫುಲ್ ಪೇಜ್ ಜಾಹೀರಾತು ನೀಡಿದೆ. ಸಮಾವೇಶಕ್ಕೆ ನಮ್ಮ ಶುಭ ಹಾರೈಕೆಗಳು. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿ, ಕಳೆದ 20 ತಿಂಗಳುಗಳಿಂದ ಸಂಪೂರ್ಣವಾಗಿ ಸ್ಥಬ್ಧವಾಗಿರುವ ರಾಜ್ಯದ ಅಭಿವೃದ್ಧಿಗೆ ಇನ್ನು ಮುಂದೆಯಾದರೂ ಚುರುಕು ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಆದರೆ ಹೂಡಿಕೆದಾರರ ಸಮಾವೇಶದ ಉದ್ಘಾಟನೆ ನೆರವೇರಿಸಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಫೋಟೋ ಜಾಹೀರಾತಿನಲ್ಲಿ ಯಾಕಿಲ್ಲ? ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಫೋಟೋ ಯಾಕೆ ಹಾಕಿಲ್ಲ? ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕೇವಲ ಸಿಎಂ, ಡಿಸಿಎಂ ಹಾಗು ಕೈಗಾರಿಕಾ ಸಚಿವರ ಫೋಟೋ ಹಾಕಲು ಹೂಡಿಕೆದಾರರ ಸಮಾವೇಶ ರಾಜಕೀಯ ಕಾಂಗ್ರೆಸ್ ಪಕ್ಷದ ರಾಜಕೀಯ ಸಮಾವೇಶವಲ್ಲ. ಇಂತಹ ಜಾಗತಿಕ ಸಮಾವೇಶದ ಜಾಹೀರಾತಿನಲ್ಲೂ ಕ್ಷುಲ್ಲಕ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಅಂತ ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಪ್ರಥಮ ಪ್ರಜೆಯಾಗಿರುವ ರಾಜ್ಯಪಾಲರ ಫೋಟೋ ಹಾಕುವ ಕನಿಷ್ಠ ಶಿಷ್ಟಾಚಾರವನ್ನೂ ಪಾಲನೆ ಮಾಡುವ ಸೌಜನ್ಯವಿಲ್ಲ. ಈ ಶಿಷ್ಟಾಚಾರದ ಕೀಳು ರಾಜಕೀಯ ಒಂದು ಕಡೆಯಾದರೆ ಮತ್ತೊಂದು ಕಡೆ ಹೂಡಿಕೆದಾರರ ಸಮಾವೇಶಕ್ಕೆ ಪ್ರವೇಶಾತಿ ಶುಲ್ಕ ವಿಧಿಸುವ ಮೂಲಕ ರಾಜ್ಯ ಸರ್ಕಾರ ಎಷ್ಟು ಪಾಪರ್ ಆಗಿದೆ ಎಂದು ಮತ್ತೊಮ್ಮೆ ಪ್ರದರ್ಶನ ಮಾಡಿದೆ.
ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ನವೋದ್ಯಮ ಪ್ರಾರಂಭಿಸಬೇಕು ಎಂಬ ಉತ್ಸಾಹದಲ್ಲಿರುವ ಯುವಕ, ಯುವತಿಯರಿಗೆ, ವೃತ್ತಿಪರರಿಗೆ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಒಂದು ಉತ್ತಮ ಕಲಿಕಾ ಅವಕಾಶವೂ ಹೌದು, ತಮ್ಮ ಕಾರ್ಯ ಕ್ಷೇತ್ರದಲ್ಲಿರುವ ಇತರರನ್ನು ಸಂಪರ್ಕ ಮಾಡಿ ನೆಟ್ವರ್ಕಿಂಗ್ ಮಾಡಿಕೊಳ್ಳುವ ವೇದಿಕೆಯೂ ಹೌದು. ಆದರೆ ಹೂಡಿಕೆದಾರರ ಸಮಾವೇಶಕ್ಕೆ ಪ್ರವೇಶ ಶುಲ್ಕ ವಿಧಿಸುವ ಮೂಲಕ ಇವರೆಲ್ಲರಿಗೂ ಸಮಾವೇಶದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಈ ದರಿದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.
ನಮ್ಮ ರಾಜ್ಯದ ಯುವ ಜನಾಂಗಕ್ಕೆ ಈ ಹೂಡಿಕೆದಾರರ ಸಮಾವೇಶದಲ್ಲಿ ಪ್ರವೇಶ ಇಲ್ಲದ ಮೇಲೆ ಈ ಸಮಾವೇಶ ಮಾಡುತ್ತಿರುವುದಾದರೂ ಯಾರಿಗೋಸ್ಕರ? ಮೂರು ದಿನ ಫೋಟೋ ಶೂಟ್ ಮಾಡಿಸಿಕೊಂಡು ಪುಕ್ಕಟೆ ಪ್ರಚಾರ ಪಡೆಯೋದಕ್ಕಾ? ಅಥವಾ ಗ್ಯಾರೆಂಟಿಗಳಿಂದ ದಿವಾಳಿ ಆಗಿರುವ ಸರ್ಕಾರದ ಬೊಕ್ಕಸವನ್ನು ಪ್ರವೇಶ ಶುಲ್ಕ ಮೂಲಕ ವಸೂಲಿ ಮಾಡುವುದಕ್ಕಾ? ಎಂದು ಆರ್.ಅಶೋಕ್ ಗುಡುಗಿದ್ದಾರೆ.
Key words: Invest Karnataka 2025, Congress government, low politics, R. Ashok
The post ಶಿಷ್ಟಾಚಾರ ಪಾಲನೆಯಲ್ಲೂ ಕಾಂಗ್ರೆಸ್ ಸರ್ಕಾರದ ಕೀಳು ರಾಜಕೀಯ-ಆರ್.ಅಶೋಕ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.