ಮೈಸೂರು,ಅಕ್ಟೋಬರ್,1,2026 (www.justkannada.in) ಕೇಂದ್ರ ಪುರಸ್ಕೃತ ‘ಸ್ವಚ್ಛತೆಯೇ ಸೇವೆ’ (Swachhata Hi Seva) ಅಭಿಯಾನದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಹಾಗೂ ಕಸ ಸಂವೇದನಾಶೀಲ ಪ್ರದೇಶಗಳ ಪರಿವರ್ತನಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮಹಾನಗರ ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ. ಅವರು ಬೆಳಗ್ಗೆ 7 ಗಂಟೆಗೆ ಹಿನಕಲ್ ಫ್ಲೈಓವರ್‌ನಿಂದ ಪರಿಶೀಲನಾ ಕಾರ್ಯ ಆರಂಭಿಸಿದರು. ಹೊರ ವರ್ತುಲ ರಸ್ತೆಯ ವಿವಿಧೆಡೆ ರಸ್ತೆ ಬದಿ ತ್ಯಾಜ್ಯ, ಕಳೆ-ಪೊದೆಗಳು ಹಾಗೂ ನಾಗರಿಕ ಸಮಸ್ಯೆಗಳನ್ನು ಪರಿಶೀಲಿಸಿದರು.
ಬಳಿಕ ಕೇಸರೆ ಎಸ್ ಟಿಪಿ (STP) ಸಮೀಪ ‘ಸ್ವಚ್ಛತೆಯೇ ಸೇವೆ’ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.
ನಂತರ ವಿದ್ಯಾಶಂಕರ ನಗರದ ಜಿವಿಪಿ (GVP -Garbage Vulnerable Point) ಪ್ರದೇಶಕ್ಕೆ ಭೇಟಿ ನೀಡಿ, ಕಸಮುಕ್ತ ಹಾಗೂ ಶಾಶ್ವತ ಪರಿವರ್ತನಾ ಕ್ರಮಗಳನ್ನು ಪರಿಶೀಲಿಸಲಾಯಿತು.
ಲ್ಯಾನ್ಸ್ ಟೊರ್ಮ್ ಬಿಲ್ಡಿಂಗ್ (Landstorm Building) ಸಮೀಪದ ಬಯಲು ಮೂತ್ರ ವಿಸರ್ಜನೆ ಪ್ರದೇಶವನ್ನೂ ಪರಿಶೀಲಿಸಿದ ಆಯುಕ್ತರು, ಸ್ಥಳದ ಸ್ವಚ್ಛತೆ, ಸುಂದರೀಕರಣ ಹಾಗೂ ಅಶುಚಿತ್ವ ಮರುಕಳಿಸದಂತೆ ಕೈಗೊಂಡಿರುವ ಶಾಶ್ವತ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಕಸ ಸುರಿಯುವ ಹಾಗೂ ಬಯಲು ಮೂತ್ರ ವಿಸರ್ಜನೆ ನಡೆಯುವ ಸ್ಥಳಗಳನ್ನು ಗುರುತಿಸಿ ಶಾಶ್ವತವಾಗಿ ಪರಿವರ್ತಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಲ್ಲ; ಸಾರ್ವಜನಿಕರು ಮತ್ತು ಆಡಳಿತದ ನಿರಂತರ ಸಹಭಾಗಿತ್ವ ಅಗತ್ಯ ಎಂದು ಪಾಲಿಕೆ ಒತ್ತಿಹೇಳಿದೆ.
ಕಾರ್ಯಕ್ರಮದಲ್ಲಿ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು, ವಲಯ ಅಧಿಕಾರಿಗಳು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.




